ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಸಿಗುತ್ತಿಲ್ಲ | ನಷ್ಟದತ್ತ ಫಿಶ್‌ಮಿಲ್‌ಗಳು, ಕರಾವಳಿಯಲ್ಲಿ ಮತ್ತೊಂದು ಸಂಕಷ್ಟ

ಫಿಶ್‌ಮಿಲ್‌ಗಳಿಗೆ ತಟ್ಟಿದ ಬಿಸಿ; ಉತ್ಪಾದನೆ ಕುಸಿತ
Last Updated 21 ಅಕ್ಟೋಬರ್ 2019, 5:22 IST
ಅಕ್ಷರ ಗಾತ್ರ

ಉಡುಪಿ: ಮೀನುಗಾರಿಕೆ ಹಾಗೂ ಫಿಶ್‌ ಮಿಲ್‌ಗಳು ಪರಸ್ಪರ ಅವಲಂಬಿತ ಉದ್ಯಮಗಳು. ಮತ್ಸ್ಯೋದ್ಯಮಕ್ಕೆ ಹೊಡೆತ ಬಿದ್ದರೆ ಫಿಶ್‌ಮಿಲ್‌ಗಳು ನಷ್ಟದ ಹಾದಿ ಹಿಡಿಯುತ್ತವೆ. ಫಿಶ್‌ಮಿಲ್‌ಗಳು ಮುಚ್ಚಿದರೆ ಮೀನುಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈಗ ಎರಡೂ ಉದ್ಯಮಗಳಿಗೆ ಸಂಕಷ್ಟದ ಸಮಯ.

ಪ್ರಸಕ್ತ ಮೀನುಗಾರಿಕಾ ಋತು ಮೀನುಗಾರರ ಪಾಲಿಗೆ ಆಶಾದಾಯಕವಾಗಿಲ್ಲ. ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ಒಂದೂವರೆ ತಿಂಗಳು ತಡವಾಗಿ ಆರಂಭವಾಗಿತ್ತು. ತಡವಾದರೂ ಬಲೆಗೆ ಭರಪೂರ ಮೀನುಗಳು ಸಿಗಬಹುದು ಎಂಬ ಕಡಲ ಮಕ್ಕಳ ನಿರೀಕ್ಷೆ ಹುಸಿಯಾಗಿದೆ. ಸಮುದ್ರದಲ್ಲಿ ಮೀನಿನ ಕ್ಷಾಮ ಎದುರಾಗಿದ್ದು, ಬರಸಿಡಿಲು ಬಡಿದಂತಾಗಿದೆ.

ತಿನ್ನಲು ಯೋಗ್ಯವಲ್ಲದ ಕಾರ್ಗಿಲ್ ಮೀನು
ತಿನ್ನಲು ಯೋಗ್ಯವಲ್ಲದ ಕಾರ್ಗಿಲ್ ಮೀನು

ಕಡಲಿನಲ್ಲಿ ನಿರೀಕ್ಷಿತ ಪ್ರಮಾಣದ ಮೀನುಗಳು ಸಿಗುತ್ತಿಲ್ಲ. ತಿನ್ನಲು ಯೋಗ್ಯವಲ್ಲದ, ಕೆಟ್ಟ ವಾಸನೆಯಿಂದ ತುಂಬಿರುವ ಕಾರ್ಗಿಲ್‌ ಮೀನುಗಳು ಬೇಡವೆಂದರೂ ಬಲೆಗೆ ಬೀಳುತ್ತಿವೆ. ಬರಿಗೈಲಿ ಮರಳಬಾರದು ಎಂದು ಒಲ್ಲದ ಮನಸ್ಸಿನಿಂದ ಟನ್‌ಗಟ್ಟಲೆ ಕಾರ್ಗಿಲ್‌ ಮೀನುಗಳನ್ನು ಹೊತ್ತು ತರುತ್ತಿದ್ದಾರೆ.

ಮೀನುಗಾರರ ಸಂಕಟ ಒಂದೆಡೆಯಾದರೆ, ಫಿಶ್‌ಮಿಲ್‌ಗಳದ್ದು ಮತ್ತೊಂದು ಸಮಸ್ಯೆ. ಮೀನಿನ ಎಣ್ಣೆ, ಪೌಡರ್‌, ಕುಕ್ಕುಟೋದ್ಯಮ ಹಾಗೂ ಮತ್ಸ್ಯೋದ್ಯಮ ಆಹಾರ ತಯಾರಿಕೆಗೆ ಫಿಶ್‌ಮಿಲ್‌ಗಳಿಗೆ ಅಗತ್ಯವಾದ ಮೀನುಗಳ ಕೊರತೆ ಎದುರಾಗಿದೆ. ಪರಿಣಾಮ ಶೇ 50ರಷ್ಟು ವ್ಯಾಪಾರ ಕುಸಿದಿದೆ ಎನ್ನುತ್ತಾರೆ ಫಿಶ್‌ ಮಿಲ್‌ ಮಾಲೀಕರು.

ಭೂತಾಯಿ ಕೊರತೆ:ಕರಾವಳಿಯ ಪ್ರಸಿದ್ಧ ಭೂತಾಯಿ ಮೀನುಗಳಿಗೆ ಬರ ಎದುರಾಗಿದ್ದು, ಫಿಶ್‌ಮಿಲ್‌ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಭೂತಾಯಿ ಮೀನಿನಲ್ಲಿ ಎಣ್ಣೆಯ ಪ್ರಮಾಣ ಹೇರಳವಾಗಿದ್ದು, ಆರೋಗ್ಯಕ್ಕೆ ಪೂಕರವಾದ ಒಮೆಗಾ–3 ಅಂಶ ಹೆಚ್ಚಾಗಿದೆ. ಈ ಕಾರಣಕ್ಕೆ ಭೂತಾಯಿಗೆ ಫಿಶ್‌ಮಿಲ್‌ಗಳಿಂದ ಬೇಡಿಕೆ ಹೆಚ್ಚು.

ಆದರೆ, ಕಳೆದ ಮೂರು ವರ್ಷಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಭೂತಾಯಿ ಸಿಗುತ್ತಿಲ್ಲ. ಪರಿಣಾಮ ಮೀನಿನ ಉಪ ಉತ್ಪನ್ನಗಳ ತಯಾರಿಕೆ ಕುಸಿದಿದೆ. ಫಿಶ್‌ಮಿಲ್‌ಗಳ ನಷ್ಟದ ಹಾದಿ ಹಿಡಿಯುತ್ತಿವೆ ಮಲ್ಪೆಯ ರಾಜ್‌ ಫಿಶ್‌ಮಿಲ್ ಕಂಪೆನಿಯ ಮಾಲೀಕರಾದ ಪ್ರಮೋದ್ ಮಧ್ವರಾಜ್‌.

ಭೂತಾಯಿ ಕಡಿಮೆಯಾಗಿರುವುದಕ್ಕೆ ಅಸಾಂಪ್ರದಾಯಿಕ ಮೀನುಗಾರಿಕೆ ಕಾರಣವಿರಬಹುದು. ಸಂತಾನೋತ್ಪತ್ತಿ ಅವಧಿಯ ಮೀನುಗಾರಿಕೆ, ಸಣ್ಣ ಮೀನುಮರಿಗಳನ್ನೂ ಬಿಡದೆ ಹಿಡಿಯುವ ಅವೈಜ್ಞಾನಿಕ ಮೀನುಗಾರಿಕೆಯಿಂದ ಭೂತಾಯಿ ಹೆಚ್ಚಾಗಿ ಸಿಗುತ್ತಿಲ್ಲ ಎನ್ನುತ್ತಾರೆ ಪ್ರಮೋದ್ ಮಧ್ವರಾಜ್.

ಭೂತಾಯಿಯ ಬದಲಾಗಿ ಲಾಭದಾಯಕವಲ್ಲದ ಕಾರ್ಗಿಲ್‌ ಮೀನುಗಳು ಹೆಚ್ಚಾಗಿ ಮಿಲ್‌ಗಳಿಗೆ ಬರುತ್ತಿವೆ. ಇದರಿಂದ ಉತ್ಪಾದನೆ ಹಾಗೂ ಲಾಭದ ಪ್ರಮಾಣ ಕುಸಿತವಾಗಿದೆ ಎನ್ನುತ್ತಾರೆ ಅವರು.

ಫಿಶ್‌ಮಿಲ್‌ಗಳಿಗೆ ಹೋಗುವುದು ಏನು ?

ತಿನ್ನಲು ಯೋಗ್ಯವಾದ ಮೀನು ಮನುಷ್ಯನ ದೇಹ ಸೇರಿದರೆ, ಮೀನಿನ ತ್ಯಾಜ್ಯ ಫಿಶ್‌ಮಿಲ್‌ಗಳನ್ನು ಸೇರುತ್ತವೆ. ಕೊಳೆತ ಮೀನು, ರಫ್ತು ಮಾಡುವಾಗ ಉಳಿಯುವ ಮೀನಿನ ತಲೆ, ಬಾಲ ಫಿಶ್‌ಮಿಲ್‌ಗಳ ಪ್ರಮುಖ ಕಚ್ಛಾವಸ್ತು. ಈಚೆಗೆ ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿರುವ ಕಾರ್ಗಿಲ್‌ ಮೀನು ತಿನ್ನಲು ಯೋಗ್ಯವಲ್ಲದ ಕಾರಣಕ್ಕೆ ಸಂಪೂರ್ಣವಾಗಿ ಫಿಶ್‌ಮಿಲ್‌ಗಳಿಗೆ ಹೋಗುತ್ತಿದೆ.

ವಿಶೇಷ ಅಂದರೆ, ಮೀನುಗಾರರಿಗೆ ಬೇಡವಾದ ತ್ಯಾಜ್ಯವೇ ಫಿಶ್‌ಮಿಲ್‌ಗಳಲ್ಲಿ ಸಂಸ್ಕರಣೆಯಾಗಿಆರೋಗ್ಯಕ್ಕೆ ಪೂರಕವಾದ ಉಪ ಉತ್ಪನ್ನಗಳಾಗಿ ಮರುಹುಟ್ಟು ಪಡೆಯುತ್ತವೆ. ಜತೆಗೆ, ಮತ್ತೆ ಮನುಷ್ಯನ ದೇಹ ಸೇರುತ್ತವೆ.

ಉತ್ಪನ್ನಗಳು ಯಾವುವು ?

ಮೀನಿನ ತ್ಯಾಜ್ಯವನ್ನು ಬಳಸಿಕೊಂಡು ಫಿಶ್‌ಮಿಲ್‌ಗಳಲ್ಲಿ ಫಿಶ್‌ ಪೌಡರ್‌, ಮೀನಿನ ಎಣ್ಣೆ ಹಾಗೂ ಫಿಶ್‌ ಸಾಲ್ಯುಬಲ್‌ ಪೇಸ್ಟ್‌ ಎಂಬ ಪ್ರಮುಖ ಮೂರು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಮೀನಿನ ತ್ಯಾಜ್ಯ ಬಳಕೆ ಮಾಡಿಕೊಂಡು ಗೊಬ್ಬರವನ್ನೂ ತಯಾರಿಸಲಾಗುತ್ತದೆ.

ಮೀನಿನ ಪೌಡರ್‌ ಬಳಸಿಕೊಂಡು ಮತ್ಸ್ಯೋದ್ಯಮ ಹಾಗೂ ಕುಕ್ಕುಟೋದ್ಯಮಕ್ಕೆ ಬೇಕಾದ ಉತ್ಪನ್ನ ತಯಾರು ಮಾಡಲಾಗುತ್ತದೆ. ಸೀಗಡಿ ಸಾಕಣೆ, ಕೋಳಿ ಸಾಕಾಣೆಗೆ ಮೀನಿನ ಪುಡಿಯಿಂದ ತಯಾರಾಗುವ ಆಹಾರ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ.

ಮೀನಿನ ಎಣ್ಣೆಗೆ ಜಾಗತಿಕವಾಗಿ ಬೇಡಿಕೆಯಿದೆ. ಅನಾರೋಗ್ಯ ಸಮಸ್ಯೆಗಳಿಗೆ ಮೀನಿನ ಎಣ್ಣೆ ಪರಿಣಾಮಕಾರಿ ಔಷಧವೂ ಹೌದು. ವಿಟಮಿನ್‌ ಕ್ಯಾಪ್ಸೂಲ್‌ಗಳ ತಯಾರಿಕೆಗೆ ಮೀನಿನ ಎಣ್ಣೆ ಬಳಕೆಯಾಗುತ್ತದೆ.

ವಿದೇಶಗಳಿಗೆ ರಫ್ತು

ಎಲ್ಲ ಫಿಶ್‌ಮಿಲ್‌ಗಳು ಮೀನಿನ ಎಣ್ಣೆಯನ್ನು ಸಂಸ್ಕರಿಸುವುದಿಲ್ಲ. ಆಧುನಿಕ ತಂತ್ರಜ್ಞಾನ ಹೊಂದಿರುವ ದೊಡ್ಡಮಟ್ಟದ ಮಿಲ್‌ಗಳು ಮಾತ್ರ ಎಣ್ಣೆಯನ್ನು ಉತ್ಪಾದಿಸುತ್ತವೆ. ವಿದೇಶಗಳಿಗೂ ಮೀನಿನ ಎಣ್ಣೆ ರಫ್ತಾಗುತ್ತದೆ.‌

ಮೀನಿನ ಪೌಡರ್‌ ಹಾಗೂ ಎಣ್ಣೆ ತೆಗೆಯುವಾಗ ಮೀನಿನ ದೇಹದಿಂದ ಬಸಿಯುವ ನೀರನ್ನು ಬಳಸಿಕೊಂಡು ಫಿಶ್‌ ಸಾಲ್ಯುಬಲ್‌ ಪೇಸ್ಟ್‌ ತಯಾರಿಸಲಾಗುತ್ತದೆ. ಈ ಪೇಸ್ಟ್‌ಅನ್ನು ರಾಸಾಯನಿಕ ಉತ್ಪನ್ನಗಳ ಬಳಕೆಗೆ ಉಪಯೋಗಿಸಲಾಗುತ್ತದೆ. ಇದಕ್ಕೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ರಾಜ್ಯದ ಪಾಲು ಎಷ್ಟು ?

ದೇಶದಲ್ಲಿರುವ 56 ಫಿಶ್‌ಮಿಲ್‌ಗಳ ಪೈಕಿ 30ಕ್ಕಿಂತ ಹೆಚ್ಚು ಫಿಶ್‌ಮಿಲ್‌ಗಳು ರಾಜ್ಯದಲ್ಲಿವೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿಯೇ ಬಹುತೇಕ ಫಿಶ್‌ಮಿಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ ಫಿಶ್‌ಮಿಲ್‌ಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಪೈಕಿ ಶೇ 50ಕ್ಕಿಂತ ಹೆಚ್ಚು ರಾಜ್ಯದಲ್ಲಿ ಉತ್ಪಾದನೆಯಾಗುತ್ತದೆ.

ಜಿಎಸ್‌ಟಿ ಹೊಡೆತ

ಮುಂಚೆ ಮೀನಿನ ಎಣ್ಣೆ ಮೇಲೆ ಇದ್ದ ಶೇ 5 ಜಿಎಸ್‌ಟಿ ಪ್ರಮಾಣವನ್ನು ಈಗ ಶೇ 12ಕ್ಕೆ ಏರಿಸಲಾಗಿದೆ. ಫಿಶ್‌ಮಿಲ್‌ಗಳ ಮೇಲೆ ಶೂನ್ಯ ತೆರಿಗೆ ಇತ್ತು. ಈಗ ಶೇ 5ಕ್ಕೆ ಹೆಚ್ಚಿಸಲಾಗಿದೆ. ಫಿಶ್‌ ಸಾಲುಬಲ್‌ ಪೇಸ್ಟ್‌ ಮೇಲೆ ಶೂನ್ಯವಿತ್ತು. ಈಗ ಶೇ 18 ರಷ್ಟು ಜಿಎಸ್‌ಟಿ ಇದೆ. ಇದರಿಂದ ಉದ್ಯಮಕ್ಕೆ ಹೊಡೆತ ಬಿದ್ದಿದೆ ಎನ್ನುತ್ತಾರೆ ಫಿಶ್‌ಮಿಲ್ ಮಾಲೀಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT