ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಗರಿಗೆ ಟೋಲ್ ಬರೆ: 7 ಕಿ.ಮೀ ಸಂಚಾರಕ್ಕೆ ₹155 ಟೋಲ್‌ ಶುಲ್ಕ !

ಹೆಜಮಾಡಿಯಲ್ಲಿ ದುಪ್ಪಟ್ಟು ಟೋಲ್ ಸಂಗ್ರಹಕ್ಕೆ ನಿರ್ಧಾರ
Last Updated 27 ನವೆಂಬರ್ 2022, 22:00 IST
ಅಕ್ಷರ ಗಾತ್ರ

ಉಡುಪಿ/ಪಡುಬಿದ್ರಿ: ವಿವಾದಿತ ಸುರತ್ಕಲ್ ಟೋಲ್‌ ಕೇಂದ್ರವನ್ನು ಹೆಜಮಾಡಿ ಟೋಲ್‌ ಕೇಂದ್ರದ ಜತೆ ವಿಲೀನಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರಿಗೆ ‘ಟೋಲ್‌’ ಬರೆ ಎಳೆದಿದೆ.

ಜನಪರ ಸಂಘಟನೆಗಳ ಆಕ್ರೋಶಕ್ಕೆ ಮಣಿದು ಅಕ್ರಮದ ಹಣೆಪಟ್ಟಿ ಕಟ್ಟಿಕೊಂಡಿದ್ದ ಸುರತ್ಕಲ್‌ನ ಟೋಲ್‌ ಕೇಂದ್ರವನ್ನು ಮುಚ್ಚಲು ನಿರ್ಧರಿಸಿರುವ ಪ್ರಾಧಿಕಾರ, ಅಲ್ಲಿ ಸಂಗ್ರಹವಾಗುತ್ತಿದ್ದ ಟೋಲ್‌ ಶುಲ್ಕವನ್ನು ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಹೆಜಮಾಡಿ ಟೋಲ್‌ ಕೇಂದ್ರದಲ್ಲಿ ವಸೂಲಿ ಮಾಡುವಂತೆ ಆದೇಶ ನೀಡಿದೆ. ಡಿ.1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಟೋಲ್‌ ಶುಲ್ಕ ದುಪ್ಪಾಟ್ಟಾಗಿರುವುದು ಕರಾವಳಿಗರ ಪಾಲಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಹ ಅನುಭವ. ಇನ್ಮುಂದೆ ಅವಳಿ ಜಿಲ್ಲೆಗಳ ನಡುವೆ ಸಂಚರಿಸುವ ಜನರು ಹೆಜಮಾಡಿ ಟೋಲ್‌ ಕೇಂದ್ರದಲ್ಲಿ ಮರು ಮಾತಿಲ್ಲದೆ ದುಪ್ಪಟ್ಟು ಟೋಲ್‌ ಶುಲ್ಕ ಕಟ್ಟಬೇಕು.

7 ಕಿ.ಮೀಗೆ ಪ್ರಯಾಣಕ್ಕೆ ₹ 155:

ಉಡುಪಿ ಜಿಲ್ಲೆಯ ಪಡುಬಿದ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ನಡುವಿನ ದೂರ ಕೇವಲ 7 ಕಿ.ಮೀ. ನೀವೇನಾದರೂ ಪಡುಬಿದ್ರಿಯಿಂದ ಮುಲ್ಕಿಗೆ ಕಾರಿನಲ್ಲಿ ಹೋಗಿ ಬರಬೇಕು ಅಂತಾದರೆ ಹೆಜಮಾಡಿ ಟೋಲ್‌ನಲ್ಲಿ ₹ 155 ಟೋಲ್‌ ಕಟ್ಟಬೇಕು. ಅಂದರೆ 1 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಬಳಸಿದ್ದಕ್ಕೆ ವಾಹನ ಸವಾರರು ಕಟ್ಟಬೇಕಾದ ಟೋಲ್‌ ಬರೊಬ್ಬರಿ ₹ 22 ರೂಪಾಯಿ. ಈ ಲೆಕ್ಕಾಚಾರದಲ್ಲಿ ಪೆಟ್ರೋಲ್‌ ವೆಚ್ಚ ಸೇರಿಸಲಾಗಿಲ್ಲ.

ಪಡುಬಿದ್ರಿಯಿಂದ ಮುಲ್ಕಿಗೆ ಹೋಗಲು ಸದ್ಯ ಬಸ್‌ ಟಿಕೆಟ್‌ ದರ ₹ 10 ಇದೆ. ಕಾರಿನಲ್ಲಿ ಹೋದರೆ 15 ಪಟ್ಟು ಹೆಚ್ಚು ಕೊಡಬೇಕಾಗಲಿದೆ. ಈ ದರ ವಿಮಾನಯಾನಕ್ಕಿಂತಲೂ ದುಬಾರಿ ಎನ್ನುತ್ತಾರೆ ಪಡುಬಿದ್ರಿಯ ನಾಗರಿಕರು.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹಾಗೂ ಉಡುಪಿ ಜಿಲ್ಲೆಯ ಪಡುಬಿದ್ರಿ ಗಡಿ ಭಾಗಗಳಾಗಿದ್ದು ವ್ಯಾಪಾರ, ವಹಿವಾಟು ಹಾಗೂ ಆರ್ಥಿಕ ಚಟುವಟಿಕೆಗಳ ಕಾರಣಕ್ಕೆ ಪ್ರತಿನಿತ್ಯ ಎರಡೂ ಊರುಗಳ ಜನರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸಂಚರಿಸುವುದು ಅನಿವಾರ್ಯವಾಗಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಾದೇಶಿಕವಾಗಿ ಬೇರ್ಪಟ್ಟರೂ ಭಾವನಾತ್ಮಕವಾಗಿ ಇಂದಿಗೂ ಒಟ್ಟಾಗಿವೆ. ಉಭಯ ಜಿಲ್ಲೆಗಳ ನಡುವೆ ಗಟ್ಟಿಯಾದ ಆರ್ಥಿಕತೆ ಬೆಸೆದುಕೊಂಡಿದೆ. ಟೋಲ್‌ದರ ದುಪ್ಪಟ್ಟು ಹೆಚ್ಚಳದ ಪರಿಣಾಮ ಎರಡೂ ಜಿಲ್ಲೆಗಳ ಆರ್ಥಿಕತೆಗೆ ಪೆಟ್ಟುಬೀಳುವ ಆತಂಕವಿದೆ.

ಉಡುಪಿಯಲ್ಲೂ ಹೋರಾಟ: ಮುನೀರ್‌:

ಸುರತ್ಕಲ್‌ ಟೋಲ್‌ ಅಕ್ರಮ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಒಪ್ಪಿ ತೆರವಿಗೆ ಮುಂದಾಗಿದೆ. ಆದರೆ, ಸುರತ್ಕಲ್‌ನಲ್ಲಿ ಸಂಗ್ರಹವಾಗುತ್ತಿದ್ದ ಟೋಲ್‌ ಶುಲ್ಕವನ್ನು ಹೆಜಮಾಡಿ ಟೋಲ್‌ನಲ್ಲಿ ಸಂಗ್ರಹಿಸಲು ಮುಂದಾಗಿರುವುದು ಹಗಲು ದರೋಡೆ. ಹೆಜಮಾಡಿಯಲ್ಲಿ ದುಪ್ಪಟ್ಟು ಟೋಲ್‌ ಸಂಗ್ರಹಕ್ಕೆ ಮುಂದಾದರೆ ಉಡುಪಿ ಜನರ ಪರವಾಗಿ ಪ್ರತಿಭಟನೆಗೆ ಮುಂದಾಗುತ್ತೇವೆ.

ಹೆಜಮಾಡಿಯ ಸಮಾನ ಮನಸ್ಕ ಸಂಘಟನೆಯ ಜತೆ ಹೋರಾಟದ ಕುರಿತು ಚರ್ಚೆಗಳು ನಡೆದಿವೆ. ಯಾವುದೇ ಕಾರಣಕ್ಕೂ ಜನವಿರೋಧಿ ನೀತಿ ಜಾರಿಗೆ ಬಿಡುವುದಿಲ್ಲ ಎಂದು ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.

ಜನಪ್ರತಿನಿಧಿಗಳೇ ನಿಲುವು ಸ್ಪಷ್ಟಪಡಿಸಿ:

ಟೋಲ್ ದರ ಹೆಚ್ಚಳವಾಗಿರುವ ಬಗ್ಗೆ ಉಡುಪಿ ಜಿಲ್ಲೆಯ ಶಾಸಕರು, ಸಂಸದರು, ಸಚಿವರು ನಿಲುವು ಸ್ಪಷ್ಟಪಡಿಸಬೇಕು. ಇಲ್ಲವಾದರೆ ಕ್ಷೇತ್ರದ ಜನರಿಗೆ ವಂಚನೆ ಮಾಡಿದಂತಾಗುತ್ತದೆ. ಪರಿಷ್ಕೃತ ಟೋಲ್ ದರ ಜಾರಿಗೆ ಮೂರು ದಿನ ಬಾಕಿ ಇದ್ದು ಕೂಡಲೇ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಆದೇಶ ಹಿಂಪಡೆಯುವಂತೆ ಮಾಡಬೇಕು. ಇಲ್ಲವಾದರೆ, ಉಡುಪಿ ಜಿಲ್ಲೆಯ ಜನ ಬಿಜೆಪಿಯನ್ನು ಕ್ಷಮಿಸುವುದಿಲ್ಲ.

ಶ್ವೇತ ಪತ್ರ ಹೊರಡಿಸಿ:

ಸುರತ್ಕಲ್ ಟೋಲ್ ಕೇಂದ್ರ ಅಕ್ರಮ ಎಂದಾದರೆ 8 ವರ್ಷ ಸಾರ್ವಜನಿಕರಿಂದ ಟೋಲ್ ಸಂಗ್ರಹಿಸಿದ್ದು ಏಕೆ ? ಸಂಗ್ರಹಿಸಿದ ನೂರಾರು ಕೋಟಿ ಟೋಲ್ ಶುಲ್ಕ ಯಾರ ಜೇಬು ಸೇರಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಲೆಕ್ಕ ಕೊಡಬೇಕು. ಟೋಲ್‌ ಸಂಗ್ರಹದ ವಿವರಗಳ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.

ಕರಾವಳಿಗರಿಗೆ ಮೋಸ:

ದುಪ್ಪಟ್ಟು ಟೋಲ್ ಸಂಗ್ರಹ ನಿರ್ಧಾರಕ್ಕೆ ಕರಾವಳಿಯಲ್ಲಿ ಆಕ್ರೋಶ ಭುಗಿಲೇಳುತ್ತಿದೆ. ತುಳುನಾಡು ಜನರ ಜತೆ ಸರ್ಕಾರಗಳು ಕಠೋರ ಹೃದಯದಿಂದ ವರ್ತಿಸುತ್ತಿವೆ. ಅನಧಿಕೃತ ಸುರತ್ಕಲ್ ಟೋಲ್ ರದ್ದು ಮಾಡಿದ ಬಳಿಕ ವಿಲೀನದ ನೆಪವೊಡ್ಡಿ ಸುರತ್ಕಲ್ ಟೋಲ್ ದರವನ್ನು ಹೆಜಮಾಡಿಯಲ್ಲಿ ಸೇರಿಸಿ ವಸೂಲು ಮಾಡುವ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡಲಾಗುತ್ತಿದೆ.

ಅಗತ್ಯ ವಸ್ತುಗಳ ದರ ಏರಿಕೆಯ ಜತೆಗೆ ದುಪ್ಪಟ್ಟು ಟೋಲ್ ಕೊಟ್ಟರೆ ಅರ್ಥಿಕವಾಗಿ ಕುಗ್ಗಿರುವ ಜನರ ಬದುಕು ಅಸಹನೀಯವಾಗಲಿದೆ. ಸರ್ಕಾರ ಹಗಲು ದರೋಡೆಗೆ ನಿಂತರೂ ಕರಾವಳಿ ಭಾಗದ ಶಾಸಕರು, ಸಚಿವರು, ಸಂಸದರು ತುಟಿ ಬಿಚ್ಚದಿರುವುದು ವಿಪರ್ಯಾಸ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ.

ಸುರತ್ಕಲ್‌ ಹೆಜಮಾಡಿ ಟೋಲ್ ಕೇಂದ್ರ ವಿಲೀನಗೊಂಡ ಬಗ್ಗೆ ನಿಲುವು ತಿಳಿಯಲು ಕಾಪು ಶಾಸಕ ಲಾಲಾಜಿ ಮೆಂಡನ್ ಅವರಿಗೆ ಕರೆ ಮಾಡಲಾಯಿತಾದರೂ ಕರೆ ಸ್ವೀಕರಿಸಲಿಲ್ಲ.

‘ತೀವ್ರ ಪ್ರತಿಭಟನೆ’

ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಹೆಜಮಾಡಿಯಲ್ಲಿ ದುಪ್ಪಟ್ಟು ದರ ವಸೂಲಿ ಆದೇಶ ರದ್ದು ಮಾಡದಿದ್ದರೆ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಾರ್ವಜನಿಕರರೊಂದಿಗೆ ತೀವರ ಪ್ರತಿಭಟನೆ ಮಾಡಲಾಗುವುದು.

ರಮೀಝ್ ಹುಸೈನ್,ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ

ಸುರತ್ಕಲ್ ಟೋಲ್ ಕೇಂದ್ರ ತೆರವಿಗೆ ಸಂಬಂಧ ಕೇಂದ್ರ, ರಾಜ್ಯ, ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸರಣಿ ಸಭೆಗಳನ್ನು ನಡೆಸಿದೆ. ಕರಾವಳಿಯ ಎರಡೂ ಜಿಲ್ಲೆಗಳ ಶಾಸಕರು ಸಚಿವರು, ಸಂಸದರು ಸಭೆಯಲ್ಲಿ ಭಾಗವಹಿಸಿಲ್ಲ. ಜನಪ್ರತಿನಿಧಿಗಳ ಬೇಜವಬ್ದಾರಿಯಿಂದ ಸಾರ್ವಜನಿಕರು ದುಪ್ಪಟ್ಟು ಟೋಲ್ ಭರಿಸಬೇಕಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿಗಳಿಗೆ ₹ 30,000 ಕೋಟಿ ರಿಯಾಯಿತಿ ಘೋಷಿಸಲು ಬಳಿ ಹಣವಿದೆ. ಟೋಲ್‌ ವಿಲೀನ ತಪ್ಪಿಸಲು ₹ 60 ರಿಂದ 70 ಕೋಟಿಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಕೊಡಲು ಸರ್ಕಾರದ ಬಳಿ ಹಣವಿಲ್ಲವೇ.

–ಮುನೀರ್ ಕಾಟಿಪಳ್ಳ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ

***

‘ಪ್ರತಿಕ್ರಿಯಿಸುವುದಿಲ್ಲ’

ಸುರತ್ಕಲ್ ಹೆಜಮಾಡಿ ಟೋಲ್ ಸಂಗ್ರಹ ವಿಲೀನ ಹಾಗೂ ಪರಿಷ್ಕೃತ ದರ ಜಾರಿಯ ಬಗ್ಗೆ ಆದೇಶ ಹೊರಡಿಸಲಾಗಿದೆ. ಈ ವಿಷಯದಲ್ಲಿ ಹೆಚ್ಚು ಮಾತನಾಡುವುದಿಲ್ಲ.

–ಲಿಂಗೇಗೌಡ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ

***

ಹೆಜಮಾಡಿ ಟೋಲ್ ದರ (ಡಿ.1ರಿಂದ)

ವಾಹನಗಳು–ಏಕಮುಖ ಪ್ರಯಾಣ ದರ–ದ್ವಿಮುಖ ಪ್ರಯಾಣ ದರ

ಕಾರು, ಜೀಪ್, ಎಲ್‌ಎಂವಿ–₹100–₹155

ಲಘು ವಾಣಿಜ್ಯ, ಸರಕು ವಾಹನ, ಮಿನಿ ಬಸ್–₹170–₹250

ಬಸ್‌ ಅಥವಾ ಟ್ರಕ್‌–₹355–₹525

ಮಲ್ಟಿ ಆ್ಯಕ್ಸೆಲ್ ವಾಹನಗಳು–₹675–₹825

ಭಾರಿ ವಾಹನಗಳು(7ಕ್ಕಿಂತ ಹೆಚ್ಚು ಆ್ಯಕ್ಸೆಲ್)–₹675–₹1,005

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT