ಉಡುಪಿ: ಪ್ರತಿಯೊಬ್ಬ ಭಾರತೀಯ ಕನ್ನಡಿಗನಲ್ಲ, ಆದರೆ ಪ್ರತಿಯೊಬ್ಬ ಕನ್ನಡಿಗ ಭಾರತೀಯ. ಆದ್ದರಿಂದ ನಾವು ಭಾರತೀಯರಾಗಿ ಒಗ್ಗೂಡೋಣ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿಯ ಕುಂಜಿಬೆಟ್ಟುವಿನ ಶಾರದಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರಾವಳಿಯ ಸಾಹಿತಿಗಳು, ಕಲಾವಿದರು, ಲೇಖಕರು, ಕವಿಗಳು, ಚುಟುಕು ಬರಹಗಾರರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಕನ್ನಡ ಮಾತನಾಡುವವರ ಕ್ಷೇತ್ರಗಳು ಹರಿದು ಹಂಚಿ ಹೋಗಿದ್ದವು ಅದನ್ನು ಒಗ್ಗೂಡಿಸುವ ಸಲುವಾಗಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಲಾಗಿತ್ತು. ಈ ಮೂಲಕ ಕನ್ನಡಿಗರನ್ನು ಒಂದುಗೂಡಿಸಲಾಗಿತ್ತು. ಸಾಹಿತಿಗಳು, ಕಲಾವಿದರು ಮತ್ತು ಇಂತಹ ಸಮ್ಮೇಳನಗಳು ಭಾರತೀಯರ ಏಕತೆಗಾಗಿ ಇಂದು ಕೆಲಸ ಮಾಡಬೇಕು ಎಂದರು.
ರಾಜಕೀಯಕ್ಕೆ ಬರುವ ಮೊದಲು ನಾನು ಯಾವ ಜಾತಿ ಎಂಬುದು ಗೊತ್ತಿರಲಿಲ್ಲ. ಅನಂತರ ತಿಳಿಯಿತು ಮೈಸೂರು ಅರಸು ಮನೆತನದವರು ಕೂಡ ಒಬಿಸಿಗೆ ಸೇರಿದವರೆಂದು. ಅಂತಹ ಒಂದು ಸಮುದಾಯವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಶ್ಲಾಘನೀಯ ಎಂದರು.
ಈ ಮೊದಲು ಬಲಪಂಥೀಯ ಸಾಹಿತಿಗಳಿಗೆ ವೇದಿಕೆಗಳೇ ಇರಲಿಲ್ಲ. ಕೆಲವರನ್ನು ಓಲೈಕೆ ಮಾಡುತ್ತಿದ್ದ ಸಾಹಿತಿಗಳು ಬಿಜೆಪಿ ಮತ್ತು ಬಲಪಂಥೀಯರನ್ನು ತೆಗಳುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ವಿಜಯ್ ಕುಮಾರ್ ಕೊಡವೂರು ಇದ್ದರು.
‘ಯುರೋಪ್ ಮಾದರಿ ಶಿಕ್ಷಣದಿಂದ ಭಾರತೀಯತೆಗೆ ಧಕ್ಕೆ’
ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಬಂದ ನಂತರ ಯುರೋಪ್ ಮಾದರಿಯ ಶಿಕ್ಷಣವನ್ನು ಪ್ರಾರಂಭಿಸಲಾಯಿತು ಇದರಿಂದಾಗಿ ನಮ್ಮ ಸಾಹಿತ್ಯದಲ್ಲಿ ಭಾರತೀಯತೆ ಕಡಿಮೆಯಾಯಿತು ಎಂದು ಸಾಹಿತಿ ಪ್ರೇಮ್‌ಶೇಖರ್ ಅಭಿಪ್ರಾಯಪಟ್ಟರು.
‘ಬದಲಾದ ರಾಜಕಾರಣದಿಂದ ದಮನಗೊಳ್ಳುತ್ತಿರುವ ಹಿಂದೂಗಳ ಬದುಕು–ಸಾಹಿತ್ಯ’ ಎಂಬ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋಗುವಾಗ ಮಾನಸಿಕವಾಗಿ ಅವರಿಗೆ ಗುಲಾಮರಾಗಿರುವ ಸರ್ಕಾರವನ್ನು ಬಿಟ್ಟು ಹೋದರು. ಆ ಸರ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದವರು ಸಂಘ ಪರಿವಾರದವರು ಎಂದರು. ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾದಾಗ ವಿರೋಧ ವ್ಯಕ್ತಪಡಿಸಿದ್ದು ಕೂಡ ಸಂಘ ಮಾತ್ರ ಎಂದು ಅವರು ಹೇಳಿದರು.
ಸಾಹಿತಿ ದಯಾನಂದ ಕತ್ತಲ್‌ಸಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.