ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ವರ್ಷಗಳ ಬಳಿಕ ತಾಯಿ ಮಗನ ಸಮ್ಮಿಲನ! ಅಮ್ಮನ ಕರೆದೊಯ್ಯಲು ಅಸ್ಸಾಂನಿಂದ ಬಂದ ಮಗ

ಅಮ್ಮನನ್ನು ಕರೆದೊಯ್ಯಲು ಅಸ್ಸಾಂನಿಂದ ಬಂದ ಮಗ
Last Updated 18 ಸೆಪ್ಟೆಂಬರ್ 2021, 12:12 IST
ಅಕ್ಷರ ಗಾತ್ರ

ಉಡುಪಿ: 'ಮಾನಸಿಕ ಸ್ಥಿಮಿತತೆ ಕಳೆದುಕೊಂಡು 12 ವರ್ಷಗಳ ಹಿಂದೆ ಅಸ್ಸಾಂನ ದುಬ್ರಿಯಿಂದ ಮಂಗಳೂರಿಗೆ ಬಂದಿದ್ದ ಮಹಿಳೆ ಕೊನೆಗೂ ಅವರ ಕುಟುಂಬ ಸೇರಿಕೊಂಡಿದ್ದಾರೆ' ಎಂದು ವಿಶ್ವಾಸದ ಮನೆ ಅನಾಥಾಶ್ರಾಮಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಪಾಸ್ಟರ್ ಸುನಿಲ್ ಜಾನ್ ಡಿಸೊಜಾ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.14, 2009ರಂದು ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥೆಯಾಗಿ ಬೀದಿಯಲ್ಲಿ ಅಲೆಯುತ್ತಿದ್ದ ಮಲ್ಲಿಕಾ ಖುತೂನ್‌ ಅವರನ್ನು ವಿಶ್ವಾಸದ ಮನೆಯ ಸಂಸ್ಥಾಪಕ ಸುನಿಲ್ ಜಾನ್ ಡಿಸೋಜಾ ವಿಶ್ವಾಸದ ಮನೆ ಅನಾಥಾಲಯಕ್ಕೆ ಕರೆತಂದು ಆರೈಕೆ ಮಾಡಿದ್ದರು. ಪರಿಣಾಮ, ತಿಂಗಳಲ್ಲಿ ಗುಣಮುಖರಾದ ಮಲ್ಲಿಕಾ ಮರಳಿ ಮನೆಗೆ ಹೋಗಬೇಕು ಎಂದು ಒತ್ತಾಯಿಸುತ್ತಿದ್ದರು.

ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಿದ್ದ ಕಾರಣ ಮಹಿಳೆಯ ವಾಸ ಸ್ಥಳ ಪತ್ತೆಗೆ ಸಮಸ್ಯೆಯಾಗಿತ್ತು. ಬಳಿಕ ಮಹಿಳೆ ಅಸ್ಸಾಂನ ದುಬ್ರಿಯಲ್ಲಿ ಮನೆ ಇರುವುದಾಗಿ ಸ್ಪಷ್ಟಪಡಿಸಿದ ಬಳಿಕ, ಅಲ್ಲಿನ ಪೊಲೀಸ್ ಠಾಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮಹಿಳೆಯ ಪತ್ತೆಗೆ ನೆರವು ಕೋರಲಾಗಿತ್ತು. ಆದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಮಣಿಪಾಲದ ವೈದ್ಯರಾದ ಡಾ.ಶರ್ಮಾ ನೇತೃತ್ವದ ತಂಡ ಅನಾಥಾಶ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮಾಡುವಾಗ ಮಹಿಳೆಯ ಪೂರ್ವಾಪರಗಳನ್ನು ವಿಚಾರಿಸಿ, ಅಸ್ಸಾಂನ ದುಬ್ರಿಯಲ್ಲಿರುವ ಪರಿಚಿತರ ಮೂಲಕ ಮಹಿಳೆಯ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಲಾಯಿತು ಎಂದು ಸುನಿಲ್ ಜಾನ್ ಡಿಸೋಜ ಮಾಹಿತಿ ನೀಡಿದರು.

ಮಹಿಳೆಯ ಪುತ್ರನನ್ನು ಸಂಪರ್ಕಿಸಿದ ಬಳಿಕ ಸೆ.19ರಂದು ಮಗ ತಹಜುದ್ದೀನ್ ಅಸ್ಸಾಂನಿಂದ ಉಡುಪಿಗೆ ಬಂದು ತಾಯಿಯನ್ನು ಭೇಟಿಯಾದರು. 12 ವರ್ಷಗಳ ಬಳಿಕ ಹೆತ್ತ ತಾಯಿಯನ್ನು ನೋಡಿ ಸಂತಸಪಟ್ಟರು. ಇದೊಂದು ಭಾವನಾತ್ಮಕ ಸನ್ನಿವೇಶವಾಗಿತ್ತು ಎಂದು ಡಿಸೋಜ ತಿಳಿಸಿದರು.

ಇದೀಗ ಪುತ್ರ ತಾಯಿಯನ್ನು ಕರೆದೊಯ್ಯುತ್ತಿದ್ದು, ಶನಿವಾರ ರೈಲಿನಲ್ಲಿ ಬೆಂಗಳೂರು ತಲುಪಿ ಅಲ್ಲಿಂದ ಅಸ್ಸಾಂನ ದುಬ್ರಿಗೆ ತೆರಳಲಿದ್ದಾರೆ. ಸುಧೀರ್ಘ ಅವಧಿಯ ಬಳಿಕ ತಾಯಿ ಹಾಗೂ ಮಕ್ಕಳನ್ನು ಒಟ್ಟು ಮಾಡಿದ ಸಂತೋಷ ವಿಶ್ವಾಸದ ಮನೆಯ ಸದಸ್ಯರಿಗೆ ಇದೆ ಎಂದರು.

ಪುತ್ರ ತಹಜುದ್ದೀನ್ ಮಾತನಾಡಿ, 2007ರಲ್ಲಿ ತಂದೆ ತೀರಿಹೋದ ಬಳಿಕ ತಾಯಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡರು. ನಂತರ ದಿಢೀರ್ ನಾಪತ್ತೆಯಾದರು. ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಈಗ ಮತ್ತೆ ತಾಯಿಯನ್ನು ನೋಡುತ್ತಿರುವುದು ಸಂತೋಷವಾಗಿದೆ ಎಂದು ಭಾವುಕರಾದರು. ಇದೇ ವೇಳೆ ವಿಶ್ವಾಸದ ಮನೆ ಅನಾಥಾಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಝೇವಿಯರ್ ಮ್ಯಾಥ್ಯು, ದೇವಿನ್ ಶೆಟ್ಟಿ, ಮಹಿಳೆ ಮಲ್ಲಿಕಾ ಖುತೂನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT