ಗುರುವಾರ , ಮೇ 26, 2022
29 °C

ಹಂಸಲೇಖ ಅಪಸ್ವರ ಸರಿಯಲ್ಲ: ಪೇಜಾವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ: ವಿಶ್ವೇಶ ತೀರ್ಥ ಶ್ರೀಗಳ ವಿರುದ್ಧ ಹಂಸಲೇಖ ಅಪಸ್ವರ ಎತ್ತಿರುವುದು ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಮಾಜದಲ್ಲಿ ಗಣ್ಯ ವ್ಯಕ್ತಿ ಎಂದು ಕರೆಸಿಕೊಂಡಿರುವವರ ಬಾಯಿಂದ ಇಂತಹ ಮಾತುಗಳು ಬರಬಾರದಿತ್ತು. ಹಂಸಲೇಖ ಹೇಳಿಕೆಯಿಂದ ಸಮಾಜ ತುಂಬಾ ನೊಂದಿದ್ದು, ಪ್ರತ್ಯುತ್ತರವಾಗಿ ಪ್ರತಿಭಟನೆಯನ್ನೂ ಮಾಡಿದೆ. ಹಂಸಲೇಖ ನಾಲಗೆಯನ್ನು ಹರಿಬಿಡಬಾರದಾಗಿತ್ತು ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವೇಶ ತೀರ್ಥ ಶ್ರೀಗಳು ಯಾರನ್ನೋ ಓಲೈಸುವುದಕ್ಕಾಗಲಿ, ತೆಗಳುತ್ತಾರೆ ಎಂಬ ಕಾರಣಕ್ಕಾಗಲಿ ದಲಿತರ ಮನೆಗಳಿಗೆ ಪ್ರವೇಶ ಮಾಡಲಿಲ್ಲ. ಅವರ ಗುರಿ ನೇರವಾಗಿತ್ತು ಎಂದು ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನು ಇದೇ ರೀತಿ ವಿರೋಧ ಮಾಡಿದ್ದ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಕೂಡ ಮಾಡಿದ್ದ. ಗುರುಗಳು ಸಮಾಜದ ಎಲ್ಲರ ಹೃದಯದಲ್ಲಿ ಕಷ್ಣನನ್ನು ಕಂಡವರು. ಹಾಗಾಗಿ ಅವರು, ದಲಿತರ ಕೇರಿಗೂ ಹೋಗುತ್ತಿದ್ದರು. ನೆರೆ ಹಾವಳಿ, ಭೂಕಂಪ ಆದಾಗಲೂ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರವನ್ನು ಬಯಸಿದ್ದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದ್ದು, ಯಾರೋ ಏನೋ ಹೇಳಿದ ಮಾತ್ರಕ್ಕೆ ಕೆಲಸ ನಿಲ್ಲಿಸುವುದಿಲ್ಲ. ದಲಿತರ ಜೊತೆ ನಾವಿದ್ದೇವೆ, ದಲಿತರು ನಮ್ಮಿಂದ ಹೊರತಾಗಿಲ್ಲ‌. ಈ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಹಂಸಲೇಖ ಹೇಳಿಕೆಗೆ ಪ್ರತಿಭಟನೆ ಮಾಡುವುದಿಲ್ಲ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದು...

ಹಂಸಲೇಖ ಅವರು ಈಚೆಗೆ ಮೈಸೂರಿನಲ್ಲಿ, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಬಹುದಷ್ಟೆ, ಅವರು ಕೊಟ್ಟ ಮಾಂಸ ತಿನ್ನಲು ಸಾಧ್ಯವಿಲ್ಲ. ದಲಿತರ ಮನೆಗೆ ಬಲಿತರು ಬರುವುದು ದೊಡ್ಡ ವಿಷಯವಲ್ಲ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ–

ಅವರ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ, ತಮ್ಮ ಫೇಸ್‌ಬುಕ್ ಪುಟದಲ್ಲಿ ಕ್ಷಮೆಯಾಚನೆಯ ವಿಡಿಯೊ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು