ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯಮ ತೊರೆದು ಭತ್ತ, ತೆಂಗು, ಕಂಗು ಬೆಳೆದು ಯಶಸ್ವಿಯಾದ ಸಮಾಜಸೇವಕ

ಉದ್ಯಮ ತೊರೆದು ಭತ್ತ ಕೃಷಿ
Published 10 ಜೂನ್ 2024, 8:02 IST
Last Updated 10 ಜೂನ್ 2024, 8:02 IST
ಅಕ್ಷರ ಗಾತ್ರ

ಶಿರ್ವ: ಮುಂಬೈಯಲ್ಲಿ ಹೋಟೆಲ್‌ ಉದ್ಯಮಿಯಾಗಿದ್ದ ಯುವ ಸಾಮಾಜಿಕ ಕಾರ್ಯಕರ್ತ ಒಬ್ಬರು ಕೋವಿಡ್‌ ಸಂಕಷ್ಟದ ಬಳಿಕ ಕೃಷಿ ಚಟುವಟಿಕೆಯತ್ತ ಆಕರ್ಷಿತರಾಗಿ ತೆಂಗು, ಕಂಗು ಬೆಳೆದು ಯಶಸ್ವಿಯಾಗಿ ಇದೀಗ 7 ಎಕ್ರೆ ಗದ್ದೆಯಲ್ಲಿ ಭತ್ತ ಕೃಷಿಯಲ್ಲಿ ತೊಡಗಿದ್ದಾರೆ.

ಕಾಪು ತಾಲ್ಲೂಕಿನ ಶಿರ್ವ ಗ್ರಾಮದ ಪಂಜಿಮಾರು ಸಮೀಪದ ದಿಂಡುಮನೆ ನಿವಾಸಿ ಸಂತೋಷ್ ಶೆಟ್ಟಿ ಅವರೇ ಈ ಮಾದರಿ ಕೃಷಿಕ. ಕೃಷಿ ಎಂದರೆ ಹಿಂದೇಟು ಹಾಕುವ ಯುವ ಸಮುದಾಯಕ್ಕೆ ಅವರು ಮಾದರಿಯಾಗಿದ್ದಾರೆ.

ಆಧುನಿಕ ಕೃಷಿ ಪದ್ಧತಿಯೊಂದಿಗೆ ಸಾಂಪ್ರದಾಯಿಕ ಕೃಷಿ ಪದ್ಧತಿ ಕೂಡಾ ಅನುಸರಿಸುವ ಮೂಲಕ ಪಂಜಿಮಾರಿನ ತೀರಾ ಗ್ರಾಮೀಣ ಪ್ರದೇಶದಲ್ಲಿ ಹಡಿಲು ಬಿದ್ದಿರುವ ಗದ್ದೆಯಲ್ಲಿ ಸಂತೋಷ್ ಭತ್ತ ಬೆಳೆಸಲು ಸ್ವತಃ ಉಳುಮೆ ಆರಂಭಿಸಿದ್ದಾರೆ. ತಾಯಿ ‘ಹಿರಿಯ ಕೃಷಿಕ’ ಪ್ರಶಸ್ತಿ ಪುರಸ್ಕೃತೆ ಲೀಲಾ ಶೆಡ್ತಿ ಅವರಿಗೆ ಸೇರಿದ ಹಡಿಲು ಬಿದ್ದಿರುವ 14 ಎಕ್ರೆ ಕೃಷಿ ಭೂಮಿಯಲ್ಲಿ ಸದ್ಯ 7 ಎಕ್ರೆ ಗದ್ದೆಯಲ್ಲಿ ನೇಜಿ ಹಾಕಿದ್ದು, ಭತ್ತ ನಾಟಿ ಮಾಡಲು ಸಿದ್ಧತೆ ನಡೆಸಿದ್ದಾರೆ.

ಸಂತೋಷ್ ಮುಂಬೈಯಲ್ಲಿ ನಡೆಸುತ್ತಿದ್ದ ಹೋಟೆಲ್‌ ಉದ್ಯಮ ತೊರೆದು 5 ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ. ತಾಯಿಯೊಂದಿಗೆ ಊರಿನಲ್ಲಿ ಉಳಿದುಕೊಂಡು ಹಿರಿಯರು ನಡೆಸುತ್ತಿದ್ದ ಕೃಷಿ ಕಾಯಕ ಮುಂದುವರಿಸಿದ್ದಾರೆ. 14 ಎಕ್ರೆ ಕೃಷಿ ಭೂಮಿ ಇದ್ದರೂ ಕೂಲಿಯಾಳುಗಳ ಕೊರತೆಯಿಂದಾಗಿ ಸದ್ಯ 7 ಎಕ್ರೆಯಲ್ಲಿ ಭತ್ತ ಬೆಳೆಸಿದ್ದು, ಮುಂದಿನ ದಿನಗಳಲ್ಲಿ 14 ಎಕ್ರೆಯಲ್ಲೂ ಭತ್ತ ಬೆಳೆಸಬೇಕು ಎಂಬ ಇರಾದೆ ಹೊಂದಿದ್ದಾರೆ. ಎಂಒ4, ಕೆಂಪು ಮುಕ್ತಿ ಬೀಜ ಬಿತ್ತನೆ ಮಾಡಿ ನೇಜಿ ಮಾಡಿದ್ದು, ನೇಜಿ ಬಲಿತು ನಾಟಿಗೆ ಸಿದ್ಧವಾಗಿದೆ. ಭತ್ತ ಕೃಷಿಗೆ ಪೂರಕವಾಗಿ ಮುಂಗಾರು ಮಳೆ ಸುರಿಯುತ್ತಿರುವುದರಿಂದ ಗದ್ದೆಗಳಲ್ಲಿ ನೀರು ನಿಲ್ಲುತ್ತಿದ್ದು, ಇನ್ನೆರಡು ದಿನಗಳಲ್ಲಿ ನಾಟಿ ಕಾರ್ಯ ಆರಂಭಿಸುವುದಾಗಿ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.

ಕೋವಿಡ್‌ ಲಾಕ್‌ಡೌನ್ ಅವಧಿಯಲ್ಲಿ ಊರಿಗೆ ಬಂದು 600 ಅಡಿಕೆ, 200 ತೆಂಗಿನ ಸಸಿ ಬೆಳೆಸುವ ಮೂಲಕ ಕೃಷಿ ಕಾಯಕವನ್ನು ಆರಂಭಿಸಿದ್ದರು. ಅಡಿಕೆ ಕೃಷಿ ಇದೀಗ ಫಸಲು ನೀಡುತ್ತಿದ್ದು, ತೆಂಗು ಕೃಷಿ ಫಸಲು ನೀಡುವ ಹಂತದಲ್ಲಿದೆ.

ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿಯೂ ನಿರತರಾಗಿರುವ ಸಂತೋಷ್ ಮನೆಯಲ್ಲಿ ಹಾಲು ಕೊಡುವ 5 ದನಗಳಿವೆ. ಭತ್ತದ ಕೃಷಿಗೆ ಹಟ್ಟಿಗೊಬ್ಬರ ಬಳಸಿ ಸಾವಯುವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಉಳುಮೆ ಮಾಡಲು, ಭತ್ತ ಕಟಾವು ಮಾಡಲು ಆಧುನಿಕ ಯಂತ್ರಗಳನ್ನು ಉಪಯೋಗಿಸುತ್ತಿದ್ದರೂ, ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಕೃಷಿ ಮಾಡುತ್ತಿರುವುದು ವಿಶೇಷ.

ಸಂತೋಷ್ ಶೆಟ್ಟಿ ಪಂಜಿಮಾರು
ಸಂತೋಷ್ ಶೆಟ್ಟಿ ಪಂಜಿಮಾರು

ನಾವು ತಿನ್ನುವ ಆಹಾರ ನಾವೇ ಉತ್ಪಾದಿಸುವ ಖುಷಿ

ಲಾಕ್‌ಡೌನ್‌ನಲ್ಲಿ ಉದ್ಯಮಕ್ಕೆ ಹೊಡೆತ ಬಿದ್ದಾಗ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂಬ ಹಿರಿಯರ ಮಾತು ನಂಬಿಕೊಂಡು ಹಡಿಲುಬಿದ್ದ ಕೃಷಿ ಭೂಮಿಗೆ ಇಳಿದು ಹಿರಿಯರ ಜಮೀನಿನಲ್ಲಿ ಮಂಗಳಾ ಅಡಿಕೆ ಊರಿನ ತೆಂಗು ಗಿಡಗಳನ್ನು ನೆಟ್ಟು ಕೃಷಿಯತ್ತ ಮುಖಮಾಡಿದೆ. ಇದೀಗ ಸೋದರ ಮಾವ ಕೃಷಿ ಮಾಡದೆ ಹಡಿಲು ಬಿಟ್ಟಿರುವ ಭತ್ತದ ಕೃಷಿ ಮುಂದುವರಿಸಲು ಮನಸ್ಸು ಮಾಡಿದ್ದೇನೆ. ಕೃಷಿಯಾಳುಗಳ ಕೊರತೆಯಿದ್ದರೂ ಮನೆಯವರನ್ನೆಲ್ಲಾ ಸೇರಿಸಿಕೊಂಡು ನಾವು ತಿನ್ನುವ ಆಹಾರ ನಾವೇ ಉತ್ಪಾದನೆ ಮಾಡುವ ಖುಷಿ ಮನಸ್ಸಿಗೆ ಮುದ ನೀಡುತ್ತಿದೆ ಎಂದು ಸಂತೋಷ್ ಶೆಟ್ಟಿ ಖುಷಿ ವ್ಯಕ್ತಪಡಿಸಿದರು.

‘ಉತ್ಸಾಹಿಗಳಿಗೆ ಸರ್ಕಾರ ಉತ್ತೇಜನ ನೀಡಲಿ’

ಕರಾವಳಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಹಡಿಲು ಬಿದ್ದುಕೊಂಡಿದ್ದು ಯುವಜನರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಲ್ಲಿ ನಮ್ಮ ಜಿಲ್ಲೆಗೆ ಬೇಕಾಗುವ ಆಹಾರ ಧವಸ ಧಾನ್ಯಗಳನ್ನು ನಾವೇ ಉತ್ಪಾದಿಸಿಕೊಳ್ಳಬಹುದು. ಮುಂಬೈ ಬೆಂಗಳೂರು ಇನ್ನಿತರ ನಗರಗಳಲ್ಲಿ ಉದ್ಯಮ ಮಾಡಿ ಕೈ ಸುಟ್ಟುಕೊಳ್ಳ್ಳುವುದಕ್ಕಿಂತ ಸಂತೋಷ್‌ ಶೆಟ್ಟಿ ಅವರಂತೆ ನಮ್ಮ ಹಿರಿಯರ ಗದ್ದೆಗಳಲ್ಲಿ ಕೃಷಿ ಮಾಡಲು ಮುಂದಾಗಬೇಕು. ಉತ್ಸಾಹಿಗಳಿಗೆ ಕೃಷಿ ಇಲಾಖೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಿ ಪ್ರೋತ್ಸಾಹಿಸಬೇಕು ಎಂದು ಕೃಷಿಕ ದಯಾನಂದ ಕೆ.ಶೆಟ್ಟಿ ದೆಂದೂರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT