ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 11 ವಿದ್ಯಾರ್ಥಿಗಳಿಗೆ 625 ಅಂಕ

ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಉತ್ತಮ ಸಾಧನೆ: ಸಾಧಕರಿಗೆ ಡಿಡಿಪಿಐ ಎನ್‌.ಎಚ್‌.ನಾಗೂರ ಅಭಿನಂದನೆ
Last Updated 9 ಆಗಸ್ಟ್ 2021, 15:11 IST
ಅಕ್ಷರ ಗಾತ್ರ

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯ 11 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಉಡುಪಿಯ ಒಳಕಾಡು ಶಾಲೆಯ ಅಭಿಷೇಕ್‌ ಜಯಂತ್ ಹೊಳ್ಳ, ಟಿಎಪೈ ಶಾಲೆಯ ನವನೀತ ಎಸ್‌.ರಾವ್, ಅನಂತೇಶ್ವರ ಶಾಲೆಯ ಪ್ರತೀಕ್ಷಾ ಪೈ, ಬಾಲಕಿಯರ ಶಾಲೆಯ ಎಚ್‌.ಎಸ್‌.ಸಮತಾ, ಕುಂದಾಪುರದ ವಿ.ಕೆ.ಆರ್ ಆಚಾರ್ಯ ಶಾಲೆಯ ಅನುಶ್ರೀ ಶೆಟ್ಟಿ, ಪ್ರಣೀತ, ಸೃಜನ್ ಆರ್.ಭಟ್‌, ಶಂಕರ ನಾರಾಯಣದ ಮದರ್ ಥೆರೆಸಾ ಶಾಲೆಯ ಅನುಶ್ರೀ ಶೆಟ್ಟಿ, ಮಲ್ಪೆಯ ನಾರಾಯಣ ಗುರು ಶಾಲೆಯ ಸಾತ್ವಿಕ ಪಿ.ಭಟ್, ಗಂಗೊಳ್ಳಿಯ ಸ್ಟೆಲ್ಲಾ ಮೇರಿ ಶಾಲೆಯ ಶ್ರೇಯಾ, ಕೋಟದ ವಿವೇಕ ಶಾಲೆಯ ಶ್ರೀನಿಧಿ 625 ಅಂಕಗಳನ್ನು ಪಡೆದಿದ್ದಾರೆ.

‘ಪರೀಕ್ಷೆ ಬರೆದ ನಂತರ ಉತ್ತಮ ಅಂಕ ಬರುವ ವಿಶ್ವಾಸವಿತ್ತು. ನಿರೀಕ್ಷೆಗೂ ಮೀರಿ 625 ಅಂಕಗಳು ಬಂದಿರುವುದು ತುಂಬಾ ಖುಷಿಯಾಗಿದೆ. ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಯದಿದ್ದರೂ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೆ. ಈ ಬಾರಿ ಪರೀಕ್ಷಾ ಪದ್ಧತಿ ಬದಲಾದಾಗ ಸ್ವಲ್ಪ ಗೊಂದಲ ಹಾಗೂ ಆತಂಕ ಇತ್ತು. ಪರೀಕ್ಷೆ ಬರೆದ ಮೇಲೆ ಮನಸ್ಸು ನಿರಾಳವಾಯಿತು. ಮುಂದೆ, ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ಆರ್ಟಿಫಿಷಿಯಲ್ ಇಂಟಿಲೆಜೆನ್ಸ್‌ ಸಾಫ್ಟ್‌ವೇರ್ ತಂತ್ರಜ್ಞನಾಗುವ ಗುರಿ ಹೊಂದಿದ್ದೇನೆ’.

– ಅಭಿಷೇಕ್ ಜಯಂತ್ ಹೊಳ್ಳ, ಒಳಕಾಡು ಸರ್ಕಾರಿ ಪ್ರೌಢಶಾಲೆ ಉಡುಪಿ.

‘625 ಅಂಕಗಳು ಬರುವ ಆತ್ಮವಿಶ್ವಾಸವಿತ್ತು. ನಿರೀಕ್ಷೆಯಂತೆ ಅಂಕಗಳು ಬಂದಿವೆ. ಕೋವಿಡ್‌ನಿಂದ ತರಗತಿಗಳು ನಡೆಯದಿದ್ದರೂ, ಮನೆಯಲ್ಲಿ ಕಲಿಕೆಗೆ ಹೆಚ್ಚು ಸಮಯಾವಕಾಶ ದೊರೆಯಿತು. ಶಾಲೆಯ ಶಿಕ್ಷಕರು ಆನ್‌ಲೈನ್‌ನಲ್ಲಿ ಪಾಠಗಳನ್ನು ಮಾಡುವ ಮೂಲಕ ಮನಸ್ಸಿನಲ್ಲಿದ್ದ ಗೊಂದಲಗಳನ್ನು ಬಗೆಹರಿಸಿದರು. ಮುಂದೆ, ವೈದ್ಯನಾಗುವ ಗುರಿ ಇದೆ.

–ನವನೀತ್ ಎಸ್‌.ಆರ್‌, ಟಿ.ಎ.ಪೈ ಇಂಗ್ಲಿಷ್ ಮಾಧ್ಯಮ ಶಾಲೆ

ಕೋವಿಡ್‌ನಿಂದ ಶಾಲೆಗಳು ತೆರೆಯದಿದ್ದರೂ ಶಿಕ್ಷಕರು ಆನ್‌ಲೈನ್ ತರಗತಿಗಳ ಮೂಲಕ ಕೊರತೆ ತುಂಬಿದರು. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿದ್ದರಿಂದ ಪರೀಕ್ಷೆಯ ಬಗ್ಗೆ ಆತಂಕ ನಿವಾರಣೆಯಾಯಿತು. ಶೇ 100 ಅಂಕಗಳು ಬಂದಿರುವುದು ತುಂಬಾ ಖುಷಿಯಾಗಿದೆ. ಮುಂದೆ ಭಾರತೀಯ ಸೇನೆ ಸೇರುವ ಹಂಬಲ ಇದೆ.

–ಸಾತ್ವಿಕ್ ಪಿ.ಭಟ್‌, ಮಲ್ಪೆ ನಾರಾಯಣ ಗುರು ಇಂಗ್ಲಿಷ್ ಶಾಲೆ

ಪರೀಕ್ಷೆಗೆ ಹೆಚ್ಚು ಶ್ರಮಪಟ್ಟು ಓದಿದ್ದೆ. ಪರಿಣಾಮ 625 ಅಂಕಗಳು ಬಂದಿರುವುದು ತುಂಬಾ ಖುಷಿಯಾಗಿದೆ. ಶಿಕ್ಷಕರು ಪರೀಕ್ಷೆಯ ಗೊಂದಲಗಳನ್ನು ನಿವಾರಿಸಿದರು. ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿಸಿದರು. ಮುಂದೆ ವೈದ್ಯೆಯಾಗುವ ಕನಸು ಇದೆ.

–ಅನುಶ್ರೀ ಶೆಟ್ಟಿ, ಮದರ್ ಥೆರೆಸಾ ಶಾಲೆ ಶಂಕರ ನಾರಾಯಣ

ಬದಲಾದ ಪರೀಕ್ಷಾ ಪದ್ಧತಿಯಿಂದ ಆತಂಕವಾಗಿತ್ತು. ಆದರೆ, ಶಿಕ್ಷಕರು ಆನ್‌ಲೈನ್‌ನಲ್ಲಿ ಪರಿಣಾಮಕಾರಿಯಾಗಿ ಬೋಧಿಸಿದರು. ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿಸಿದರು. ಮನಸ್ಸಿನಲ್ಲಿದ್ದ ಗೊಂದಲಗಳನ್ನು ಬಗೆಹರಿಸಿದರು. ಜತೆಗೆ, ಮಹಾಮಾಹೆ ಫೌಂಡೇಷನ್‌ ಮಣಿಪಾಲ ಸಂಸ್ಥೆಯಿಂದ ಆನ್‌ಲೈನ್‌ ಕಲಿಕೆಗೆ ನೆರವು ಸಿಕ್ಕಿತು. ತಂದೆ–ತಾಯಿ ತುಂಬಾ ಪ್ರೋತ್ಸಾಹ ನೀಡಿದರು.

–ಸಮತಾ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಡುಪಿ

ಶಿಕ್ಷಕರು ಹಾಗೂ ಪೋಷಕರ ಪ್ರೋತ್ಸಾಹದಿಂದ ನಿರೀಕ್ಷೆಯಂತೆ ಅಂಕಗಳು ಬಂದಿವೆ. ಪರೀಕ್ಷೆಗೆ ಅಗತ್ಯ ತಯಾರಿ ಮಾಡಿಕೊಂಡಿದ್ದೆ. ಶಾಲೆಯಲ್ಲಿ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಿ ಎಂಸಿಕ್ಯೂ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿಸಿದರು. 20 ದಿನ ಆನ್‌ಲೈನ್‌ ತರಗತಿ ನಡೆಸಲಾಯಿತು. ಮುಂದೆ ಸಾಫ್ಟ್‌ವೇರ್ ಎಂಜಿನಿಯರ್ ಆಗುವ ಗುರಿ ಹೊಂದಿದ್ದೇನೆ. ಪ್ರತೀಕ್ಷಾ ಪೈ ಜಿ.ಆರ್.ಯೋಗೇಶ್ ಪೈ ಹಾಗೂ ವನಿತಾ ವೈ.ಪೈ ದಂಪತಿ ಪುತ್ರಿ

–ಪ್ರತೀಕ್ಷಾ ಪೈ, ಅನಂತೇಶ್ವರ ಶಾಲೆ ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT