ಬುಧವಾರ, ಅಕ್ಟೋಬರ್ 5, 2022
27 °C
ಹಬ್ಬಕ್ಕೆ ದರ ಏರಿಕೆ ಬಿಸಿ

ಉಡುಪಿ: ಶತಕ ದಾಟಿದ ಬೀನ್ಸ್‌, ಕೊತ್ತಮರಿ ಕೆ.ಜಿಗೆ ₹ 220!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನವರಾತ್ರಿ ಹಬ್ಬಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಮೀನಿಗಿಂತಲೂ ತರಕಾರಿ ದರವೇ ಹೆಚ್ಚಾಗಿರುವುದು ಗ್ರಾಹಕರನ್ನು ಚಿಂತೆಗೀಡುಮಾಡಿದೆ. ಹಬ್ಬದ ಸಂದರ್ಭ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕೊತ್ತಮರಿ ಸೊಪ್ಪಿನ ದರದಲ್ಲಿ ಭಾರಿ ಏರಿಕೆಯಾಗಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 200 ರಿಂದ ₹ 220 ದರ ಇದೆ. ತಿಂಗಳ ಹಿಂದೆ ಕೆ.ಜಿಗೆ ₹ 50 ಇದ್ದ ದರ ನಾಲ್ಕು ಪಟ್ಟು ಹೆಚ್ಚಾಗಿದೆ. ಕೊತ್ತಮರಿ ಹೆಚ್ಚಾಗಿ ಬೆಳೆಯುವ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಈಚೆಗೆ ಸುರಿದ ಭಾರಿ ಮಳೆಗೆ ಬೆಳೆ ನಾಶವಾಗಿರುವುದು ದರ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿ ಶಫೀಕ್‌.

ನವರಾತ್ರಿ ಹಬ್ಬಕ್ಕೆ ಪಲ್ಯ, ಸಾಂಬಾರ್, ಕೊಸಂಬರಿ, ವಡೆ ಸೇರಿದಂತೆ ಇತರ ಖಾದ್ಯಗಳ ತಯಾರಿಕೆಗೆ ಕೊತ್ತಮರಿ ಬಳಕೆ ಪ್ರದಾನವಾಗಿರುವುದರಿಂದ ಸದ್ಯ ದರ ಇಳಿಕೆಯಾಗುವುದಿಲ್ಲ. ಹಬ್ಬದ ನಂತರ ಕಡಿಮೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಮೆಂತೆ, ಪಾಲಕ್‌, ಅರಿವೆ, ದಂಟು, ಸಬ್ಬಸ್ಸಿಗೆ ಸೊಪ್ಪಿನ ದರವೂ ದುಪ್ಪಟ್ಟಾಗಿದೆ. 15 ದಿನಗಳ ಹಿಂದೆ ಕಟ್ಟಿಗೆ ₹ 5 ರಿಂದ ₹ 8 ದರ ಇತ್ತು. ಈಗ ಕಟ್ಟಿಗೆ ₹ 15 ಇದೆ. ಬೆಲೆ ಹೆಚ್ಚಾದರೂ ಗುಣಮಟ್ಟದ ಸೊಪ್ಪು ದೊರೆಯುತ್ತಿಲ್ಲ.

ಕಳೆದ ವಾರಕ್ಕೆ ಹೋಲಿಸಿದರೆ ಟೊಮೆಟೊ ದರ ಸ್ಥಿರತೆ ಕಾಯ್ದುಕೊಂಡಿದ್ದು ಕೆ.ಜಿಗೆ ₹ 40 ರಿಂದ ₹ 45ಕ್ಕೆ ಮಾರಾಟವಾಗುತ್ತಿದೆ. ಹೋಲ್‌ಸೇಲ್‌ನಲ್ಲಿ ₹ 35 ದರ ಇದೆ. ತಿಂಗಳ ಹಿಂದೆ ತೀರಾ ಅಗ್ಗವಾಗಿ, ಕಳೆದ ವಾರ ಗಗನಕ್ಕೇರಿದ್ದ ನುಗ್ಗೆಯ ದರ ಸ್ವಲ್ಪ ಕುಸಿದಿದೆ. ವಾರದ ಹಿಂದೆ ಕೆ.ಜಿಗೆ ₹ 150 ಇದ್ದ ದರ ಸದ್ಯ ₹ 100ಕ್ಕೆ ಇಳಿಕೆಯಾಗಿದೆ.

ಶತಕದ ಗಡಿ ದಾಟಿದ್ದ ಕ್ಯಾರೆಟ್‌ ಕೆ.ಜಿಗೆ ₹ 80ಕ್ಕೆ ಇಳಿದಿದೆ. ಬೀನ್ಸ್‌ ದರ ಮಾತ್ರ ₹ 100 ರಿಂದ ₹ 120 ರವರೆಗೂ ಮಾರಾಟವಾಗುತ್ತಿವೆ. ಹೂಕೋಸು ₹ 60 ರಿಂದ ₹ 80ಕ್ಕೆ ಜಿಗಿದರೆ, ಎಲೆಕೋಸು ₹ 30ರಿಂದ ₹ 40, ಸಾಂಬಾರ್ ಸೌತೆ ₹ 40 ರಿಂದ ₹ 55, ಬದನೆಕಾಯಿ ₹ 60 ರಿಂದ ₹ 70, ಬೆಂಡೆಕಾಯಿ ₹ 40 ರಿಂದ ₹ 60, ಮೂಲಂಗಿ ₹ 50ರಿಂದ ₹ 70, ಗೆಡ್ಡೆಕೋಸು 45 ರಿಂದ 70ಕ್ಕೆ ಏರಿಕೆಯಾಗಿದೆ.

ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿಗಳ ದರ ಸ್ವಲ್ಪ ಹೆಚ್ಚು, ಸ್ವಲ್ಪ ಕಡಿಮೆಯಾಗಿದೆ. ಹೀರೇಕಾಯಿ ಕೆ.ಜಿಗೆ ₹ 80, ಬೀಟ್‌ರೂಟ್‌ ₹60, ಈರುಳ್ಳಿ 30, ಮೆಣಸಿಕಾಯಿ ₹ 45, ಕ್ಯಾಪ್ಸಿಕಂ ₹80, ಹಾಗಲಕಾಯಿ ₹ 80, ಆಲೂಗಡ್ಡೆ ₹35, ನಿಂಬೆಹಣ್ಣು 10ಕ್ಕೆ ಮೂರು, ಚವಳಿಕಾಯಿ ₹ 60, ಬೆಳ್ಳುಳ್ಳಿ ₹80 ದರ ಇದೆ.

ಹಣ್ಣಿನ ದರ ಕೂಡ ಗಗನಮುಖಿಯಾಗಿದೆ. ಸಪೋಟ ಕೆ.ಜಿಗೆ 120, ಸೇಬಿಗೆ ಗುಣಮಟ್ಟದ ಆಧಾರದ ಮೇಲೆ 120 ರಿಂದ ₹ 250ರವರೆಗೆ ದರ ಇದೆ. ಬಾಳೆಹಣ್ಣು ಶತಕದ ಗಡಿ ಮುಟ್ಟಿದೆ. ದಾಳಿಂಬೆ ₹ 200, ಮೋಸಂಬಿ ₹ 70, ಕಿತ್ತಳೆ 80 ದರ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು