ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ| ರಂಗೇರಿದ ಪ್ರಚಾರ ಕಣ: ಮತಬೇಟೆಗೆ ಕಸರತ್ತು ಆರಂಭ

ಬಿಜೆಪಿ ಕಾಂಗ್ರೆಸ್‌ನಿಂದ ತಲಾ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‌
Last Updated 12 ಏಪ್ರಿಲ್ 2023, 13:37 IST
ಅಕ್ಷರ ಗಾತ್ರ

ಉಡುಪಿ: ವಿಧಾನಸಭಾ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಜಿಲ್ಲೆಯಲ್ಲಿ ಪ್ರಚಾರ ಕಣ ರಂಗು ಪಡೆದುಕೊಳ್ಳುತ್ತಿದೆ. ಟಿಕೆಟ್ ಘೋಷಣೆ ಬೆನ್ನಲ್ಲೇ ಅಭ್ಯರ್ಥಿಗಳು ಮತಬೇಟೆಗೆ ಕಸರತ್ತು ಆರಂಭಿಸಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಯಶ್‌ಪಾಲ್ ಸುವರ್ಣ ಬುಧವಾರ ಬಿಡುವಿಲ್ಲದ ರಾಜಕೀಯ ಸಭೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹಿರಿಯ ನಾಯಕರು, ಕಾರ್ಯಕರ್ತರನ್ನು ಭೇಟಿಯಾಗಿ ಬೆಂಬಲ ಕೋರಿದರು.

ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿನೀಡಿದ ಯಶ್‌ಪಾಲ್ ಅವರಿಗೆ ಬಿಜೆಪಿ ಜಿಲ್ಲಾ ಘಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಯಶ್‌ಪಾಲ್ ಸಭೆ ನಡೆಸಿದರು. ಬಳಿಕ ಮಣಿಪಾಲಕ್ಕೆ ತೆರಳಿ ದಿ.ಡಾ.ವಿ.ಎಸ್. ಆಚಾರ್ಯರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಬುಧವಾರ ಶಾಸಕ ಲಾಲಾಜಿ ಮೆಂಡನ್ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಮುಖಂಡರ ಜತೆ ಚರ್ಚಿಸಿದರು.

ಕುಂದಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಕ್ಷೇತ್ರದಾದ್ಯಂತ ಮತದಾರರು, ಕಾರ್ಯಕರ್ತರು ಹಾಗೂ ಪಕ್ಷದ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಕ್ಷೇತ್ರಭೇಟಿಯಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ ಗರಿಗೆದರಿದ ಚಟುವಟಿಕೆ:

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಪು, ಉಡುಪಿ, ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದು ಪ್ರಚಾರ ಚುರುಕು ಪಡೆದುಕೊಂಡಿದೆ. ಅಭ್ಯರ್ಥಿಗಳು ಮಠ ಮಂದಿರಗಳಿಗೆ ಭೇಟಿನೀಡಿ ದೇವರ ಹಾಗೂ ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತಿದ್ದಾರೆ. ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಮತಯಾಚನೆ ಆರಂಭವಾಗಿದೆ.

ಕುಂದಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೊಳಹಳ್ಳಿ ದಿನೇಶ್‌ ಹೆಗ್ಡೆ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿ ಬೂತ್‌ ಮಟ್ಟದಲ್ಲೂ ಕಾರ್ಯಕರ್ತರು ಮತದಾರರನ್ನು ಸಂಪರ್ಕಿಸಿ ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ ಕಾಂಗ್ರೆಸ್ ಸರ್ಕಾರದ ಅವಧಿಯ ಜನಪ್ರಿಯ ಯೋಜನೆಗಳನ್ನು ತಿಳಿಸುತ್ತಿದ್ದಾರೆ.

ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಹಂಗಳೂರು, ಕೋಟ, ಮಂದಾರ್ತಿಯಲ್ಲಿ ಈಗಾಗಲೇ ಬೃಹತ್ ಮಹಿಳಾ ಸಮಾವೇಶಗಳನ್ನು ಸಂಘಟಿಸಲಾಗಿದೆ.

ಬೈಂದೂರಿನಲ್ಲಿ ಪ್ರಚಾರ ಜೋರು:

ಬೈಂದೂರು ಕ್ಷೇತ್ರದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ್ ಪೂಜಾರಿ ಪ್ರಚಾರ ಜೋರಾಗಿದ್ದು ಈಗಾಗಲೇ 248 ಬೂತ್‌ಗಳಲ್ಲಿ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಲಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆಗಳಿಗೂ ಭೇಟಿನೀಡಿ ಕಾಂಗ್ರೆಸ್‌ನ ಗ್ಯಾರಂಟಿ ಗಾರ್ಡ್‌ಗಳನ್ನು ವಿತರಿಸಿ ಪಕ್ಷದ ಸಾಧನೆಗಳನ್ನು ತಿಳಿಸಲಾಗುತ್ತಿದೆ. ಗೋಪಾಲ್ ಪೂಜಾರಿ ಏ.18ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.

ಪ್ರಸಾದ್ ರಾಜ್ ಕಾಂಚನ್‌ ಪ್ರಚಾರ ಜೋರು:

ಟಿಕೆಟ್‌ ಘೋಷಣೆಯಾದ ದಿನದಿಂದಲೂ ಉಡುಪಿಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್‌ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠದ ಯತಿ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಗೂ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಮಲ್ಪೆಯ ಕಲ್ಮಾಡಿ ಚರ್ಚ್‌, ದೈವಸ್ಥಾನಗಳಿಗೂ ಭೇಟಿನೀಡಿ ಪೂಜೆ ಸಲ್ಲಿಸಿದ್ದಾರೆ.

ಉಡುಪಿ ಹಾಗೂ ಬ್ರಹ್ಮಾವರ ಭಾಗದ ಸ್ಥಳೀಯ ಮುಖಂಡರ ಜತೆ ಸಭೆ ನಡೆಸಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದ್ದು ಪಕ್ಷದಲ್ಲಿ ಎದ್ದಿರುವ ಬಂಡಾಯ ಶಮನ ನಿಟ್ಟಿನಲ್ಲೂ ಪ್ರಯತ್ನಿಸುತ್ತಿದ್ದಾರೆ.

ಚುನಾವಣೆಗೂ ಮುನ್ನವೇ ಕಾಪು ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಪ್ರಚಾರ ಬಿರುಸುಗೊಳಿಸಿದ್ದಾರೆ. ಮನೆಮನೆಗೆ ತೆರಳಿ ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜೆಡಿಎಸ್‌ ಕೂಡ ಇದುವರೆಗೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ. ಮೈತ್ರಿ ನಿರ್ಧಾರವನ್ನೂ ಪ್ರಕಟಿಸಿಲ್ಲ. ಆಪ್‌ ಸೇರಿದಂತ ಇತರ ಪಕ್ಷಗಳು ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT