ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಸ್ವತ್ತು ಸಮಸ್ಯೆಯ ತಾರ್ಕಿಕ ಪರಿಹಾರಕ್ಕೆ ಕ್ರಮ: ಸಚಿವ ಹೆಬ್ಬಾರ

ಗ್ರಾ.ಪಂ.ಗಳಿಗೆ ತ್ಯಾಜ್ಯ ವಿಲೇವಾರಿ ವಾಹನ ಹಸ್ತಾಂತರ, ನೈರ್ಮಲ್ಯ ಪ್ರಶಸ್ತಿ ಪ್ರದಾನ
Last Updated 1 ನವೆಂಬರ್ 2021, 15:32 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ಇ ಸ್ವತ್ತು ಮತ್ತು ಫಾರ್ಮ್ ನಂ 3 ದೊಡ್ಡ ಸಮಸ್ಯೆ ತಂದಿಟ್ಟಿವೆ. ಅದರ ನಿವಾರಣೆಗೆ ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ತಾರ್ಕಿಕ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಜಿಲ್ಲ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಭರವಸೆ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿಯಿಂದ ‘ಸ್ವಚ್ಛ ಭಾರತ ಅಭಿಯಾನ– ಗ್ರಾಮೀಣ ಯೋಜನೆ’ಯಡಿ 30 ಗ್ರಾಮ ಪಂಚಾಯಿತಿಗಳಿಗೆ ತ್ಯಾಜ್ಯ ವಿಲೇವಾರಿ ವಾಹನಗಳ ಹಸ್ತಾಂತರ, 12 ಗ್ರಾಮ ಪಂಚಾಯಿತಿಗಳಿಗೆ ನೈರ್ಮಲ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಐವರು ಸದಸ್ಯರ ಉಪ ಸಮಿತಿಯಲ್ಲಿ ನಾನೂ ಇದ್ದೇನೆ. ಜಿಲ್ಲೆಯ ಜನ ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದರು.

‘ಗಾಂಧೀಜಿ ಕಂಡಿದ್ದ ಸ್ವಚ್ಛ ದೇಶ– ಸಮೃದ್ಧ ದೇಶವೆಂಬ ಕನಸನ್ನು ನಮ್ಮ ಜಿಲ್ಲೆಯಲ್ಲೂ ಸಾಕಾರಗೊಳಿಸಬೇಕು. ಸ್ವಚ್ಛತೆಯಲ್ಲಿ ದೇಶದಲ್ಲಿಯೇ ನಮ್ಮ ಜಿಲ್ಲೆ ಮುಂಚೂಣಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ 150 ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗುತ್ತಿದ್ದು, 87 ಕಾರ್ಯಾರಂಭಿಸಿವೆ. 229 ಗ್ರಾಮ ಪಂಚಾಯಿತಿಗಳಲ್ಲಿ 99ಕ್ಕೆ ಕಸ ವಿಲೇವಾರಿ ವಾಹನಗಳನ್ನು ನೀಡಲಾಗುವುದು. ಮುಖ್ಯಮಂತ್ರಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗಳ ವ್ಯವಸ್ಥೆಗಳಲ್ಲಿ ಬದಲಾವಣೆ ತರುವುದು ಮೂಲ ಉದ್ದೇಶವಾಗಿದೆ’ ಎಂದು ವಿವರಿಸಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಗ್ರಾಮ ನೈರ್ಮಲ್ಯ ಯೋಜನೆಯು 2005ರ ಅ.2ರಂದು ಆರಂಭವಾಯಿತು. ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸಾಗಿಸಲು ಮುಂದಾಗಿದ್ದಾರೆ. ನಗರಗಳಲ್ಲಿ ಇರುವಂಥ ತ್ಯಾಜ್ಯ ವಿಲೇವಾರಿ ವಾಹನಗಳನ್ನು ಗ್ರಾಮಗಳಿಗೂ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ಗ್ರಾಮಗಳಿಗೆ ಪ್ರಶಸ್ತಿ ಪ್ರದಾನ:12 ಗ್ರಾಮ ಪಂಚಾಯಿತಿಗಳಿಗೆ ಸಚಿವ ಹೆಬ್ಬಾರ ‘ನೈರ್ಮಲ್ಯ ಪ್ರಶಸ್ತಿ’ ಪ್ರದಾನ ಮಾಡಿದರು. ಕಾರವಾರದ ಚಿತ್ತಾಕುಲಾ, ಅಂಕೋಲಾದ ಅಚವೆ, ಕುಮಟಾದ ಹನೇಹಳ್ಳಿ, ಹೊನ್ನಾವರದ ಹೇರಂಗಡಿ, ಭಟ್ಕಳದಶಿರಾಲಿ, ಶಿರಸಿಯ ಯಡಳ್ಳಿ, ಸಿದ್ದಾಪುರದ ಕಾನಗೋಡ, ಯಲ್ಲಾಪುರದ ಮದ್ನೂರು, ಮುಂಡಗೋಡದ ನಂದಿಕಟ್ಟಾ, ಹಳಿಯಾಳದ ತಟ್ಟಿಗೇರಾ, ಜೊಯಿಡಾ ಉಳವಿ, ದಾಂಡೇಲಿಯ ಆಲೂರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಪ್ರಶಸ್ತಿ ಪಡೆದರು.

ಇದೇವೇಳೆ, ಬಯಲು ಬಹಿರ್ದೆಸೆ ಮುಕ್ತ ಪ್ಲಸ್ (ಒ.ಡಿಎಫ್ ಪ್ಲಸ್) ಆದ 66 ಗ್ರಾಮಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಾಂಕೇತಿಕವಾಗಿ ಶಿರಸಿಯ ಹುಲೇಕಲ್ ಮತ್ತು ಕಾರವಾರದ ಚಿತ್ತಾಕುಲಾ ಗ್ರಾಮ ಪಂಚಾಯಿತಿಗಳಿಗೆ ನೀಡಲಾಯಿತು.

ಘನತ್ಯಾಜ್ಯ ವಿಲೇವಾರಿ ಸಂಬಂಧ ಚಿತ್ತಾಕುಲಾದ ಸಂಜೀವಿನಿ ಗ್ರಾಮ ಒಕ್ಕೂಟ ಹಾಗೂ ಅಂಕೋಲಾದ ಕಾತ್ಯಾಯಿನಿ ಸಂಜೀವಿನಿ ಒಕ್ಕೂಟದೊಂದಿಗೆ ಜಿಲ್ಲಾಡಳಿತದ ಒಪ್ಪಂದದ ಪ್ರತಿಯನ್ನು ಹಸ್ತಾಂತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಪ್ರಾಸ್ತವಿಕವಾಗಿ ಮಾತನಾಡಿದ ಸ್ವಾಗತಿಸಿದರು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ವೇದಿಕೆಯಲ್ಲಿದ್ದರು. ಸೂರ್ಯನಾರಾಯಣ ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT