ಮಂಗಳವಾರ, ಜುಲೈ 5, 2022
27 °C
ಜೋಗದಿಂದ ಅಂಬೇವಾಡಿವರೆಗೆ 110ಕೆವಿ ಮಾರ್ಗ ದುರಸ್ಥಿ

ಜೋಗದಿಂದ ಅಂಬೇವಾಡಿ; ಏಳು ದಶಕದ ಬಳಿಕ ಪರಿಕರ ಬದಲಾವಣೆ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಜೋಗದ ‘ಮಹಾತ್ಮಾ ಗಾಂಧಿ ಜಲವಿದ್ಯುದಾಗಾರ’ ವಿದ್ಯುತ್ ಉತ್ಪಾದನೆ ಆರಂಭಿಸಿದ ಏಳು ದಶಕಗಳ ಬಳಿಕ ಅಲ್ಲಿಂದ ಉತ್ತರ ಕನ್ನಡಕ್ಕೆ ವಿದ್ಯುತ್ ಪೂರೈಕೆ ಮಾಡುವ ಮಾರ್ಗದಲ್ಲಿ ಹಳೆಯ ಪರಿಕರ ಬದಲಿಸುವ ಕಾರ್ಯ ನಡೆಯುತ್ತಿದೆ.

ಜಲವಿದ್ಯುದಾಗಾರದಿಂದ ಅಂಬೇವಾಡಿ, ಕಾವಲವಾಡಾದಲ್ಲಿರುವ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ವಿದ್ಯುತ್ ಪೂರೈಸುವ ಮಾರ್ಗದ ಬಹುಪಾಲು ಪರಿಕರ ಬದಲಿಸಲಾಗುತ್ತಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್‍) ಬೃಹತ್ ಕಾಮಗಾರಿ ವಿಭಾಗ ₹58 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ. ಕಳೆದ ವರ್ಷವೇ ಕಾಮಗಾರಿ ಆರಂಭಗೊಂಡರೂ ಹಲವು ಅಡೆತಡೆ ಎದುರಿಸಿದೆ. ಸದ್ಯ ಶಿರಸಿ ಸಮೀಪದ ಕಾಳೇನಳ್ಳಿವರೆಗೆ ಪರಿಕರ ಬದಲಾವಣೆ ಕೆಲಸ ಮುಗಿದಿದೆ.

ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿರುವ ಜಲವಿದ್ಯುದಾಗಾರದಿಂದ ಹಳಿಯಾಳದ ಅಂಬೇವಾಡಿ, ಕಾವಲವಾಡಾವರೆಗೆ ಹಾದುಹೋಗಿರುವ ಸುಮಾರು 127 ಕಿ.ಮೀ. ಉದ್ದದ 110ಕೆವಿ ವಿದ್ಯುತ್ ಮಾರ್ಗದ ಪರಿಕರ ಬದಲಿಸುವ ಕೆಲಸ ನಡೆಯಬೇಕಿದೆ.

‘ಜೋಗದಿಂದ ಉತ್ತರ ಕನ್ನಡ ಸೇರಿದಂತೆ ಹುಬ್ಬಳ್ಳಿ, ಇನ್ನಿತರ ಭಾಗಕ್ಕೆ ವಿದ್ಯುತ್ ಪೂರೈಕೆ ಮಾಡುವ ಪ್ರಮುಖ ಮಾರ್ಗ ಇದಾಗಿದೆ. ಹಳೆಯ ಪರಿಕರಗಳ ಬದಲಾವಣೆಗೆ 10 ವರ್ಷಗಳ ಹಿಂದೆಯೇ ಯೋಜನೆ ಸಿದ್ಧಗೊಂಡಿತ್ತು. ಆದರೆ, ಅರಣ್ಯ ಇಲಾಖೆ ಅನುಮತಿ ಸಿಗದೆ ನನೆಗುದಿಗೆ ಬಿದ್ದಿತ್ತು’ ಎಂದು ಕೆಪಿಟಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.

‘ಯೋಜನೆ ಆರಂಭಗೊಂಡ 1952ರಿಂದ ಈವರೆಗೆ ಬಹುತೇಕ ಪರಿಕರಗಳನ್ನು ಬದಲಿಸಿರಲಿಲ್ಲ. ಅರಣ್ಯ ಪ್ರದೇಶಗಳಲ್ಲಿ ಟಾವರ್ ಸ್ಥಾಪನೆಯಾಗಿದ್ದರಿಂದ ದುರಸ್ಥಿಗೆ ಅನುಮತಿ ಸಿಗಲು ತಡವಾಯಿತು. ಜೋಗದಿಂದ ಶಿರಸಿವರೆಗೆ 177 ಟಾವರ್ ಬದಲಿಸಲಾಗಿದೆ. ಅಂಬೇವಾಡಿವರೆಗೆ ಬಾಕಿ ಇರುವ 223 ಟಾವರ್‌ಗಳನ್ನು ಬದಲಿಸಲಿದ್ದೇವೆ’ ಎಂದು ಕೆ.ಪಿ.ಟಿ.ಸಿ.ಎಲ್. ಬೃಹತ್ ಕಾಮಗಾರಿ ವಿಭಾಗದ ಎಇಇ ಎಸ್.ಜಿ.ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘120 ಕಿ.ಮೀ.ನಷ್ಟು ಉದ್ದದ ಮಾರ್ಗಕ್ಕೆ ಹೊಸದಾಗಿ ತಂತಿ, ಸಾವಿರಕ್ಕೂ ಹೆಚ್ಚು ಲಿಂಕ್ಸ್ ಕಂಡಕ್ಟರ್ ಅಳವಡಿಕೆಯಾಗಲಿದೆ. ಮೊದಲು ಗರಿಷ್ಠ 30 ಮೆಗಾ ವ್ಯಾಟ್ ವಿದ್ಯುತ್ ಪ್ರವಹಿಸಲು ಸಾಮರ್ಥ್ಯ ಹೊಂದಿದ್ದ ತಂತಿಗಳಿದ್ದವು. ಈಗ 60 ಮೆಗಾ ವ್ಯಾಟ್ ಸಾಮರ್ಥ್ಯಕ್ಕೆ ಹೊಂದಿಕೊಳ್ಳುವ ತಂತಿ ಅಳವಡಿಸಲಾಗುತ್ತಿದೆ’ ಎಂದು ವಿವರಿಸಿದರು.

1962ರಲ್ಲಿ ಶಿರಸಿಗೆ ವಿದ್ಯುತ್:

ಜೋಗದಲ್ಲಿ ಶರಾವತಿ ವಿದ್ಯುದಾಗಾರ(ಮಹಾತ್ಮ ಗಾಂಧಿ ಜಲವಿದ್ಯುದಾಗಾರ) 1952ರಲ್ಲಿ ಕಾರ್ಯಾರಂಭಿಸಿದ್ದರೂ, ಅಲ್ಲಿಂದ ಉತ್ತರ ಕನ್ನಡದ ಮಾರ್ಗವಾಗಿ ಹುಬ್ಬಳ್ಳಿಗೆ ವಿದ್ಯುತ್ ಪೂರೈಕೆ ಆಗಿತ್ತು. 1962ರಲ್ಲಿ ಶಿರಸಿಯಲ್ಲಿ ಗ್ರಿಡ್ ಸ್ಥಾಪಿಸಿ ಇಲ್ಲಿಗೆ ವಿದ್ಯುತ್ ಪೂರೈಕೆ ಮಾಡಲಾಯಿತು. ಆ ಬಳಿಕ ಅಂಬೇವಾಡಿಯಲ್ಲೂ ವಿದ್ಯುತ್ ಉತ್ಪಾದನಾ ಕೇಂದ್ರ ಆರಂಭಗೊಂಡ ಬಳಿಕ ಗ್ರಿಡ್‍ಗಳ ಸಂಖ್ಯೆ ಏರಿಕೆಯಾಗಿದೆ. ಸುಮಾರು ಆರಕ್ಕೂ ಹೆಚ್ಚು ಗ್ರಿಡ್‍ಗಳು ಈ ಮಾರ್ಗದಲ್ಲಿವೆ.

* ಜೋಗದಿಂದ ಅಂಬೇವಾಡಿವರೆಗಿನ 110 ಕೆವಿ ಮಾರ್ಗದ ಪರಿಕರ ಬದಲಾವಣೆ ಕೆಲಸ ಕೆಲವೇ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು

-ಎಸ್.ಜಿ.ಹೆಗಡೆ, ಕೆ.ಪಿ.ಟಿ.ಸಿ.ಎಲ್. ಬೃಹತ್ ಕಾಮಗಾರಿ ವಿಭಾಗದ ಎಇಇ

ಅಂಕಿ–ಅಂಶ

1952

ಜಲವಿದ್ಯುದಾಗಾರ ಕಾರ್ಯಾರಂಭಿಸಿದ ವರ್ಷ

₹58 ಕೋಟಿ

ಪರಿಕರ ಬದಲಾವಣೆಗೆ ತಗಲುವ ವೆಚ್ಚ

400

ವಿದ್ಯುತ್ ಟವರ್ ಬದಲಾವಣೆ

127 ಕಿ.ಮೀ.

ವಿದ್ಯುತ್ ಮಾರ್ಗದ ಉದ್ದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು