ಗುರುವಾರ , ಜೂನ್ 24, 2021
21 °C
ಆಂಬುಲೆನ್ಸ್ ನಿಲ್ಲುವ ಜಾಗದಲ್ಲಿ ವೈದ್ಯಾಧಿಕಾರಿ ಕೂರುವ ಪರಿಸ್ಥಿತಿ

ಗೋಕರ್ಣ | ಸೋರುತ್ತಿದೆ ಆರೋಗ್ಯ ಕೇಂದ್ರದ ಚಾವಣಿ!

ರವಿ ಸೂರಿ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವು ಪುರಾತನ ಕಟ್ಟಡದಲ್ಲಿದ್ದು, ಮಳೆ ಬಂದಾಗ ಸೋರುತ್ತಿದೆ. ವೈದ್ಯಾಧಿಕಾರಿಗಳ ಕೊಠಡಿಯಲ್ಲೂ ನೀರು ನಿಲ್ಲುತ್ತಿದೆ. ರೋಗಿಗಳ ತಪಾಸಣೆ ಮಾಡಲು ಸ್ಥಳವಿಲ್ಲದೇ ಆಂಬುಲೆನ್ಸ್ ನಿಲ್ಲುವ ಜಾಗದಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. 

ಈ ಆಸ್ಪತ್ರೆ ಅತ್ಯಂತ ಪುರಾತನವಾಗಿದ್ದು, 1846ರಲ್ಲೇ ನಿರ್ಮಿಸಲಾಗಿದೆ. ಒಂದು ಕಾಲದಲ್ಲಿ ಈ ಭಾಗದ ಅತ್ಯಂತ ಪ್ರಸಿದ್ಧ ಸುಸಜ್ಜಿತ ಆರೋಗ್ಯ ಕೇಂದ್ರ ಎಂಬ ಹೆಗ್ಗಳಿಕೆಯೂ ಇತ್ತು. ಆದರೆ, ಕಾಲ ಕ್ರಮೇಣ ಆಸ್ಪತ್ರೆಯ ಪರಿಸ್ಥಿತಿಯೂ ಸೊರಗುತ್ತಾ ಹೋಗಿದೆ.

ಔಷಧ ಸಂಗ್ರಹ ಕೊಠಡಿಯಲ್ಲೂ ಚಾವಣಿ ಸೋರುತ್ತಿದೆ. ಈ ಆಸ್ಪತ್ರೆಯ ಬಗ್ಗೆ ಅನೇಕ ಸಂಘ ಸಂಸ್ಥೆಗಳು, ಮೇಲಧಿಕಾರಿಗಳಿಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.

ಹೆಚ್ಚಿನ ಒತ್ತಡ: ಈ ಮೊದಲು ಮೂವರು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ಈಗ ಒಬ್ಬರೇ ಇದ್ದಾರೆ.  ಇದು ಪ್ರಾಥಮಿಕ ಆರೋಗ್ಯ ಕೇಂದ್ರವಾದರೂ ಇಲ್ಲಿನ ವೈದ್ಯಾಧಿಕಾರಿಗಳಿಗೆ ತಾಲ್ಲೂಕು ಆಸ್ಪತ್ರೆಯಷ್ಟೇ ಕೆಲಸವಿದೆ. ತಿಂಗಳಲ್ಲಿ 15 ದಿವಸ ಸರ್ಕಾರಿ ಕಚೇರಿ ಹಾಗೂ ಕೋರ್ಟಿನ ಕೆಲಸಗಳಿರುತ್ತವೆ. ಉಳಿದ ಸಮಯದಲ್ಲಿ ರೋಗಿಗಳ ತಪಾಸಣೆ, ಆರೋಗ್ಯ ಇಲಾಖೆಯ ಕೆಲಸ, ವಿದೇಶಿಯರೂ ಸೇರಿದಂತೆ ಬಂದ ಪ್ರವಾಸಿಗರ ತಪಾಸಣೆ ಕಾರ್ಯವಿರುತ್ತದೆ. ಇದರಿಂದ ಅವರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.

ಕನಿಷ್ಠ ಇಬ್ಬರು ವೈದ್ಯರನ್ನಾದರೂ ಇಲ್ಲಿಗೆ ನಿಯೋಜಿಸುವಂತೆ ಹಾಗೂ ಹೊಸ ಕಟ್ಟಡ ನಿರ್ಮಿಸುವಂತೆ ಆರೋಗ್ಯ ಇಲಾಖೆಗೆ ಇಲ್ಲಿನ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಆದರೆ, ಈ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ. ಆಗ ವೈದ್ಯರ ಸಂಖ್ಯೆಯೂ ಹೆಚ್ಚಲಿದ್ದು, ಹೊಸ ಕಟ್ಟಡವೂ ನಿರ್ಮಾಣವಾಗಲಿದೆ ಎಂಬ ಸಮಜಾಯಿಷಿ ಬರುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

‘ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಮೇಲಧಿಕಾರಿಗಳಿಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಕುಮಟಾ ತಾಲ್ಲೂಕು ವೈದ್ಯಾಧಿಕಾರಿ ಆಜ್ಞಾ ನಾಯಕ ಪ್ರತಿಕ್ರಿಯಿಸಿದ್ದಾರೆ.

ಶಾಸಕರಿಂದ ಮನವಿ: ಗೋಕರ್ಣ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು ದೇಶ ವಿದೇಶಗಳಿಂದ ನಿತ್ಯವೂ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಗೋಕರ್ಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ, ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು