ಸೋಮವಾರ, ಜುಲೈ 26, 2021
21 °C

ರಾಜ್ಯದಲ್ಲಿ ರಾಜಕೀಯ ವಿಪ್ಲವ ಸುಖಾಂತ್ಯ: ಕೋಡಿಮಠದ ಶ್ರೀ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ರಾಜ್ಯದಲ್ಲಿ ಸದ್ಯ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ತಾಲ್ಲೂಕಿನ ನೇರಲಕಟ್ಟೆ (ಈಚಲಬೆಟ್ಟ) ಗ್ರಾಮದಲ್ಲಿರುವ ಭೂದೇವಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರ ಜತೆ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಸ್ವಾತಂತ್ರ್ಯವಿದೆ. ಅದಕ್ಕೆ ಸ್ವಾಮೀಜಿಗಳು ಹೊರತಾಗಿಲ್ಲ’ ಎಂದು ಪರೋಕ್ಷವಾಗಿ ವೀರಶೈವ ಸ್ವಾಮೀಜಿಗಳ ನಡೆ ಸಮರ್ಥಿಸಿದರು.

‘ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಗಿತ್ತು. ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ. ಆದರೆ ಸದ್ಯವೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ’ ಎಂದಷ್ಟೆ ಹೇಳಿದರು.

‘ನವೆಂಬರ್‌ನಿಂದ ಸಂಕ್ರಾಂತಿ ನಡುವೆ ದೇಶ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸುತ್ತದೆ’ ಎಂದರು.

‘ಆಗಸ್ಟ್‌ ಮೂರನೇ ವಾರದಿಂದ ಕೋವಿಡ್ ಹಾವಳಿ ಹೆಚ್ಚಲಿದೆ. ರೋಗದಿಂದ ಜನರು ಸಾಯುವುದಿಲ್ಲ. ರೋಗದ ಭಯದಿಂದಲ್ಲೇ ಸಾಯುವವರ ಸಂಖ್ಯೆ ಹೆಚ್ಚಲಿದೆ. ಜನ ಧೈರ್ಯ ಕಳೆದುಕೊಳ್ಳಬಾರದು’ ಎಂದರು.

‘ಮಳೆ, ಗಾಳಿ ಅಧಿಕವಾಗಲಿದೆ. ಕೆರೆಕಟ್ಟೆಗಳು ಭರ್ತಿಯಾಗಿ, ಜಲಪ್ರಳಯ ಸಂಭವಿಸಲಿದೆ. ಪಂಚಭೂತಗಳಿಂದಲೂ ಈ ವರ್ಷ ಅನಾಹುತ ಸಂಭವಿಸಲಿದೆ’ ಎಂದರು.

ಇದನ್ನೂ ಓದಿ... ಕೇಂದ್ರ ಅನಗತ್ಯ ಮೂಗು ತೂರಿಸುವುದು ಸರಿಯಲ್ಲ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು