ಮಂಗಳವಾರ, ಏಪ್ರಿಲ್ 20, 2021
27 °C
‘ಕ್ರಿಮ್ಸ್’ನ ಹೊರಗುತ್ತಿಗೆ ಸಿಬ್ಬಂದಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ಕಾರವಾರ: ಗುತ್ತಿಗೆ ಏಜೆನ್ಸಿ ಬದಲಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ಪೂರೈಕೆ ಮಾಡುವ ಸಂಸ್ಥೆಯ ಗುತ್ತಿಗೆ ರದ್ದು ಮಾಡಬೇಕು. ಸಿಬ್ಬಂದಿಗೆ ಸೌಲಭ್ಯ ಕೊಡುವವನ್ನು ನೇಮಿಸಬೇಕು ಎಂದು ಆಗ್ರಹಿಸಿ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಧರಣಿ ಆರಂಭಿಸಿದರು.

‘ಕ್ರಿಮ್ಸ್’ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದ ನೌಕರರು, ಜನಪ್ರತಿನಿಧಿಗಳು ತಮ್ಮ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡರು. 

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರವಾರ ಮೆಡಿಕಲ್ ಕಾಲೇಜು ಸಿವಿಲ್ ಆಸ್ಪತ್ರೆ ಗುತ್ತಿಗೆ ನೌಕರರ ಸಂಘದ ಮುಖಂಡ ವಿಲ್ಸನ್ ಫರ್ನಾಂಡಿಸ್, ‘18 ವರ್ಷಗಳಿಂದಲೂ ದುಡಿಯತ್ತಿರುವ ಸಿಬ್ಬಂದಿಗೆ ಕಾರ್ಮಿಕ ಭವಿಷ್ಯ ನಿಧಿ ಹಾಗೂ ಇ.ಎಸ್.ಐ ಮೊತ್ತವನ್ನು ಗುತ್ತಿಗೆದಾರರು ಪಾವತಿಸದೇ ಮೋಸ ಮಾಡಿದ್ದಾರೆ. ಸರಿಯಾಗಿ ಪಾವತಿಸುತ್ತಿದ್ದ ಹುಬ್ಬಳ್ಳಿಯ ಯೂನಿರ್ವಸಲ್ ಏಜೆನ್ಸಿಯ ಗುತ್ತಿಗೆಯನ್ನು ರದ್ದು ಮಾಡಲಾಗಿದೆ. ಸಿಬ್ಬಂದಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡುವ ಏಜೆನ್ಸಿಯನ್ನೇ ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

‘ಸಿಬ್ಬಂದಿಗೆ ಆಗಿರುವ ಅನ್ಯಾಯದ ಬಗ್ಗೆ ಕಾರ್ಮಿಕ ಸಚಿವರು ಹಾಗೂ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಸರ್ಕಾರ ಹಣ ಕೊಟ್ಟರೂ ಗುತ್ತಿಗೆದಾರರು ಸಿಬ್ಬಂದಿಗೆ ಪಾವತಿಸಿಲ್ಲ. ಗುತ್ತಿಗೆ ಪಡೆದಿರುವ ಕುಮಟಾದ ಮಧುರಾ ಏಜೆನ್ಸಿ ಸಿಬ್ಬಂದಿಗೆ ಅನ್ಯಾಯ ಮಾಡಿದ್ದು, ಅದನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ. ಅದರ ಪ್ರಮುಖರು ಕಾರ್ಮಿಕ ಇಲಾಖೆಯಿಂದ ನೋಟಿಸ್ ಬಂದರೂ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

‘ಒಂದುವೇಳೆ, ತಮಗೆ ಆಗುತ್ತಿರುವ ಅನ್ಯಾಯವನ್ನು ಹೇಳಿಕೊಂಡರೆ ಕೆಲಸದಿಂದಲೇ ವಜಾ ಮಾಡುತ್ತಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಸಂಸ್ಥೆಯ ನಿರ್ದೇಶಕರಿಗೆ ನ.11ಕ್ಕೆ ಮನವಿ ಕೊಟ್ಟಿದ್ದೇವೆ. ಅವರು ಸಮಸ್ಯೆ ಪರಿಹರಿಸುವ ವಿಶ್ವಾಸವಿತ್ತು. ಆದರೆ, ಮೋಸ ಮಾಡಿದ ಗುತ್ತಿಗೆದಾರರಿಗೇ ಮತ್ತೆ ಗುತ್ತಿಗೆ ಕೊಟ್ಟಿರುವುದು ಬಹಳ ಅನ್ಯಾಯ’ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗುರುರಾಜ ನಾಯಕ, ಕಾಂಚನಾ ಚಂದಾವರ್ಕರ್, ವಿಪ್ತಿ ನಾಯ್ಕ, ಸುರೇಖಾ ನಾಯ್ಕ, ಸುಶಾಂತ್, ವೈಶಾಲಿ, ಲಕ್ಷ್ಮಿ, ಪದ್ಮಾ ಅಂಬಿಗ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು