ಉತ್ತರ ಕನ್ನಡ ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆಯಾದ ಬಸ್ ಕೊರತೆ

ಜೊಯಿಡಾ: ತಾಲ್ಲೂಕಿನ ಉಳವಿ, ಕಾಳಸಾಯಿ ಗ್ರಾಮಗಳ ಸುತ್ತಮುತ್ತಲಿನ ಊರುಗಳಿಗೆ ಸಮರ್ಪಕ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಸೂಕ್ತ ಸಾರಿಗೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಚಂದ್ರಾಳಿ, ಅಂಬೋಳಿ, ಕಾಳಸಾಯ ಮಾತ್ಕರ್ಣಿ, ಹಲಕುಂಬಿ, ಮೈನೋಳ, ಕೋಂದರ, ಆಮಶೇತ, ಆಂಬಟಗಾಳಿ ಹಾಗೂ ತಾಡಸೇತ ಗ್ರಾಮಗಳಲ್ಲಿ 84 ವಿದ್ಯಾರ್ಥಿಗಳಿದ್ದಾರೆ. ಎಲ್ಲರೂ ಕುಂಬಾರವಾಡಾ ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬರುತ್ತಾರೆ.
ಇವರೆಲ್ಲರೂ ಬೆಳಿಗ್ಗೆ ಕುಂಬಾರವಾಡಾ ಶಾಲಾ, ಕಾಲೇಜಿಗೆ ಬರಲು ಉಳವಿಯಿಂದ ಬೆಳಿಗ್ಗೆ ಏಳು ಗಂಟೆಗೆ ಹೊರಡುವ ಇಚಲಕರಂಜಿ ಬಸ್‌ಗೆ ಬರಬೇಕಾಗಿದೆ. ಅದು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೂ ಅನಿವಾರ್ಯವಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಅದೇ ಬಸ್‌ಗೆ ಹತ್ತಿಸಿಕೊಳ್ಳಲಾಗುತ್ತಿದೆ. ಒಂದೊಮ್ಮೆ ಈ ಬಸ್ ತಪ್ಪಿದರೆ ಅಂದು ವಿದ್ಯಾರ್ಥಿಗಳು ತರಗತಿಯಿಂದ ದೂರ ಉಳಿಯಬೇಕಾಗುತ್ತದೆ. ಹೀಗಾಗಿ ಹಲವು ವಿದ್ಯಾರ್ಥಿಗಳಿಗೆ ಹಾಜರಾತಿಯ ಕೊರತೆಯಾಗಿ ಸಮಸ್ಯೆಯಾಗಿದ್ದೂ ಇದೆ ಎನ್ನುತ್ತಾರೆ ಉಪನ್ಯಾಸಕರೊಬ್ಬರು.
ಉಳವಿಯಿಂದ ಒಂಬತ್ತು ಗಂಟೆಗೆ ಬರುವ ಬಸ್‌ಗೆ ಹಲವು ಕಡೆ ನಿಲುಗಡೆಯಿಲ್ಲ. ಉಳವಿ, ಕಾಳಸಾಯ ಭಾಗದ ವಿದ್ಯಾರ್ಥಿಗಳಿಗೆ ತರಗತಿ ಮುಗಿದ ಬಳಿಕ ಮನೆಗೆ ಹೋಗುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಜೊಯಿಡಾ, ಕುಂಬಾರವಾಡಾ ಮಾರ್ಗವಾಗಿ ಉಳವಿಗೆ ಹೋಗಲು ಮಧ್ಯಾಹ್ನ 12ಕ್ಕೆ ಬರುವ ಹುಬ್ಬಳ್ಳಿ ಬಸ್ ಒಂದೇ ಗತಿ. ಅದನ್ನು ಬಿಟ್ಟರೆ ದಾಂಡೇಲಿಯಿಂದ ಉಳವಿಗೆ ಹೋಗುವ ಬಸ್ ಬರುವುದು ಸಂಜೆ 5.30ಕ್ಕೆ. ಒಂದೊಂದು ದಿನ ಅದು ಸಂಜೆ 6ರ ನಂತರವೂ ಬರುತ್ತದೆ ಎನ್ನುವುದು ವಿದ್ಯಾರ್ಥಿಗಳ ಅಳಲು.
ಅಪಾಯದ ನಡಿಗೆ: ಸಾಮಾನ್ಯವಾಗಿ ಕುಂಬಾರವಾಡದ ಶಾಲಾ– ಕಾಲೇಜಿಗೆ ಬರುವ ಎಲ್ಲ ವಿದ್ಯಾರ್ಥಿಗಳು ಹಳ್ಳಿಯವರು. ಬಸ್‌ನಿಂದ ಇಳಿದು ಕನಿಷ್ಠವೆಂದರೂ 2–4 ಕಿ.ಮೀ ನಡೆದುಕೊಂಡು ಹೋಗಬೇಕಾಗುತ್ತದೆ. ಜೊತೆಗೆ ಕೆಲವು ಹಳ್ಳಿಗಳಿಗೆ ಹೋಗಲು ಸಮರ್ಪಕವಾದ ರಸ್ತೆಗಳಿಲ್ಲ. ಕಾಲುದಾರಿಗಳಲ್ಲಿ, ಸೇತುವೆಗಳಿಲ್ಲದ, ತುಂಬಿ ಹರಿಯುತ್ತಿರುವ ಹಳ್ಳಗಳ ಮೇಲೆ ಕಾಲುಸಂಕಗಳಲ್ಲಿ ಸಂಚರಿಸುತ್ತಾರೆ. ಬಸ್ ಸರಿಯಾದ ಸಮಯಕ್ಕೆ ಬಾರದಿದ್ದರೆ ವಿದ್ಯಾಥಿಗಳು ಮನೆಗೆ ಸೇರುವಾಗ ರಾತ್ರಿ ಎಂಟು ಗಂಟೆಯಾಗಿರುತ್ತದೆ.
ಕಾಡುಪ್ರಾಣಿಗಳ ಭಯ: ಈ ಭಾಗದಲ್ಲಿ ಕರಡಿ, ಹುಲಿ, ಚಿರತೆ, ಕಾಡುಕೋಣ ಹಾಗೂ ಆನೆಗಳ ಸಂಚಾರ ಸಾಮಾನ್ಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಪ್ರತಿದಿನ ಜೀವ ಭಯದಲ್ಲೇ ಕಾಡು ದಾರಿಯಲ್ಲಿ ಸಾಗಬೇಕು. ಈ ಗ್ರಾಮಗಳ ಹಿರಿಯರು ಹಾಗೂ ಹಿರಿಯ ವಿದ್ಯಾರ್ಥಿಗಳು ಅನೇಕ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ, ಸಾರಿಗೆ ಇಲಾಖೆಗೆ ಮನವಿ ನೀಡಿದ್ದಾರೆ. ಆಗ ಸೂಕ್ತ ಸಮಯಕ್ಕೆ ಬಸ್ ಸಂಚಾರ ಆರಂಭಿಸುವ ಬಗ್ಗೆ ಮೌಖಿಕವಾಗಿ ಭರವಸೆ ಸಿಗುತ್ತದೆ. ಆದರೆ, ಈವರೆಗೂ ಬಸ್ ವ್ಯವಸ್ಥೆ ಆಗಿಲ್ಲ ಎಂಬುದು ಈ ಭಾಗದ ಜನರ ಅಳಲಾಗಿದೆ.
‘ಸಮಸ್ಯೆ ಗಮನಕ್ಕೆ ಬರಲಿಲ್ಲ’: ‘ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಸದ್ಯ ದಾಂಡೇಲಿಯಿಂದ ಕುಂಬಾರವಾಡಾಕ್ಕೆ ಸಂಜೆ 5.30ಕ್ಕೆ ಬರುವ ಬಸ್ನ ವೇಳೆ ಬದಲಾಯಿಸುವುದು ಕಷ್ಟ. ಅದೇ ಬಸ್ ಬೇರೆ ಊರುಗಳಿಗೂ ಹೋಗಿ ಬರುವುದರಿಂದ ಆ ಊರುಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ದಾಂಡೇಲಿ ಡಿಪೊ ವ್ಯವಸ್ಥಾಪಕ.
ಸಂಜೆಯವರೆಗೂ ಅಂಗಡಿಯಲ್ಲೇ!: ಸಾಮಾನ್ಯವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತರಗತಿಗಳು ಮಧ್ಯಾಹ್ನ 3.30ಕ್ಕೆ, ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳು ಸಂಜೆ 4ಕ್ಕೆ ಹಾಗೂ ಪ್ರೌಢಶಾಲೆಯ ತರಗತಿಗಳು ಸಂಜೆ 4.30ಕ್ಕೆ ಮುಗಿಯುತ್ತವೆ. ತರಗತಿಗಳು ಮುಗಿದ ಮೇಲೆ ಈ ಎಲ್ಲಾ ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಬಂದು ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಓಡಾಡುತ್ತಿರುತ್ತಾರೆ. ಜೊತೆಗೆ ಅಲ್ಲಲ್ಲಿ ಗುಂಪುಕಟ್ಟಿ ಹರಟೆ ಹೊಡೆಯುತ್ತಿರುತ್ತಾರೆ. ಶನಿವಾರ ಶಾಲಾ ತರಗತಿಗಳು ಮಧ್ಯಾಹ್ನ ಒಂದು ಗಂಟೆಗೆ ಮುಗಿದರೂ ವಿದ್ಯಾರ್ಥಿಗಳು ಸಂಜೆ 5.30ಕ್ಕೆ ಹೋಗುವ ಬಸ್ನಲ್ಲೇ ಮನೆಗೆ ಹೋಗಬೇಕಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.