ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾಕ್ಕೆ ತಡೆ: ಭಟ್ಕಳ ಲಾಕ್‌ಡೌನ್

ಇಂದಿನಿಂದ ಒಂದು ವಾರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ: ಕಠಿಣ ಸ್ಥಿತಿ ಎದುರಿಸಲು ಸಿದ್ಧತೆ
Last Updated 23 ಮಾರ್ಚ್ 2020, 18:25 IST
ಅಕ್ಷರ ಗಾತ್ರ

ಕಾರವಾರ: ‘ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಾರ್ಚ್ 24ರಿಂದ ಒಂದು ವಾರ ಭಟ್ಕಳ ಉಪವಿಭಾಗ ಮಟ್ಟದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಅತ್ಯಗತ್ಯ ಸೇವೆಗಳು ಈ ದಿನಗಳಲ್ಲೂ ಲಭಿಸುತ್ತವೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಗೆವಿದೇಶಗಳಿಂದ ಮರಳಿದವರಲ್ಲಿ ಶೇ 40ರಷ್ಟು ಮಂದಿ ಭಟ್ಕಳದವರಾಗಿದ್ದಾರೆ. ಸೋಂಕಿತನಿಂದ ವೈರಸ್ಇತರರಿಗೆ ಹರಡುವುದು ಹೆಚ್ಚು. ಆದ್ದರಿಂದ ವಿದೇಶಗಳಿಂದ ವಾಪಸಾದವರು ಇತರರಿಗೆ ವೈರಸ್ ಹರಡುವ ವಾಹಕಗಳಾಗಬಾರದು. ಅವರು ಎಲ್ಲೆಂದರಲ್ಲಿ ಸಂಚರಿಸದಂತೆ ತಡೆಯಬೇಕು. ಹಾಗಾಗಿ ಲಾಕ್‌ಡೌನ್‍ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಕುಮಟಾ, ಶಿರಸಿ ಮತ್ತು ಕಾರವಾರ ಉಪ ವಿಭಾಗಗಳಿಗೂ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

ಸಂಬಂಧವಿಲ್ಲ: ‘ಭಟ್ಕಳದ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ಸೋಂಕು ದೃಢವಾಗಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪ್ರಕರಣಕ್ಕೂ ಲಾಕ್‌ಡೌನ್‌ಗೂ ಯಾವುದೇ ಸಂಬಂಧವಿಲ್ಲ. ಜಿಲ್ಲೆಯಾದ್ಯಂತ ಮಾರ್ಚ್ 24ರಿಂದ ಜಾರಿಯಲ್ಲಿರುವನಿಷೇಧಾಜ್ಞೆಯು ಕಾನೂನು ಪಾಲನೆಯ ಸಂದರ್ಭದಲ್ಲಿ ಜಾರಿಯಾಗುವ ರೀತಿಯದ್ದಲ್ಲ. ಇದು ಎಲ್ಲರ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿರುವಂಥದ್ದು’ ಎಂದು ಸ್ಪಷ್ಟಪಡಿಸಿದರು.

‘ಈಗಾಗಲೇ ಗೋವಾ– ಕರ್ನಾಟಕ ಅಂತರರಾಜ್ಯ ಗಡಿಗಳನ್ನು ಮುಚ್ಚಲಾಗಿದೆ. ಧಾರವಾಡ ಜಿಲ್ಲೆಯಿಂದ ಬರುವ ಮತ್ತು ಹೋಗುವವರಿಗೆ ನಿರ್ಬಂಧ ವಿಧಿಸಲಾಗಿದೆ. ಇದೇ ರೀತಿ, ಉಡುಪಿ ಗಡಿಯಲ್ಲೂ ನಿರ್ಬಂಧ ವಿಧಿಸಲು ಚಿಂತಿಸಲಾಗುತ್ತಿದೆ. ಒಂದು ವಾರ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದರೆ ವೈರಸ್ ಹರಡುವುದನ್ನು ತಡೆಯಬಹುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಅಗತ್ಯ ಸಂದರ್ಭದಲ್ಲಿ ಬಳಕೆಗೆಂದು ಜಿಲ್ಲಾ ಆಸ್ಪತ್ರೆಯಲ್ಲಿ ಇನ್ನು ಮೂರು ದಿನಗಳಲ್ಲಿ ಸುಮಾರು 800 ಹಾಸಿಗೆಗಳನ್ನು ಸಿದ್ಧಗೊಳಿಸಲಾಗುತ್ತದೆ’ ಎಂದು ತಿಳಿಸಿದರು.

ಮೂರು ಹಂತಗಳ ವ್ಯವಸ್ಥೆ: ‘ಮೊದಲ ಹಂತದಲ್ಲಿಜಿಲ್ಲಾ ಆಸ್ಪತ್ರೆಯಲ್ಲಿ ಫೀವರ್ ಕಾರ್ನರ್ ಎಂದು ಮಾಡಲಾಗಿದೆ. ಅಲ್ಲಿ ವೈದ್ಯಕೀಯ ಸಿಬ್ಬಂದಿಯು ರೋಗಿಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಅವರ ಚಿಕಿತ್ಸೆಗೆ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ಹಂತದ ವ್ಯವಸ್ಥೆ ಮಾಡಲಾಗಿದೆ. ಪ್ರಯೋಗಾಲಯವನ್ನೂ ಸಿದ್ಧಪಡಿಸಲಾಗುತ್ತಿದ್ದು, ಜೊತೆಗೆ ಒಯ್ಯಬಹುದಾದ 10 ಎಕ್ಸ್‌ರೇ ಯಂತ್ರಗಳು, ಎರಡು ‘ಸಿ.ಬಿ ನೆಟ್’ ಪರೀಕ್ಷಾ ಯಂತ್ರಗಳನ್ನು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮೂರನೇ ಹಂತದ ವ್ಯವಸ್ಥೆಯಾಗಿ ಕೋವಿಡ್ 19 ಸೋಂಕು ಪೀಡಿತರ ಚಿಕಿತ್ಸೆಗೆ ಕ್ವಾರಂಟೈನ್ ಕಾರ್ನರ್ (ಪ್ರತ್ಯೇಕವಾಗಿಡುವ ಕೋಣೆ) ಮಾಡಲಾಗಿದೆ. 300 ಹಾಸಿಗೆಗಳನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲು ಪ್ರಯತ್ನಿಸಲಾಗುತ್ತಿದೆ. ಹೃದಯ ಬಡಿತ ಮತ್ತು ಆಮ್ಲಜನಕದ ಪರಿಮಾಣ ಅಳೆಯುವ 100 ಸಾಧನಗಳು ಎರಡು ದಿನಗಳಲ್ಲಿ ಪೂರೈಕೆಯಾಗಲಿವೆ.ಕೃತಕ ಉಸಿರಾಟದ ವ್ಯವಸ್ಥೆ, ವೈರಸ್ ನಿವಾರಕ ಔಷಧಿಗಳು ಸಾಕಷ್ಟು ಸಂಗ್ರಹ ಇವೆ’ ಎಂದು ತಿಳಿಸಿದರು.

‘14 ವೆಂಟಿಲೇಟರ್‌ಗಳು ಈಗಾಗಲೇ ಇದ್ದು, ಇನ್ನೂ 15ಕ್ಕೆ ಮನವಿ ಮಾಡಲಾಗಿದೆ. ಅವುಗಳನ್ನು ವೈದ್ಯಕೀಯ ವಿಜ್ಞಾನ ಇಲಾಖೆಯಿಂದ ಕೊಡುವ ನಿರೀಕ್ಷೆಯಿದೆ. ಸದ್ಯದ ಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲೇ 800 ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿದೆ. ಮುಂದಿನ ನಾಲ್ಕು ದಿನಗಳಲ್ಲಿ ಇದೇ ರೀತಿಯ ವ್ಯವಸ್ಥೆಗಳನ್ನು ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಸಿದ್ಧಪಡಿಸಲಾಗುವುದು’ ಎಂದು ಹೇಳಿದರು.

ಉಲ್ಲಂಘನೆಗೆ ಕಾನೂನು ಕ್ರಮ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ಜಿಲ್ಲೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡಸಂಹಿತೆಯ 188ನೇ ವಿಧಿ ಅನ್ವಯ ದೂರು ದಾಖಲಿಸಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಬೇರೆ ಜಿಲ್ಲೆಗಳಲ್ಲಿ ವಿದೇಶಗಳಿಂದ ವಾಪಸಾದವರು ಕೂಡ ವಿವಿಧೆಡೆ ಸಂಚರಿಸಿ, ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಅವರ ವಿರುದ್ಧ ಅಲ್ಲಿ ಪ್ರಕರಣಗಳು ದಾಖಲಾಗಿವೆ. ಅಂತಹ ಸನ್ನಿವೇಶ ಇಲ್ಲಿ ಸೃಷ್ಟಿಯಾಗುವುದು ಬೇಡ’ ಎಂದು ಆಶಿಸಿದರು.

ಲಾಕ್‌ ಡೌನ್: ಏನೇನು ಲಭ್ಯ?

* ಆಹಾರ, ಪಡಿತರ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣು ಹಂಪಲು ಸರಬರಾಜು

* ಅತ್ಯಗತ್ಯ ಸರಕು ಸಾಗಣೆ

* ಜಾನುವಾರಿಗೆ ಮೇವು ಸಾಗಣೆ

* ಆಹಾರ ಸಂಸ್ಕರಣಾ ಘಟಕಗಳು

* ಕುಡಿಯುವ ನೀರು ಸರಬರಾಜು

* ಹಾಲು ಉತ್ಪಾದನಾ ಘಟಕಗಳು

* ಗೋಧಿ, ಅಕ್ಕಿ ಗೋದಾಮುಗಳಲ್ಲಿ ಸರಕು ಹೇರುವುದು, ಇಳಿಸುವುದು, ರವಾನಿಸುವುದು

*ಪೆಟ್ರೋಲ್ ಬಂಕ್‌ಗಳು

*ಹೆಸ್ಕಾಂ, ನೀರು, ದೂರವಾಣಿ, ಬ್ಯಾಂಕ್, ಔಷಧಿ, ವೈದ್ಯಕೀಯ, ಅಂಚೆ, ಪೌರ, ಅಗ್ನಿಶಾಮಕ, ವಿಮಾ ಸೇವೆಗಳು

* ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT