ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಹೈನುಗಾರರ ಕಂಗೆಡಿಸಿದ ‘ಲಂಪಿಸ್ಕಿನ್’

ಜಿಲ್ಲೆಯಲ್ಲೂ ವ್ಯಾಪಿಸಿದ ಸೋಂಕು: ಪಶುಪಾಲನಾ ಇಲಾಖೆಯಲ್ಲಿ ನೂರಾರು ಸಿಬ್ಬಂದಿ ಕೊರತೆ
Last Updated 13 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ಜಾನುವಾರಿಗೆ ಕಾಣಿಸಿಕೊಳ್ಳುತ್ತಿರುವ ‘ಲಂಪಿ ಸ್ಕಿನ್’ ಕಾಯಿಲೆ ಹೈನುಗಾರರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ 6,800ಕ್ಕೂ ಅಧಿಕ ಜಾನುವಾರು ಈಗಾಗಲೇ ಈ ಚರ್ಮ ರೋಗಕ್ಕೆ ತುತ್ತಾಗಿವೆ.

ಹಳಿಯಾಳ, ಮುಂಡಗೋಡ ಮತ್ತು ಯಲ್ಲಾಪುರ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಜಾನುವಾರಿಗೆ ಕಾಣಿಸಿಕೊಂಡಿದೆ. ಅಂಕೋಲಾ ಮತ್ತು ಶಿರಸಿ ತಾಲ್ಲೂಕುಗಳಲ್ಲಿ ಅಲ್ಲಲ್ಲಿ ದೃಢಪಟ್ಟಿವೆ. ಕಾರವಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲೂ ಎರಡು ದಿನಗಳಿಂದ ವರದಿಯಾಗುತ್ತಿದೆ. ಈ ರೀತಿ ನಿಯಂತ್ರಣವೇ ಇಲ್ಲದೆ ಹರಡುತ್ತಿರುವುದು ಹೈನುಗಾರರ ಆತಂಕಕ್ಕೆ ಕಾರಣವಾಗಿದೆ.

‘ಲಂಪಿ ಸ್ಕಿನ್’ ಲಕ್ಷಣಗಳು: ಆಫ್ರಿಕಾದ ದೇಶಗಳಲ್ಲಿ ಮೊದಲು ಕಾಣಿಸಿಕೊಂಡ ಈ ಕಾಯಿಲೆಯು ನಿಧಾನವಾಗಿ ಉತ್ತರ ಭಾರತದಲ್ಲೂ ಕಾಣಿಸಿಕೊಂಡಿತು. ಸೊಳ್ಳೆ, ಕುರುಡು ನೊಣಗಳ (ಹಸು, ಎಮ್ಮೆಗಳಿಗೆ ಕಚ್ಚುವ ದೊಡ್ಡ ನೊಣ) ಮೂಲಕ ವೈರಸ್ ಹರಡುತ್ತದೆ. ಒಂದು ಆಕಳಿಗೆ ಚಿಕಿತ್ಸೆ ನೀಡಿದ ಚುಚ್ಚುಮದ್ದಿನ ಸೂಜಿಯನ್ನು ಮತ್ತೊಂದಕ್ಕೆ ಬಳಸಿದರೂ ಅಪಾಯಕಾರಿ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ನಂದಕುಮಾರ ಪೈ ಹೇಳುತ್ತಾರೆ.

ವೈರಸ್ ಸೇರಿಕೊಂಡ ಆಕಳಿನ ಮೈಮೇಲೆ ದೊಡ್ಡ ಗುಳ್ಳೆಗಳಾಗುತ್ತವೆ. ಕಾಲು ಬಾವು, ಜ್ವರ, ಆಹಾರ ಸೇವಿಸದಿರುವುದು ಇದರ ಲಕ್ಷಣಗಳಾಗಿವೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಗುಳ್ಳೆಗಳು ಒಡೆದು ಹುಳಗಳಾಗುತ್ತವೆ. ಈ ಕಾಯಿಲೆ ದನಕ್ಕೆ ಮಾರಣಾಂತಿಕ ಅಲ್ಲದಿದ್ದರೂ ಅವುಗಳ ಜೀವ ಹಿಂಡುತ್ತದೆ. ಹಾಲಿನ ಉತ್ಪಾದನೆ ಕುಂಠಿತವಾಗುತ್ತದೆ ಎಂದು ವಿವರಿಸಿದರು.

ನಿರ್ದಿಷ್ಟ ಲಸಿಕೆಯಿಲ್ಲ: ‘ಈ ಕಾಯಿಲೆ ನಮ್ಮ ದೇಶಕ್ಕೆ ಹೊಸದಾಗಿದ್ದು, ಆಡು, ಕುರಿಗಳ ಸಿಡುಬಿನ ಲಸಿಕೆಯನ್ನೇ ಸದ್ಯಕ್ಕೆ ಹಸು, ಎಮ್ಮೆಗಳಿಗೆ ನೀಡಲಾಗುತ್ತಿದೆ. ಲಂಪಿ ಸ್ಕಿನ್ ಆಗಿರುವ ಜಾನುವಾರನ್ನು ಆರೋಗ್ಯವಂತ ಆಕಳಿನಿಂದ ಪ್ರತ್ಯೇಕವಾಗಿಡಬೇಕು. ಮೂರರಿಂದ ನಾಲ್ಕು ದಿನ ಚಿಕಿತ್ಸೆ ನೀಡಬೇಕು. ಮೈಮೇಲೆ ನೊಣ ಕುಳಿತುಕೊಳ್ಳದಂತೆ ಬೇವಿನ ಎಣ್ಣೆಯಂತಹ ತೈಲವನ್ನು ಹಚ್ಚಬೇಕು. ಕೊಟ್ಟಿಗೆಯ ಸುತ್ತ ನೊಣ ನಾಶಕ್ಕೆ ಔಷಧ ಸಿಂಪಡಣೆ ಮಾಡಬೇಕು. ಪರಿಸರ ಸ್ವಚ್ಛವಾಗಿರಬೇಕು. ಜಾನುವಾರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗಬಾರದು’ ಎಂದು ಮಾಹಿತಿ ನೀಡಿದ್ದಾರೆ.

ಅಭಿಯಾನಕ್ಕೆ ಹಿನ್ನಡೆ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಕಾಲುಬಾಯಿ ಜ್ವರದ ಲಸಿಕಾ ಅಭಿಯಾನವನ್ನು ನ.15ರ ಮೊದಲು ಪೂರ್ಣಗೊಳಿಸಲು ಸೂಚಿಸಿದೆ. ‘ಲಂಪಿಸ್ಕಿನ್’ ಕಾಣಿಸಿಕೊಂಡ ಜಾನುವಾರಿಗೆ ಕಾಲುಬಾಯಿ ಜ್ವರದ ಲಸಿಕೆ ನೀಡುವಂತಿಲ್ಲ. ಕೋವಿಡ್ ಸೋಂಕಿತರು ಇರುವ ಮನೆಗಳ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗಿರುತ್ತದೆ. ಅಲ್ಲಿಯೂ ಜಾನುವಾರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ.

‘ಪ್ರತಿವರ್ಷ ಅ. 2ರಿಂದ 21 ದಿನಗಳ ಅವಧಿಯಲ್ಲಿ ಲಸಿಕೆ ಅಭಿಯಾನ ಪೂರ್ಣಗೊಳಿಸಲು ಗುರಿ ನೀಡಲಾಗುತ್ತಿತ್ತು. ಈ ಬಾರಿ 15 ದಿನ ಹೆಚ್ಚು ಕಾಲಾವಕಾಶವಿದೆ. ಈ ಅಭಿಯಾನದಲ್ಲಿ ಖಾಸಗಿಯವರೂ ಭಾಗವಹಿಸಿದ್ದಾರೆ. ಹಾಗಾಗಿ ಗುರಿ ಮುಟ್ಟುವ ನಿರೀಕ್ಷೆಯಿದೆ’ ಎನ್ನುತ್ತಾರೆ ಡಾ.ನಂದಕುಮಾರ ಪೈ.

443 ಹುದ್ದೆಗಳು ಖಾಲಿ!: ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಸಿಬ್ಬಂದಿಯ ಕೊರತೆಯಿಂದ ಬಳಲುತ್ತಿದೆ. ಮಂಜೂರಾಗಿರುವ 617 ಹುದ್ದೆಗಳಲ್ಲಿ ಕೇವಲ 174 ಸಿಬ್ಬಂದಿಯಿದ್ದಾರೆ. ಬರೋಬ್ಬರಿ 443 ಹುದ್ದೆಗಳು ಖಾಲಿಯಿವೆ.

ಇದರ ನಡುವೆಯೂ ಪಶು ವೈದ್ಯಾಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಬೇರೆ ಕೇಂದ್ರಗಳ ಅಧಿಕಾರಿಗಳೇ ಎರಡು ಮೂರು ಕಡೆಗಳಲ್ಲಿ ಪ್ರಭಾರ ಜವಾಬ್ದಾರಿ ನಿಭಾಯಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT