ಮಂಗಳವಾರ, ಆಗಸ್ಟ್ 3, 2021
21 °C
ಭಾರಿ ಮಳೆಯಿಂದ ಕಾರವಾರದ ನಗೆ ಗ್ರಾಮದಲ್ಲಿ ಭತ್ತದ ಬೇಸಾಯಕ್ಕೆ ಹಾನಿ

ಉತ್ತರಕನ್ನಡ: ಕೃಷಿಗೆ ‘ತಣ್ಣೀರು’ ಎರಚಿದ ಹಳ್ಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೊರೊನಾ ವೈರಸ್‌ ಹರಡುತ್ತಿರುವ ಸಂಕಷ್ಟದ ದಿನದಲ್ಲೂ ಕಷ್ಟಪಟ್ಟು ಬೇಸಾಯ ಮಾಡಿದ್ದ ರೈತರಿಗೆ ಜುಲೈ 9ರಂದು ಸುರಿದ ಭಾರಿ ಮಳೆಯು ಅಪಾರ ನಷ್ಟವುಂಟು ಮಾಡಿದೆ. ನಾಟಿ ಮಾಡಲಾಗಿದ್ದ ಭತ್ತದ ಸಸಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ರೈತರು ಕಂಗೆಡುವಂತಾಗಿದೆ.

ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಗೆ ಗ್ರಾಮದಲ್ಲಿ ಹರಿಯುವ ಹಳ್ಳವು ಭಾರಿ ಮಳೆಯಿಂದ ಉಕ್ಕಿ ಹರಿಯಿತು. ಇದರ ಪರಿಣಾಮ ಸಮೀಪದಲ್ಲಿರುವ ಭತ್ತದ ಗದ್ದೆಗಳು ಜಲಾವೃತವಾದವು. ನಾಟಿ ಮಾಡಿದ್ದ ಭತ್ತದ ಸಸಿಗಳು ನೀರಿನ ರಭಸಕ್ಕೆ ಸಿಲುಕು ಕೊಚ್ಚಿಕೊಂಡು ಹೋದವು. ಸುಮಾರು ಎಂಟು ಎಕರೆಗಳಷ್ಟು ಹೊಲಕ್ಕೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ, ಅತ್ಯಂತ ಗ್ರಾಮೀಣ ಸೊಗಡಿನ ಊರು ನಗೆ. ಇಲ್ಲಿನ ಬಹುಪಾಲು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಕೋವಿರ್ 19, ಲಾಕ್‌ಡೌನ್‌ನಂತಹ ಸಮಸ್ಯೆಗಳಿಂದಾಗಿ ಈ ವರ್ಷ ಉಳುಮೆ, ಬಿತ್ತನೆಯ ಸಂದರ್ಭದಲ್ಲಿ ಕೂಲಿಯಾಳುಗಳು ಸಿಕ್ಕಿರಲಿಲ್ಲ. ಕುಟುಂಬದ ಸದಸ್ಯರೇ ಒಟ್ಟಾಗಿ ಕಷ್ಟಪಟ್ಟು ಬೇಸಾಯದಲ್ಲಿ ತೊಡಗಿದ್ದರು. ಬಿತ್ತನೆ ಬೀಜ ಖರೀದಿಗೂ ಹಣಕಾಸು ಸಮಸ್ಯೆ ತಲೆದೋರಿ, ಪರಿಚಯಸ್ಥರಿಂದ ಸಾಲ ಪಡೆದು ಕೃಷಿ ಮಾಡಿದವರೂ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಬ್ಬರಿಸಿದ ಹಳ್ಳದ ನೀರು, ಗದ್ದೆಯಲ್ಲಿದ್ದ ಕೃಷಿಯನ್ನು ಕೊಚ್ಚಿಕೊಂಡು ಹೋಗಿದೆ.

ಇಲ್ಲಿನ ಹಳ್ಳದಲ್ಲಿ ಬೆಟ್ಟದ ಮೇಲಿನ ನೀರು ಭರ್ತಿಯಾಗಿ ಹರಿಯುತ್ತದೆ. ಕೆಲವು ತಿಂಗಳ ಹಿಂದೆ ಇಲ್ಲಿಗೆ ಸಿಮೆಂಟ್‌ನ ಕಾಲುಸಂಕ ನಿರ್ಮಿಸಲಾಗಿದೆ. ಆದರೆ, ತಡೆಗೋಡೆ ನಿರ್ಮಿಸಿಲ್ಲ. ಹಾಗಾಗಿ ನೀರು ಉಕ್ಕಿಹರಿದು ಕೃಷಿಭೂಮಿಯನ್ನು ಆವರಿಸಿಕೊಳ್ಳುತ್ತದೆ. ಇದರಿಂದ ಕೃಷಿಕರ ಶ್ರಮ ಫಲ ನೀಡುವ ಮೊದಲೇ ನೀರುಪಾಲಾಗುತ್ತಿದೆ. ಸಾಲ ಮಾಡಿ ಹೂಡಿದ್ದ ಬಂಡವಾಳ ನಷ್ಟವಾಗುತ್ತಿದೆ ಎಂದು ಸ್ಥಳೀಯ ರೈತರ ರಮೇಶ ಗೌಡ ಬೇಸರಿಸಿದ್ದಾರೆ.

ಈ ವರ್ಷದ ಮಳೆಗಾಲದಲ್ಲಿ ಇದೇ ರೀತಿ ಮತ್ತಷ್ಟು ಜೋರಾಗಿ ಮಳೆಯಾದರೆ ಗದ್ದೆಯಲ್ಲಿ ಮತ್ತೆ ನೀರು ತುಂಬಿಕೊಳ್ಳಬಹುದು. ಆಗ ಮತ್ತೊಮ್ಮೆ ನಷ್ಟವಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ತಡೆಗೋಡೆ ನಿರ್ಮಿಸಿ’: ನಗೆ ಗ್ರಾಮವು ಹಳ್ಳಗಳಿಂದ ಕೂಡಿದ ಪ್ರದೇಶವಾಗಿದೆ. ಮುಂದೆ ಭಾರಿ ಮಳೆಯಾದರೆ ಸ್ಥಳೀಯ ರೈತರಿಗೆ ತೊಂದರೆಯಾಗದಂತೆ ಹಳ್ಳಗಳಿಗೆ ತಡೆಗೋಡೆ ನಿರ್ಮಿಸಬೇಕು. ನೀರು ಸರಾಗವಾಗಿ ಹರಿದು ಹೋಗಲು ಕ್ರಮ ವಹಿಸಬೇಕು ಎಂದು ಸ್ಥಳೀಯ ಯುವಕ ಪ್ರಜ್ವಲ್ ಬಾಬುರಾಯ ಶೇಟ್ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು