ಶನಿವಾರ, ಜನವರಿ 18, 2020
20 °C
10 ಅಡಿಗಳಷ್ಟು ಮುರಿದ ಹೋದ ರೇಲಿಂಗ್: ದುರಸ್ತಿಗೆ ನಾಗರಿಕರ ಆಗ್ರಹ

ಕಾರವಾರ: ಅಪಾಯ ಆಹ್ವಾನಿಸುತ್ತಿದೆ ಗಂಗಾವಳಿ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಂಕೋಲಾ ತಾಲ್ಲೂಕಿನ ಗುಳ್ಳಾಪುರ ಬಳಿ ಗಂಗಾವಳಿ ನದಿಗೆ ನಿರ್ಮಿಸಲಾದ ಸೇತುವೆಯ ಎರಡೂ ಬದಿಗಳಲ್ಲಿ ತಡಗೋಡೆ (ರೇಲಿಂಗ್) ಮುರಿದಿದ್ದು, ಅಪಾಯ ಆಹ್ವಾನಿಸುತ್ತಿದೆ. ಯಾವ ಇಲಾಖೆಯವರೂ ಇದರ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಆಗಸ್ಟ್‌ನಲ್ಲಿ ಗಂಗಾವಳಿ ನದಿಯ ಪ್ರವಾಹದಲ್ಲಿ ಬೃಹತ್ ಮರವೊಂದು ಕೊಚ್ಚಿಕೊಂಡು ಬಂದು ರೇಲಿಂಗ್‌ಗೆ ಬಡಿದು ಹಾನಿಯಾಗಿತ್ತು. ಜನಜೀವನ ಸಹಜವಾಗಿ ಮೂರು ತಿಂಗಳುಗಳೇ ಕಳೆದರೂ ಸೇತುವೆಯ ಸ್ಥಿತಿ ಇನ್ನೂ ಹಾಗೇ ಇದೆ.

ಗುಳ್ಳಾಪುರದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದು, ಕಮ್ಮಾಣಿ– ಹಳುವಳ್ಳಿ ರಸ್ತೆಯಲ್ಲಿ ಈ ಸೇತುವೆಯಿದೆ. ಅದರ ನಿರ್ವಹಣೆಯ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಂಕೋಲಾದ ಅಧಿಕಾರಿಗಳನ್ನು ಕೇಳಿದರೆ, ಸೇತುವೆಯು ಯಲ್ಲಾಪುರ ವ್ಯಾಪ್ತಿಯಲ್ಲಿದೆ ಎನ್ನುತ್ತಿದ್ದಾರೆ. ಯಲ್ಲಾಪುರದವರನ್ನು ಕೇಳಿದರೆ ಅಂಕೋಲಾ ಎಂದು ಹೇಳುತ್ತಿದ್ದಾರೆ. ಹೀಗಾಗಿ ಯಾರನ್ನು ಸಂಪರ್ಕಸಬೇಕು ಎಂಬುದೇ ತಿಳಿಯುತ್ತಿಲ್ಲ. ಸಂಭವನೀಯ ದುರಂತವನ್ನು ಸೇತುವೆ ದುರಸ್ತಿ ಮಾಡಿ ತಪ್ಪಿಸಬೇಕು ಎಂದು ಕೋನಾಳದ ಸುಧಾಕರ ಭಟ್ ಒತ್ತಾಯಿಸಿದ್ದಾರೆ. 

ಸುಮಾರು 150 ಮೀಟರ್ ಉದ್ದದ ಈ ಸೇತುವೆಯ ಮಧ್ಯಭಾಗದಲ್ಲಿ 10 ಅಡಿಗಳಷ್ಟು ರೇಲಿಂಗ್ ತುಂಡಾಗಿದೆ. ಇಲ್ಲಿ ನಿತ್ಯವೂ ಹತ್ತಾರು ವಾಹನಗಳು ಸಂಚರಿಸುತ್ತವೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಡೊಂಗ್ರಿ ಗ್ರಾಮ ಪಂಚಾಯ್ತಿ ಕಚೇರಿಗೆ ಇದೇ ರಸ್ತೆಯಲ್ಲಿ ಸಾಗಬೇಕು. ಇದನ್ನು ದಾಟಿದರೆ ಧೋರಣಗಿರಿ ಮೂಲಕ ಶಿರಸಿಗೂ ಸಂಪರ್ಕ ಸಾಧ್ಯವಾಗುತ್ತದೆ. 

ಸೇತುವೆಯನ್ನು 1995–96ರಲ್ಲಿ ನಿರ್ಮಾಣ ಮಾಡಲಾಗಿದ್ದು, ಒಮ್ಮೆಯೂ ನಿರ್ವಹಣೆ ಮಾಡಿಲ್ಲ. ಈ ಬಗ್ಗೆ ಯಲ್ಲಾಪುರದ ಹಿಂದಿನ ಶಾಸಕ ಶಿವರಾಮ ಹೆಬ್ಬಾರ ಹಾಗೂ ಕಾರವಾರ– ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರ ಗಮನಕ್ಕೂ ತರಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು