ಅರಣ್ಯ ಹಕ್ಕು: ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ

ಶುಕ್ರವಾರ, ಮೇ 24, 2019
29 °C
ಪರಿಶಿಷ್ಟ ವರ್ಗಗಳ ಕಲ್ಯಾಣ ನಿದೇರ್ಶನಾಲಯದ ಆದೇಶ

ಅರಣ್ಯ ಹಕ್ಕು: ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ

Published:
Updated:
Prajavani

ಶಿರಸಿ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ರಾಜ್ಯದ ವಿವಿಧ ಅರಣ್ಯ ಹಕ್ಕು ಸಮಿತಿಗಳಲ್ಲಿ ತಿರಸ್ಕರಿಸಿರುವ 2.14 ಲಕ್ಷ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಸಂಬಂಧಿಸಿದ ಅರ್ಜಿಗಳನ್ನು ಹೊಸ ಮಾರ್ಗಸೂಚಿಗಳ ಅನ್ವಯ ಪುನರ್ ಪರಿಶೀಲಿಸಿ ಹೊಸದಾಗಿ ಮಂಜೂರಿ ಪ್ರಕ್ರಿಯೆ ಜರುಗಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ನಿದೇರ್ಶನಾಲಯ ಆದೇಶಿಸಿದೆ ಎಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿ ತಿರಸ್ಕರಿಸಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂದು ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿದ ನಂತರ, ಅರ್ಜಿಗಳನ್ನು ಪುನರ್ ಪರಿಶೀಲಿಸಲು ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗಿದೆ. ರಾಜ್ಯದಲ್ಲಿ 2.79 ಲಕ್ಷ ವೈಯಕ್ತಿಕ ಅರ್ಜಿ ಮತ್ತು 5,849 ಸಮುದಾಯ ಹಕ್ಕು ಅರ್ಜಿಗಳು ಸೇರಿ ಒಟ್ಟು 2.84 ಲಕ್ಷ ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 15,819 ಅರ್ಜಿಗಳಿಗೆ ಮಾತ್ರ ಸಾಗುವಳಿ ಹಕ್ಕು ದೊರಕಿತ್ತು. ಅರಣ್ಯವಾಸಿಗಳ 55,074 ಅರ್ಜಿಗಳು ಬಾಕಿ ಇವೆ. ಪುನರ್ ಪರಿಶೀಲನೆಗೆ ತೀರ್ಮಾನದಿಂದ ಈ ಎಲ್ಲ ಅರ್ಜಿಗಳಿಗೆ ಜೀವ ಬಂದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ವಿಶೇಷ ಆದ್ಯತೆಯೆಂದು ಪರಿಗಣಿಸಿ ತಿರಸ್ಕಾರಗೊಂಡಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕೆಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಗ್ರಾಮ ಅರಣ್ಯ ಹಕ್ಕು ಸಮಿತಿಗೆ ಸೂಚಿಸಿದ ಮಾರ್ಗಸೂಚಿ ಪುನರ್ ಪರಿಶೀಲಿಸುವ ಸಂದರ್ಭದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಹಕ್ಕಿಗೆ ಪರಿಗಣಿಸಬಹುದಾದ ಸಾಕ್ಷ್ಯಗಳ ಬಗ್ಗೆ ಮಾರ್ಗದರ್ಶನ ನೀಡಬೇಕು. ಅರ್ಜಿದಾರರಿಗೆ ವೈಯಕ್ತಿಕವಾಗಿ ನೋಟಿಸ್ ನೀಡಿ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಉಪ ವಿಭಾಗ ಮಟ್ಟದ ಸಮಿತಿಯಲ್ಲಿ ಸಕಾರಣವಿಲ್ಲದೇ ತಿರಸ್ಕರಿಸುವಂತಿಲ್ಲ. ಗ್ರಾಮ, ಉಪ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಪುನರ್ ಪರಿಶೀಲಿಸಿದ ನಂತರ ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಪುನ: ಆದೇಶ ಮಾಡಿದ ಅರಣ್ಯವಾಸಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು. ಮಂಜೂರಿಗೆ ಸಂಬಂಧಿಸಿ, ಕನಿಷ್ಠ 2 ಸಾಕ್ಷ್ಯ ಲಭ್ಯವಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಬೇಕು ಸೇರಿದಂತೆ 16 ಮಾರ್ಗಸೂಚಿಗಳನ್ನು ಸರ್ಕಾರವು ಗ್ರಾಮ ಅರಣ್ಯ ಹಕ್ಕು ಸಮಿತಿಗೆ ನೀಡಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಗೋಡು ಭೇಟಿ

ರವೀಂದ್ರ ನಾಯ್ಕ ಅವರು ಶುಕ್ರವಾರ ಹಿರಿಯ ಧುರೀಣ ಕಾಗೋಡು ತಿಮ್ಮಪ್ಪ ಅವರನ್ನು ಸಾಗರದಲ್ಲಿ ಭೇಟಿ ಮಾಡಿ, ಪುನರ್ ಪರಿಶೀಲನೆ ಆದೇಶದ ಬಗ್ಗೆ ಚರ್ಚಿಸಿದರು. ಅರಣ್ಯವಾಸಿಗಳ ಪರವಾಗಿ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕುವಂತೆ ವಿನಂತಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !