ಭಾನುವಾರ, ಸೆಪ್ಟೆಂಬರ್ 19, 2021
29 °C
ಅಘನಾಶಿನಿಯ ತಟದಲ್ಲಿ ತರಹೇವಾರಿ ಹೊಳೆ ಮೀನಿನ ಬೇಟೆಯ ಸಂಭ್ರಮ

ಉತ್ತರಕನ್ನಡ: ಗಜನಿಯಲ್ಲಿ ಕುರಡೆ, ಕೆಂಸದ ಸುಗ್ಗಿ

ಎಂ.ಜಿ.ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಇಡೀ ರಾಜ್ಯದಲ್ಲಿಯೇ ಅತ್ಯಂತ ವಿಶಾಲ ಹಿನ್ನೀರು ಪ್ರದೇಶ ಹೊಂದಿರುವ ಅಘನಾಶಿನಿ ನದಿ ಗಜನಿಯಲ್ಲಿ ಈಗ ಬಗೆ ಬಗೆಯ ಮೀನು ಹಿಡಿಯುವ ಸುಗ್ಗಿ ಸಮಯ.

ತಾಲ್ಲೂಕಿನ ಹೆಗಡೆ ಗ್ರಾಮದಿಂದ ಸಾಣೆಕಟ್ಟೆವರೆಗೆ ಅಘನಾಶಿನಿ ನದಿಯ ಸುಮಾರು 2,500 ಹೆಕ್ಟೇರ್ ಹಿನ್ನೀರು ಪ್ರದೇಶದಲ್ಲಿ ಹತ್ತಾರು ಗಜನಿಗಳಿವೆ. ಮಾಣಿಕಟ್ಟಾ ಸೇರಿದಂತೆ ಬೆರಳೆಣಿಕೆಯ ಗಜನಿಗಳಲ್ಲಿ ಮಾತ್ರ ಉಪ್ಪು ನೀರಿನಲ್ಲೂ ಬೆಳೆಯುವ ನೈಸರ್ಗಿಕ ತಳಿಯ ‘ಕಗ್ಗ’ ಭತ್ತ ಕೃಷಿ ಮಾಡಲಾಗುತ್ತದೆ. ಅದಕ್ಕೂ ಮೊದಲು ನದಿಯ ಹಿನ್ನೀರು ಪ್ರದೇಶದಿಂದ ನೈಸರ್ಗಿಕವಾಗಿ ಗಜನಿಯೊಳಗೆ ನುಗ್ಗುವ ಮೀನುಗಳನ್ನು ಬಲೆ ಹಾಕಿ ಹಿಡಿಯಲಾಗುತ್ತದೆ.

ಹೀಗೆ ಹಿಡಿದ ಮೀನು ತರಲು ಜನರು ಆಸಕ್ತಿಯಿಂದ ಬರುತ್ತಾರೆ. ಗೋವಾ ಈ ಮೀನಿಗೆ ದೊಡ್ಡ ಮಾರುಕಟ್ಟೆಯಾಗಿತ್ತು. ಲಾಕ್‌ಡೌನ್ ಕಾರಣದಿಂದ ಗೋವಾ ಮಾರುಕಟ್ಟೆ ಸ್ಥಗಿತಗೊಂಡಿದ್ದು, ಜಿಲ್ಲೆಯ ವಿವಿಧ ಭಾಗಗಳಿಗೆ ಮೀನು ರವಾನೆಯಾಗುತ್ತಿದೆ.
ಮೀನುಗಳ ಜಾತಿ ಹಾಗೂ ಗಾತ್ರಕ್ಕೆ ಅನುಗುಣವಾಗಿ ದರ ನಿಗದಿ ಮಾಡಲಾಗುತ್ತದೆ.

ಈಗ ಕುಮಟಾ ಮೀನು ಮಾರುಕಟ್ಟೆಗೆ ಬರುವ ಸಮುದ್ರ ಮೀನಿಗಿಂತ ಗಜನಿ ಮೀನಿಗೆ ಬೇಡಿಕೆ ಹೆಚ್ಚು. ಗಜನಿಯು ಪಟ್ಟಣದಿಂದ ಸುಮಾರು ಐದು ಕಿಲೋಮೀಟರ್ ಹೊರವಲಯದಲ್ಲಿದೆ. ಆದರೂ ತಾಜಾ ಮೀನು ಖರೀದಿಸಲು ಮೀನು ಪ್ರಿಯರು ಆಸಕ್ತಿ ತೋರುತ್ತಾರೆ.

‘ಜೂನ್ ಅಂತ್ಯಕ್ಕೆ ಕಗ್ಗ ಭತ್ತ ಬಿತ್ತನೆ ಮಾಡಲಾಗುತ್ತಿದ್ದು, ಅಲ್ಲಿವರೆಗೆ ಮೀನುಗಾರಿಕೆ ನಡೆಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಭತ್ತ ಕಟಾವು ಆದ ನಂತರ ಮತ್ತೆ ಸಿಗಡಿ, ಮೀನು ಬೇಸಾಯ ಆರಂಭಿಸಲಾಗುತ್ತದೆ’ ಎಂದು ಮಾಣಿಕಟ್ಟಾ ‘ಕಗ್ಗ’ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಆರ್.ನಾಯ್ಕ ಮಾಹಿತಿ ನೀಡಿದರು.

ದರ ಹೀಗಿದೆ: ಎಲ್ಲಕ್ಕಿಂತ ಕುರಡೆ ಮೀನು ಗಾತ್ರದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಒಂದೊಂದು ಮೀನು 1ರಿಂದ 10 ಕೆ.ಜಿ.ವರೆಗೆ ತೂಗುತ್ತಿದ್ದು, ಅವುಗಳ ರುಚಿಯೂ ಹೆಚ್ಚು. ಕುರಡೆ ಹಾಗೂ ಅಷ್ಟೇ ರುಚಿಕರವಾದ ಕೆಂಸ ಮೀನು ಕೆ.ಜಿ ಗೆ ₹ 500, ಹಾಲುಗೊಕ್ಕರ ₹ 300ರಿಂದ ₹ 400, ಕಾಗಳಸಿ ₹ 300ರಿಂದ ₹ 400, ಬೈಗೆ ₹ 300, ಹಾಲುಗುರಕಾ ₹ 200, ಹೂವಿನ ಸೆಳಕಾ ₹ 200, ಮಡ್ಲೆ ₹ 300ರಿಂದ ₹ 400, ಒಣ ಕಾಂಡಿ ₹ 200, ನೆಪ್ಪೆ, ಹುಲಕಾ, ಮಂಡ್ಲಿ, ಒಡತಿ ಮುಂತಾದವು ₹  100ರಿಂದ ₹ 200ರಂತೆ ಮಾರಾಟವಾಗುತ್ತವೆ. ದೊಡ್ಡ ಬಿಳಿ ಸಿಗಡಿ ಕೆ.ಜಿ.ಗೆ ₹ 300ರಿಂದ ₹ 400, ಟೈಗರ್ ಸಿಗಡಿ ₹ 600 ಹಾಗೂ ಏಡಿ ₹ 150ಕ್ಕೆ ಮಾರಾಟವಾಗುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು