ಬುಧವಾರ, ಜುಲೈ 28, 2021
21 °C
ದಾಂಡೇಲಿಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲು: ಪ್ರಾಥಮಿಕ ಸಂಪರ್ಕದಿಂದ ಸೋಂಕು

ಉತ್ತರ ಕನ್ನಡ: 76 ಮಂದಿಗೆ ಕೋವಿಡ್ 19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ ಕಾಣುತ್ತಿದ್ದು, ಬುಧವಾರ ಒಂದೇ ದಿನ 76 ಮಂದಿಗೆ ದೃಢಪಟ್ಟಿದೆ. ದಾಂಡೇಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದು, 35 ಜನರಿಗೆ ಖಚಿತವಾಗಿದೆ. 

51 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದಲೇ ಕೋವಿಡ್ ಹಬ್ಬಿದೆ. ಅವರಲ್ಲಿ ಇಬ್ಬರಿಗೆ ಉಸಿರಾಟದ ತೀವ್ರ ಸಮಸ್ಯೆಯೂ (ಎಸ್.ಎ.ಆರ್.ಐ) ಇದೆ. ಏಳು ಮಂದಿಗೆ ಜ್ವರದ (ಐ.ಎಲ್.ಐ) ಲಕ್ಷಣಗಳಿವೆ. ನಾಲ್ವರು ದೇಶದ ಒಳಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದಾರೆ. 14 ಮಂದಿಗೆ ಸೋಂಕು ಹೇಗೆ ಬಂತು ಎಂಬ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ತಾಲ್ಲೂಕುವಾರು: ಒಟ್ಟು 76 ಮಂದಿ ಸೋಂಕಿತರಲ್ಲಿ 35 ಮಂದಿ ದಾಂಡೇಲಿ ತಾಲ್ಲೂಕಿನವರು. ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ದಾಂಡೇಲಿಯನ್ನು ಹಳಿಯಾಳ ತಾಲ್ಲೂಕಿನೊಂದಿಗೆ ಉಲ್ಲೇಖಿಸಲಾಗುತ್ತದೆ. ಹಳಿಯಾಳ ತಾಲ್ಲೂಕಿನಲ್ಲಿ ಇಬ್ಬರಿಗೆ ಕೋವಿಡ್ ಖಚಿತವಾಗಿದೆ. 

ಯಲ್ಲಾಪುರ ತಾಲ್ಲೂಕಿನಲ್ಲಿ 16, ಶಿರಸಿ ತಾಲ್ಲೂಕಿನಲ್ಲಿ ಎಂಟು, ಕುಮಟಾ ತಾಲ್ಲೂಕಿನಲ್ಲಿ ಆರು, ಕಾರವಾರ ತಾಲ್ಲೂಕಿನಲ್ಲಿ ನಾಲ್ವರು, ಮುಂಡಗೋಡ ತಾಲ್ಲೂಕಿನಲ್ಲಿ ಮೂವರು, ಹಳಿಯಾಳ ಮತ್ತು ಭಟ್ಕಳ ತಾಲ್ಲೂಕುಗಳಲ್ಲಿ ತಲಾ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಒಂದರಿಂದ 10 ವರ್ಷದ ಒಳಗಿನ ಆರು ಮಕ್ಕಳಿದ್ದಾರೆ. 50 ವರ್ಷಕ್ಕಿಂತ ಹೆಚ್ಚು ವಯಸ್ಸಿನ 13 ಮಂದಿಗೂ ಕೋವಿಡ್ ಕಾಣಿಸಿಕೊಂಡಿದೆ. 

ರೋಗ ಲಕ್ಷಣ ರಹಿತರಾಗಿರುವ ಸೋಂಕಿತರಿಗೆ ಆಯಾ ತಾಲ್ಲೂಕು ಕೇಂದ್ರಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರ ಸಮಸ್ಯೆ ಇರುವವರನ್ನು ಮಾತ್ರ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್‌ಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. 

ವಿವಿಧ ಕಾರಣದಿಂದ ಮೂವರ ಸಾವು: ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೋವಿಡ್ ಸೋಂಕಿತರಾದ ಜಿಲ್ಲೆಯ ಮೂವರು ಮಂಗಳವಾರ ಮೃತಪಟ್ಟಿದ್ದಾರೆ. ಆ ಪೈಕಿ ಇಬ್ಬರು ಭಟ್ಕಳದವರಾಗಿದ್ದು, ಒಬ್ಬರು 65 ವರ್ಷದ ಮಹಿಳೆಯಾಗಿದ್ದಾರೆ. ಮತ್ತೊಬ್ಬರು 45 ವರ್ಷದ ಪುರುಷ ಮೂತ್ರಪಿಂಡದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರು ತಡರಾತ್ರಿ ಮೃತಪಟ್ಟಿದ್ದಾರೆ. ದಾಂಡೇಲಿ ಇ.ಎಸ್.ಐ ಆಸ್ಪತ್ರೆಯಲ್ಲಿ ಕೋವಿಡ್ ಹೊರತಾದ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಮೃತದೇಹದ ಗಂಟಲುದ್ರವದ ಪರೀಕ್ಷೆಯಲ್ಲಿ ಕೋವಿಡ್ ಖಚಿತವಾಗಿದೆ.

ಏಳು ಮಂದಿ ಗುಣಮುಖ: ಕೋವಿಡ್ 19ಗೆ ಚಿಕಿತ್ಸೆ ಪಡೆಯುತ್ತಿದ್ದ ಏಳು ಮಂದಿ ಗುಣಮುಖರಾಗಿದ್ದು, ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಬುಧವಾರ ಬಿಡುಗಡೆ ಮಾಡಲಾಯಿತು. ಅವರಲ್ಲಿ ಹಳಿಯಾಳ, ಭಟ್ಕಳ, ಕಾರವಾರ ತಾಲ್ಲೂಕುಗಳ ತಲಾ ಇಬ್ಬರು ಹಾಗೂ ಜೊಯಿಡಾದ ಒಬ್ಬರು ಸೇರಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

774 ಜಿಲ್ಲೆಯಲ್ಲಿ ಒಟ್ಟು ಸೋಂಕಿತರು

457 ಸಕ್ರಿಯ ‍ಪ್ರಕರಣಗಳು

309 ಗುಣಮುಖರಾದವರು

8 ಮೃತರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು