ಶುಕ್ರವಾರ, ಸೆಪ್ಟೆಂಬರ್ 17, 2021
25 °C
ಪಟ್ಟಣಕ್ಕೆ ನಾಲ್ಕು ದಿನಗಳಿಗೊಮ್ಮೆ ಪೂರೈಕೆ: ಗ್ರಾಮೀಣ ಭಾಗಕ್ಕೆ ಟ್ಯಾಂಕರ್

ಸಿದ್ದಾಪುರ ಪಟ್ಟಣ: ಮಳೆಯಾಗದಿದ್ದರೆ ನೀರಿಗೆ ಮತ್ತಷ್ಟು ತೊಂದರೆ

ರವೀಂದ್ರ ಭಟ್ ಬಳಗುಳಿ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಪಟ್ಟಣಕ್ಕೆ ಜಲಮೂಲವಾಗಿರುವ ಪೂರೈಕೆ ಮಾಡುವ ಅರೆಂದೂರು ನಾಲೆಯಲ್ಲಿ ನೀರು ತಳ ಮುಟ್ಟಿದೆ. ಅದರೊಂದಿಗೆ ಗ್ರಾಮೀಣ ಭಾಗದ ಹಲವು ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಯೂ ಆಗುತ್ತಿದೆ. ತಕ್ಷಣದಲ್ಲಿ ಮಳೆಯಾಗದಿದ್ದರೆ ಎಲ್ಲ ಕಡೆ ನೀರಿನ ಅಭಾವ ತೀವ್ರವಾಗುವ ಆತಂಕ ಹೆಚ್ಚಾಗಿದೆ. 

‘ಅರೆಂದೂರು ನಾಲೆಯಲ್ಲಿ ಎರಡು ವಾರಗಳಿಗೆ ಬೇಕಾಗುವಷ್ಟು ನೀರಿದೆ. ಅಷ್ಟರೊಳಗೆ ಒಂದೂ ಮಳೆ ಬೀಳದಿದ್ದರೆ ನೀರು ಪೂರೈಕೆ ಕಷ್ಟವಾಗುತ್ತದೆ. ಸದ್ಯ ಪ್ರತಿ ನಾಲ್ಕು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ’ ಎಂಬುದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸತೀಶ ಗುಡ್ಡೆ ಅವರ ಹೇಳಿಕೆ.

‘ಒಂದೊಮ್ಮೆ ಅರೆಂದೂರು ನಾಲೆಯಲ್ಲಿ ನೀರು ಖಾಲಿಯಾದರೆ, ಪಟ್ಟಣದ ರವೀಂದ್ರ ನಗರ ಹಾಗೂ ಕೆಇಬಿ ಗುಡ್ಡದ ಮೇಲಿನ ಪ್ರದೇಶಗಳು ತೀವ್ರ ನೀರಿನ ತೊಂದರೆಗೆ ಒಳಗಾಗುತ್ತವೆ’ ಎಂಬುದು ಅವರ ಆತಂಕ. ‌

ಪಟ್ಟಣ ಪಂಚಾಯ್ತಿಯ ನೀರಿನ ಪೂರೈಕೆಯ ಬಗ್ಗೆ ಸಾರ್ವಜನಿಕರನ್ನು ವಿಚಾರಿಸಿದರೆ, ನಲ್ಲಿಯಲ್ಲಿ ನೀರು ಬಾರದೆ ಆರು ದಿನಗಳಾದವು, 8 ದಿನಗಳಾದವು ಎಂಬ ಉತ್ತರ ಕೂಡ ದೊರೆಯುತ್ತದೆ.

ಟ್ಯಾಂಕರ್ ಮೂಲಕ ಪೂರೈಕೆ: ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಈ ಬಾರಿ ಬಿಗಡಾಯಿಸಿದೆ. ಮೇ ಮೊದಲ ವಾರದಲ್ಲಿಯೇ ತಾಲ್ಲೂಕಿನ ಬಿದ್ರಕಾನ ಗ್ರಾಮ ಪಂಚಾಯ್ತಿಯ ಗೊದ್ಲಬೀಳು, ಕಾಂವಚೂರು ಗ್ರಾಮ ಪಂಚಾಯ್ತಿಯ ಅರೆಂದೂರು, ಕೊರ್ಲಕೈ ಗ್ರಾಮ ಪಂಚಾಯ್ತಿಯ ಬಸಿರು ಮನೆ, ಕ್ಯಾದಗಿ ಗ್ರಾಮ ಪಂಚಾಯ್ತಿಯ ಹೊಡವತ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ.

ಗೊದ್ಲಬೀಳು ಗ್ರಾಮದ ಅಗ್ಗೇರೆ, ತ್ಯಾರ್ಸಿ ಗ್ರಾಮದ ಬತ್ತುಗುಂಡಿ, ಭಾನ್ಕುಳಿ ಗ್ರಾಮದ ನಾಯ್ಕರ ಕೇರಿ, ಮುತ್ತಿಗೆ ಗ್ರಾಮದ ಕಲಕೈ, ನೆಂಜಲಮಕ್ಕಿ, ಗೀಜಗಾರ, ಗಿರಗಡ್ಡೆ ಗ್ರಾಮದ ಗವಿನ ಸರ, ಮೆಣಸಿ ಗ್ರಾಮದ ದೀಪದ ಬಾವಿಕೇರಿ, ಕವಲಮುರಿ, ಅಳಗೋಡು ಗ್ರಾಮದ ಕೆರೆಮಠ, ಗದ್ದೆಮನೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ ಎಂದು ತಹಶೀಲ್ದಾರ್ ಗೀತಾ ಸಿ.ಜಿ. ವಿವರ ನೀಡಿದ್ದಾರೆ.

ತಹಶೀಲ್ದಾರ್ ಮನವಿ: ಅರೆಂದೂರು ನಾಲಾದಿಂದ ಪಟ್ಟಣದಲ್ಲಿ ಎಲ್ಲ ವಾರ್ಡ್‌ಗಳಿಗೂ ವಾರಕ್ಕೆ ಎರಡು ಬಾರಿ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೂಡ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಆದರೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆ ಉಂಟಾದರೆ ಪಟ್ಟಣ ಪಂಚಾಯ್ತಿಯನ್ನು (ದೂರವಾಣಿ: 08389– 230 282) ಸಂಪರ್ಕಿಸಬೇಕು.

ಅದರಂತೆ ತಾಲ್ಲೂಕಿನ ಏಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 13 ಮಜರೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಗ್ರಾಮಗಳನ್ನು ಹೊರತು ಪಡಿಸಿ ಬೇರೆ ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾದರೆ ಆಯಾ ಗ್ರಾಮ ಪಂಚಾಯ್ತಿಯನ್ನು ಅಥವಾ ತಹಶೀಲ್ದಾರ್ ಕಾರ್ಯಾಲಯ (ದೂರವಾಣಿ: 08389– 230 127) ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಗೀತಾ ಸಿ.ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿದ್ದಾಪುರ: ಅಂಕಿ ಅಂಶ

15 ಸಾವಿರ ಪಟ್ಟಣದ ಜನಸಂಖ್ಯೆ

105 ಪಟ್ಟಣದ ವ್ಯಾಪ್ತಿಯ ಬಾವಿಗಳು

2,100 ಪಟ್ಟಣದಲ್ಲಿರುವ ನಲ್ಲಿ ಸಂಪರ್ಕ

2,050 ಗೃಹ ಬಳಕೆಗೆ 

50 ವಾಣಿಜ್ಯ ಉದ್ದೇಶಕ್ಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು