ಭಾನುವಾರ, ಸೆಪ್ಟೆಂಬರ್ 26, 2021
21 °C
ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ಪ್ಲಾಸ್ಟಿಕ್, ಗಾಜಿನ ತ್ಯಾಜ್ಯ ವಿಂಗಡಣೆ

ಕುಮಟಾ: ಗ್ರಾಮಗಳಲ್ಲೂ ಶುರುವಾಯ್ತು ಕಸ ವಿಲೇವಾರಿ

ಎಂ.ಜಿ.ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿ ಆರಂಭವಾಗಿದೆ. ಹೆಗಡೆ ಗ್ರಾಮದ ರಸ್ತೆ ಬದಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯವನ್ನೆಲ್ಲ ಸಂಗ್ರಹಿಸಿ ಶುಚಿಗೊಳಿಸಿ ಬೇರ್ಪಡಿಸಲಾಗುತ್ತಿದೆ. ಈ ಮೂಲಕ ಗ್ರಾಮಗಳಲ್ಲೂ ಸ್ವಚ್ಛತೆಯ ಹೊಸ ಮಾದರಿ ತೆರೆದುಕೊಂಡಿದೆ.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ ಅವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಪಟಗಾರ ನೇತೃತ್ವದಲ್ಲಿ ಶುಕ್ರವಾರ ನಸುಕಿನಲ್ಲೇ ಕಾರ್ಯಾಚರಣೆ ಮಾಡಲಾಗಿದೆ. ಊರಿನ ರಸ್ತೆ ಬದಿ, ರೈಲ್ವೆ ಕ್ರಾಸಿಂಗ್ ಮುಂತಾದೆಡೆ ಇದ್ದ ತ್ಯಾಜ್ಯಗಳನ್ನು ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ರಾಶಿ ಹಾಕಲಾಯಿತು.

ಗಾಜು ಹಾಗೂ ಪ್ಲಾಸ್ಟಿಕ್ ಬಾಟಲಿ, ಸಾರಾಯಿ ಪ್ಯಾಕೇಟ್, ಪ್ಲಾಸ್ಟಿಕ್ ಚೀಲ, ತಟ್ಟೆ, ಲೋಟ, ಸ್ಟ್ರಾ ಮುಂತಾದವುಗಳನ್ನು ತೊಳೆದು ಪ್ರತ್ಯೇಕಿಸಲಾಯಿತು. ಊರಿನಲ್ಲಿ ಹೊಸದಾಗಿ ಆರಂಭಿಸಿದ ಈ ಕೆಲಸವನ್ನು ಗ್ರಾಮಸ್ಥರು ವೀಕ್ಷಿಸಿದರೆ, ಕೆಲವರು ಬಂದು ಕೆಲಸದಲ್ಲಿ ಸಹಕರಿಸಿದರು.

‘ಗ್ರಾಮಸ್ಥರೂ ಈ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿ ಕೈ ಜೋಡಿಸುವ ವಿಶ್ವಾಸವಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಪಟಗಾರ ತಿಳಿಸಿದರು.

‘ನಿರಂತರವಾಗಿ ನಡೆಯಲಿದೆ’: ‘ಹೆಗಡೆ ಗ್ರಾಮ ಪಂಚಾಯ್ತಿಗೆ ₹ 23 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ಘಟಕ ಮಂಜೂರಾಗಿದೆ. ಇನ್ನು ಮುಂದೆ ಕಸವನ್ನು ಪ್ರತ್ಯೇಕಿಸುವ ಕಾರ್ಯ ಗ್ರಾಮದಲ್ಲಿ ನಿರಂತರವಾಗಿ ನಡೆಯಲಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮ ಶುಚಿಯಾಗುವ ಕಾರ್ಯದಲ್ಲಿ ಗ್ರಾಮಸ್ಥರೂ ಕೈ ಜೋಡಿಸಿದರೆ ಶುಚಿ ಕಾರ್ಯ ಇನ್ನೂ ಸುಲಭ. ಗ್ರಾಮ ಪಂಚಾಯ್ತಿಯಿಂದ ಪ್ರತಿ ಮನೆಗೆ ಕಸದ ಡಬ್ಬಗಳನ್ನು ನೀಡಲಾಗುವುದು. ಪ್ರತ್ಯೇಕಿಸಿದ ಕಸವನ್ನು ಗೋಕರ್ಣ ಅಥವಾ ಕುಂದಾಪುರಕ್ಕೆ ಕಳಿಸಲಾಗುವುದು. ಇದು ಪಟ್ಟಣದ ಕಸ ವಿಲೇವಾರಿಗಿಂತ ಎಷ್ಟೋ ಸುಲಭ’ ಎಂದು ವಿವರಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಶಿವಾನಂದ ಪಟಗಾರ, ಪ್ರಭಾಕರ ಪಟಗಾರ, ಸದಾನಂದ ಪಟಗಾರ, ಹನುಮಂತ ಪಟಗಾರ, ನಾಗರಾಜ ನಾಯ್ಕ, ಊರಿನ ಅಮರನಾಥ ಭಟ್ಟ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ದೇವರಾಯ ನಾಯಕ, ಪಿಡಿಒ ಶಿವಾನಂದ ಜೋಶಿ, ಕಾರ್ಯದರ್ಶಿ ಮುರಳಿ ನಾಯ್ಕ, ಸಿಬ್ಬಂದಿ ನೀತು, ವಸಂತ, ನಾರಾಯಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು