ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಬೀಜಗಳ ಸಹಜ ಕಾಡಿನ ರೂವಾರಿ: ವಡ್ಡಿನಗದ್ದೆಯಲ್ಲೊಬ್ಬ ಅಪರೂಪದ ಪರಿಸರ ಪ್ರೇಮಿ

ಸಿದ್ದಾಪುರ ತಾಲ್ಲೂಕಿನ ವಡ್ಡಿನಗದ್ದೆಯಲ್ಲೊಬ್ಬರು ಅಪರೂಪದ ಪರಿಸರ ಪ್ರೇಮಿ
Last Updated 29 ಮೇ 2021, 19:30 IST
ಅಕ್ಷರ ಗಾತ್ರ

ಸಿದ್ದಾಪುರ: ‘ಚಿಕ್ಕಂದಿನಿಂದಲೂ ತಂದೆಯವರೊಡನೆ ದರಕು, ಸೊಪ್ಪು ತರಲು ಕಾಡಿಗೆ ಹೋಗುತ್ತಿದ್ದೆ. ಆಗ ಅವರು ಮರ-ಗಿಡಗಳನ್ನು ತೋರಿಸಿ ಪರಿಚಯ ಮಾಡಿಸುತ್ತಿದ್ದರು. ಇದು ನನ್ನಲ್ಲಿ ಪರಿಸರದ ಆಸಕ್ತಿ ಮೂಡಲು ಕಾರಣವಾಯ್ತು...’

ಕಾಡಿನಲ್ಲಿ ವರ್ಷವಿಡೀ ಓಡಾಡಿ, ಅಪರೂಪದ ಸಸ್ಯಗಳ ಬೀಜಗಳನ್ನು ಸಂಗ್ರಹಿಸಿ, ಜೂನ್‌ ತಿಂಗಳಿನಲ್ಲಿ ಅವುಗಳನ್ನ ಕಾಡಿನಲ್ಲಿಯೇ ಬಿತ್ತುವ ವಿಶಿಷ್ಟ ಕಾರ್ಯ ನಡೆಸುತ್ತಿರುವ ಗಣಪತಿ ಹೆಗಡೆ ವಡ್ಡಿನಗದ್ದೆ ಯಾವಾಗಲೂ ಹೇಳುವ ಮಾತುಗಳಿವು.

ಅರಣ್ಯ ಇಲಾಖೆ ಹಾಗೂ ಇತರ ಸಂಘಟನೆಗಳ ಸಹಯೋಗದೊಂದಿಗೆ ಹಲವು ವರ್ಷಗಳಿಂದ ಜೂನ್‌ ತಿಂಗಳಿನಲ್ಲಿ ಪರಿಸರ ದಿನವನ್ನು ತಮ್ಮ ಮನೆಯ ಆವರಣದಲ್ಲಿ ಆಚರಣೆ ಮಾಡುತ್ತಿದ್ದಾರೆ. ಅಂದು ತಮ್ಮ ಮನೆಯ ಸಮೀಪದಲ್ಲಿ ಬೀಜ ಬಿತ್ತಿ, ಗಿಡ ನೆಟ್ಟು ಸಹಜ ಕಾಡು ಬೆಳೆಸುವ ಕಾಯಕಕ್ಕೆ ಚಾಲನೆ ನೀಡುತ್ತಿದ್ದಾರೆ.

ಕಾಡಿನ ಸಸ್ಯಗಳು ಮೊಳೆತು, ಬೆಳೆಯುವ ವಿಧಾನದ ಬಗ್ಗೆ ಪಾರಂಪರಿಕ ಜ್ಞಾನ, ಸ್ವ ಅಧ್ಯಯನದ ಮೂಲಕ ಅರಿತುಕೊಂಡು, ಅದನ್ನು ಇತರರಿಗೂ ಅವರು ತಿಳಿಸಿಕೊಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಆ ಬಗ್ಗೆ ಪಾಠ ಮಾಡಿದ್ದಾರೆ.

ನೀರಿನಲ್ಲಿ ನೆನೆಸಿ, ಬೆಂಕಿಯ ಎದುರಿಟ್ಟು ಬಿಸಿಯಾಗಿಸಿ, ಮಣ್ಣಲ್ಲಿಟ್ಟು ತೇವಾಂಶ ನೀಡಿ ಹೀಗೆ ವಿಭಿನ್ನ ಮಾರ್ಗಗಳ ಮೂಲಕ ಕೆಲವು ಕಾಡು ಬೀಜಗಳನ್ನು ಮೊಳಕೆ ಬರಿಸಲು ಹರಸಾಹಸ ಪಟ್ಟಿದ್ದಾರೆ. ಕೆಲವು ಬೀಜಗಳನ್ನು 6 ವರ್ಷಗಳ ಸತತ ಪರಿಶ್ರಮದ ನಂತರ ಮೊಳಕೆ ಬರುವಂತೆ ಮಾಡಿದ್ದಾರೆ.

ಬರ್ಕ ಬಾಳೆ, ರುದ್ರಾಕ್ಷಿ, ಜಾಲರಿ, ಜಾಣಗೆ, ಬಿಂಬಲಕಾಯಿ, ಕರಿ ಮಾದಲು, ಸರ್ವ ಸುಗಂಧಿ, ಕಕ್ಕೆ, ಸಂಪಿಗೆ, ನುರಕಲು, ಗಣಪೆಕಾಯಿ, ರಾಳಧೂಪ, ಗುಲಗಂಜಿ ಸೇರಿದಂತೆ ಹಲವು ಕಾಡು ಸಸ್ಯಗಳ ಮೊಳಕೆ ಬರಿಸುವ ವಿಧಾನವನ್ನು ಹಲವರಿಗೆ ತಿಳಿಸಿಕೊಟ್ಟಿದ್ದಾರೆ. ಬಿಳೆ ಮುತ್ತುಗ, ಚವತಿ ಮೆಣಸು, ಪುತ್ರಂಜೀವಿ, ದೇವದಾರು, ಸರ್ಪಗಂಧಿ, ಹಾಲೆ ಹಣ್ಣು ಮತ್ತಿತರ ಅಪರೂಪದ ಸಸ್ಯಗಳ ಬೀಜಗಳನ್ನು ನೆಲದೊಳಗೆ ಬಿತ್ತಿದ್ದಾರೆ.

ನೂರಾರು ವರ್ಷ ಹಳೆಯ ಕಣಸೆ ಅಪ್ಪೆ ಸಸಿಗಳನ್ನು ತಯಾರಿಸಿ, ಅರಣ್ಯ ಇಲಾಖೆಗೆ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಪ್ರಕಾರವೇ ನಕ್ಷತ್ರ ವನ ಮತ್ತು ಅಶೋಕ ವನ ನಿರ್ಮಾಣಕ್ಕೂ ಮುಂದಾಗಿರುವ ಗಣಪತಿ ಹೆಗಡೆಯವರ ಕಾಡು ಬೀಜಗಳನ್ನು ಉಳಿಸುವ ಬೆಳೆಸುವ ಕಾಯಕ ವಿಸ್ತಾರವಾಗಿದೆ. ಗಣಪತಿ ಹೆಗಡೆ ಅವರ ‘ಸಾವಿರ ಬೀಜ ಸಹಜ ಕಾಡು’ ಕಾರ್ಯಕ್ರಮ ರಾಜ್ಯದಲ್ಲಿಯೇ ಅಪರೂಪದ್ದು ಎಂದು ಪರಿಸರ ತಜ್ಞರು ಶ್ಲಾಘಿಸಿದ್ದಾರೆ.

ಪರಿಸರ, ರಂಗಭೂಮಿ ಕೆಲಸ

ಗಣಪತಿ ಹೆಗಡೆ ವಡ್ಡಿನ ಗದ್ದೆ ಅವರ ಭಾರತಿ ಸಂಪದ ಸಂಸ್ಥೆ ಆರಂಭವಾಗಿ 16 ವರ್ಷಗಳಾಗಿದ್ದು, ಆ ಸಂಸ್ಥೆ ಪರಿಸರ ಸಂಬಂಧಿಸಿದ ಕೆಲಸ ಆರಂಭಿಸಿ 10 ವರ್ಷಗಳಾಗುತ್ತಿವೆ. ಇದೇ ಸಂಸ್ಥೆಯ ಮೂಲಕ ಮಕ್ಕಳಿಗಾಗಿ ರಂಗ ಚಟುವಟಕೆಗಳನ್ನು ನಡೆಸಿದ್ದಾರೆ. ಛಾಯಾಗ್ರಹಣವೂ ಅವರ ಪ್ರೀತಿಯ ಹವ್ಯಾಸ.

ಪರಿಸರ ದಿನಾಚರಣೆ

ಗಣಪತಿ ಹೆಗಡೆ ಅವರ ಮನೆಯಲ್ಲಿ ನಡೆದ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪರಿಸರ ತಜ್ಞರಾದ ಪಾಂಡುರಂಗ ಹೆಗಡೆ, ಶಿವಾನಂದ ಕಳವೆ, ಎಂ.ಬಿ.ನಾಯ್ಕ ಕಡಕೇರಿ, ಪೂರ್ಣಪ್ರಜ್ಞ ಬೇಳೂರು, ಅರಣ್ಯಾಧಿಕಾರಿಗಳು, ಸ್ಥಳೀಯ ಗಣ್ಯರು ಭಾಗಿಯಾಗಿದ್ದಾರೆ. ಪರಿಸರಕ್ಕಾಗಿ ದುಡಿಯುವವರನ್ನು ಗೌರವಿಸಲಾಗಿದೆ.

*****

ಈ ಸಲದ ಪರಿಸರ ದಿನದಂದು ಅಂಜೂರ, ಚಿಂತಾಮಣಿಯ ಕಸಿ ನೇರಲೆ ಗಿಡವನ್ನು ಅಡಿಕೆ ತೋಟದ ಬದುವಿನ ಮೇಲೆ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇನೆ.

- ಗಣಪತಿ ಹೆಗಡೆ, ವಡ್ಡಿನ ಗದ್ದೆ, ಪರಿಸರ ಪ್ರೇಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT