ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಡಿಕೆ ಬೆಳೆಗಾರರ ಕಂಗೆಡಿಸಿದ ಕೊಳೆ ರೋಗ

ತೋಟಗಾರಿಕೆ ಇಲಾಖೆಯ ಪ್ರಾಥಮಿಕ ಸಮೀಕ್ಷೆ: ಶೇ.30 ರಷ್ಟು ಪ್ರದೇಶಕ್ಕೆ ಹಾನಿ
Published 11 ಆಗಸ್ಟ್ 2024, 5:05 IST
Last Updated 11 ಆಗಸ್ಟ್ 2024, 5:05 IST
ಅಕ್ಷರ ಗಾತ್ರ

ಹೊನ್ನಾವರ: ರೈತರಿಬ್ಬರು ಭೇಟಿಯಾದರೆಂದರೆ ಅಡಿಕೆಗೆ ಕೊಳೆ ರೋಗ ಬಂದಿರುವ ಸಂಗತಿಯಿಂದಲೇ ಅವರ ಮಾತುಕತೆ ಆರಂಭವಾಗುತ್ತದೆ. ಅಷ್ಟರ ಮಟ್ಟಿಗೆ ಈ ವರ್ಷದ ಕೊಳೆ ರೋಗ ತಾಲ್ಲೂಕಿನ ಅಡಿಕೆ ಬೆಳೆಗಾರರನ್ನು ಬಾಧಿಸುತ್ತಿದೆ.

ತಾಲ್ಲೂಕಿನಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದ್ದು, 4,436 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿರುವುದನ್ನು ತೋಟಗಾರಿಕಾ ಇಲಾಖೆಯ ಅಂಕಿ–ಅಂಶ ತಿಳಿಸುತ್ತಿದೆ. ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಅತಿವೃಷ್ಟಿಯ ಕಾರಣದಿಂದ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಡಿಕೆಗೆ ಕೊಳೆ ರೋಗ ವ್ಯಾಪಿಸಿದೆ. ಸುಮಾರು 1,270 ಹೆಕ್ಟೇರ್ ವಿಸ್ತೀರ್ಣದ ಅಡಿಕೆ ತೋಟಗಳಲ್ಲಿ ಕೊಳೆ ರೋಗ ತಗುಲಿದೆ ಎಂದು ತೋಟಗಾರಿಕಾ ಇಲಾಖೆಯ ಪ್ರಾಥಮಿಕ ಸಮೀಕ್ಷೆಯಲ್ಲಿ ದೃಢಪಟ್ಟಿದೆ.

ಮಳೆಗಾಲದಲ್ಲಿ ಅಡಿಕೆಗೆ ಮೈಲುತುತ್ತದ ದ್ರಾವಣ ಸಿಂಪಡಿಸುವುದು ವಾಡಿಕೆ. ಈಚಿನ ವರ್ಷಗಳಲ್ಲಿ ಕೆಲ ರೈತರು ಮಳೆಗಾಲ ಆರಂಭವಾಗುವ ಮುನ್ನವೇ ಬಯೋಫೈಟ್ ಎಂಬ ಕೊಳೆರೋಗ ನಿಯಂತ್ರಕ ದ್ರಾವಣ ಕೂಡ ಸಿಂಪಡಿಸುತ್ತಿದ್ದಾರೆ. ದೋಟಿಯ ಮೂಲಕ ಔಷಧ ಸಿಂಪಡಿವ ಆಧುನಿಕ ತಂತ್ರಜ್ಞಾನ ಅಳವಡಿಕೊಂಡ ಮೇಲೆ ಅಡಿಕೆ ಮರ ಹತ್ತಲು ಕೊನೆಗೌಡರು ಸಿಗದ ರೈತರ ಸಂಕಷ್ಟ ಬಹುಪಾಲು ನಿವಾರಣೆಯಾಗಿದೆ.

ಆದರೆ, ಪ್ರಸ್ತುತ ಮಳೆಗಾಲದಲ್ಲಿ ನಿರಂತರ ಮಳೆಯಾಗಿದ್ದರಿಂದ ಹಲವು ತೋಟಗಳಲ್ಲಿ ಮದ್ದು ಸಿಂಪಡಣೆ ಸಾಧ್ಯವಾಗಿಲ್ಲ.ಮಳೆ ವಿಪರೀತವಾಗಿದ್ದರಿಂದ ಮದ್ದು ಸಿಂಪಡಿಸಿದರೂ ಅನೇಕ ಕಡೆಗಳಲ್ಲಿ ಕೊಳೆ ಬರದಂತೆ ನಿಯಂತ್ರಿಸುವುದು ಸಾಧ್ಯವಾಗಿಲ್ಲ ಎಂಬುದು ರೈತರ ಅಳಲು.

‘ಮಳೆಯಲ್ಲೇ ಮದ್ದು ಹೊಡೆಯುವುದು ಅನಿವಾರ್ಯವಾಯಿತು. ಆದರೆ ಅಡಿಕೆಗೆ ಕೊಳೆ ಬರುವುದನ್ನು ಮಾತ್ರ ತಡೆಯಲಾಗಲಿಲ್ಲ’ ಎಂದು ಚಿಕ್ಕನಕೋಡ ಗ್ರಾಮದ ವಿನಾಯಕ ಭಟ್ಟ ಹೇಳಿದರು.

ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದ ಮಾಡಗೇರಿಯಲ್ಲಿ ಕೊಳೆ ರೋಗದಿಂದ ಉದುರಿರುವ  ಹಸಿ ಅಡಿಕೆ
ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದ ಮಾಡಗೇರಿಯಲ್ಲಿ ಕೊಳೆ ರೋಗದಿಂದ ಉದುರಿರುವ  ಹಸಿ ಅಡಿಕೆ
ತಾಲ್ಲೂಕಿನಲ್ಲಿ ಸುಮಾರು ಶೇ.30 ರಷ್ಟು ಜಮೀನಿನಲ್ಲಿ ಅಡಿಕೆಗೆ ಕೊಳೆರೋಗ ಕಂಡುಬಂದಿದೆ. ಮೈಲುತುತ್ತ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ ಸ್ವೀಕರಿಸಲಾಗಿದ್ದು ಮೊದಲನೇ ಹಂತದಲ್ಲಿ ಬೆಳೆಗಾರರಿಗೆ ₹40 ಸಾವಿರ ಸಹಾಯಧನ ವಿತರಿಸಲಾಗುತ್ತಿದೆ
-ಸೂರ್ಯಕಾಂತ ಕೆ.ವಿ. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ

ಗುತ್ತಿಗೆ ಪಡೆದವರಿಗೆ ಸಮಸ್ಯೆ

ಕೂಲಿಕಾರರ ಕೊರತೆ ನಿರ್ವಹಣೆ ಮಾಡಲು ಉಂಟಾಗಿರುವ ತೊಂದರೆ ಆರ್ಥಿಕ ಸಂಕಷ್ಟ ಮೊದಲಾದ ಕಾರಣಗಳಿಗಾಗಿ ರೈತರು ತಮ್ಮ ಜಮೀನನ್ನು ಗುತ್ತಿಗೆ ನೀಡುತ್ತಿದ್ದಾರೆ. ಕೆಸಣ್ಣ ಗುತ್ತಿಗೆದಾರರಿಗೆ ಇದೊಂದು ಜೀವನೋಪಾಯಕ್ಕೆ ಉದ್ಯೋಗವಾಗಿದೆ. ಇಂಥ ಗುತ್ತಿಗೆದಾರರು ಕೊಳೆ ರೋಗದಿಂದ ಹೆಚ್ಚಿನ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ‘ಬೆಳೆಗಳಿಗೆ ವಿಮೆ ಮಾಡಿಸಿರುವ ರೈತರಿಗೆ ಅತಿವೃಷ್ಟಿಯ ಕಾರಣಕ್ಕೆ ಪರಿಹಾರ ಸಿಗಬಹುದು. ತೋಟವನ್ನು ಗುತ್ತಿಗೆ ಪಡೆದಿರುವ ನಾನು ಕೊಳೆ ರೋಗದಿಂದ ಉತ್ಪನ್ನ ಕಳೆದುಕೊಂಡು ತೊಂದರೆಗೊಳಗಾಗಿದ್ದೇನೆ. ನನಗೆ ಯಾವ ಪರಿಹಾರವೂ ಸಿಗುವುದಿಲ್ಲ’ ಎಂದು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿರುವ ರವಿ ಪಟಗಾರ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT