ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಪಾಳು ಬಿದ್ದ ಭೂಮಿಗೆ ಹಸಿರು ಸ್ಪರ್ಶ: ಕೃಷಿಯಲ್ಲಿ ನೆಮ್ಮದಿ ಕಂಡ ರೈತ

Published 10 ಮೇ 2024, 5:55 IST
Last Updated 10 ಮೇ 2024, 5:55 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನಲ್ಲಿ ನೂರಾರು ಎಕರೆ ಕೃಷಿ ಭೂಮಿ ಪಾಳುಬಿದ್ದುಕೊಂಡಿದೆ. ಜಮೀನಿದ್ದರೂ ವ್ಯವಸಾಯ ಮಾಡಲು ನಿರಾಸಕ್ತಿ ಹೊಂದಿದವರು ಸಾಕಷ್ಟಿದ್ದಾರೆ. ಆದರೆ, ಹೋಟೆಗಾಳಿ ಗ್ರಾಮದ ರೈತರೊಬ್ಬರು ಪಾಳುಬಿದ್ದ ಜಮೀನನ್ನು ಗೇಣಿ ಪಡೆದು ಹಸಿರಿನಿಂದ ನಳನಳಿಸುವಂತೆ ಮಾಡುತ್ತಿದ್ದಾರೆ.

ರಾಮಚಂದ್ರ ಕೊಳಂಬಕರ ಪಾಳುಬಿದ್ದ ಭೂಮಿಗೆ ಹೊಸ ಜೀವ ಕೊಡುತ್ತಿರುವ ರೈತ. ಮೀನು ವ್ಯಾಪಾರಿಯಾಗಿರುವ ಅವರು ವರ್ಷದ ಆರು ತಿಂಗಳನ್ನು ಕೃಷಿಗೆ ಮೀಸಲಿಡುತ್ತಿದ್ದಾರೆ. ಮುಡಗೇರಿ, ಹೋಟೆಗಾಳಿ ಗ್ರಾಮದ ಹತ್ತಾರು ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದು, ಇತರರನ್ನೂ ಕೃಷಿಯತ್ತ ಕರೆತರಲು ಪ್ರಯತ್ನಿಸುತ್ತಿದ್ದಾರೆ.

ಕಳೆದ ಸುಮಾರು ಒಂಬತ್ತು ವರ್ಷದಿಂದ ಬೇರೆಯವರ ಜಮೀನನ್ನು ಗೇಣಿಗೆ ಪಡೆದು ಅಲ್ಲಿ ವಾರ್ಷಿಕವಾಗಿ ಹತ್ತಾರು ಟನ್ ಕಲ್ಲಂಗಡಿ ಬೆಳೆದು ಮಾರಾಟ ಮಾಡುತ್ತಿದ್ದಾರೆ. ಕೃಷಿಯಿಂದ ಬರುವ ಆದಾಯವನ್ನು ಕೃಷಿಗೆ ಮರು ವಿನಿಯೋಗಿಸುವುದು ಅವರ ವಿಶೇಷತೆ.

‘ಹೋಟೆಗಾಳಿ ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ಮೀನು ವ್ಯಾಪಾರ ನಡೆಸುವುದು ಮೂಲ ಉದ್ಯೋಗವಾಗಿದೆ. ಕೆಲ ವರ್ಷಗಳ ಹಿಂದೆ ಪಾಳುಬಿದ್ದ ಗದ್ದೆಗಳನ್ನು ನೋಡಿ ಬೇಸರವಾಗುತ್ತಿತ್ತು. ಅಲ್ಲಿ ಕೃಷಿ ಚಟುವಟಿಕೆ ನಡೆಸಬೇಕು ಎಂಬ ಆಸೆ ಉಂಟಾಗಿತ್ತು. ಮುಡಗೇರಿಯಲ್ಲಿ ಪಾಳುಬಿದ್ದ ಜಮೀನಿನ ಮಾಲೀಕರನ್ನು ಸಂಪರ್ಕಿಸಿ ಕೃಷಿ ಮಾಡುವ ಬಯಕೆ ತೋಡಿಕೊಂಡೆ. ಗೇಣಿ ಆಧಾರದಲ್ಲಿ ಜಾಗ ಪಡೆದು ಕಲ್ಲಂಗಡಿ ಬೆಳೆಯಲಾರಂಭಿಸಿದೆ’ ಎಂದು ರಾಮಚಂದ್ರ ಕೊಳಂಬಕರ ತಮ್ಮ ಕೃಷಿಗಾಥೆ ವಿವರಿಸ ತೊಡಗಿದರು.

‘ಪ್ರತಿ ವರ್ಷ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದೇನೆ. ಆಗಸ್ಟ್ ಬಳಿಕ ಹಾಗೂ ಫೆಬ್ರವರಿ ಬಳಿಕ ಎರಡು ಅವಧಿಯಲ್ಲಿ ಪ್ರತಿ ಮೂರು ತಿಂಗಳು ಕೃಷಿ ಚಟುವಟಿಕೆ ನಡೆಯುತ್ತದೆ. ಹವಾಮಾನ ಸರಿಯಾಗಿದ್ದು, ಕಲ್ಲಂಗಡಿ ಬಳ್ಳಿಗೆ ರೋಗಬಾಧೆ ಕಾಡದಿದ್ದರೆ ಉತ್ತಮ ಫಸಲು ಸಿಗುತ್ತದೆ. ಜತೆಗೆ ಒಳ್ಳೆಯ ದರಕ್ಕೆ ಹಣ್ಣು ಮಾರಾಟವಾಗುತ್ತದೆ. ಕೇರಳ, ಗೋವಾ ಸೇರಿದಂತೆ ವಿವಿಧೆಡೆಯ ಮಾರುಕಟ್ಟೆಗೆ ಹಣ್ಣು ರವಾನೆಯಾಗುತ್ತದೆ. ಸ್ಥಳೀಯವಾಗಿಯೂ ಸಾಕಷ್ಟು ಬೇಡಿಕೆ ಇದೆ’ ಎಂದು ಹೇಳಿದರು.

‘ಮುಡಗೇರಿ ಬಳಿಕ ಕಳೆದ ವರ್ಷದಿಂದ ಹೋಟೆಗಾಳಿ ಗ್ರಾಮದಲ್ಲಿಯೂ ಜಾಗ ಗೇಣಿಗೆ ಪಡೆದು ಕಲ್ಲಂಗಡಿ ಬೆಳೆಯಲಾರಂಭಿಸಿದ್ದೇನೆ. ಪ್ರತಿ ಟನ್‍ಗೆ ₹11 ರಿಂದ 13 ಸಾವಿರ ದರ ಸಿಗುತ್ತಿದೆ. ಬಂದ ಆದಾಯದಲ್ಲಿ ಕೃಷಿ ಚಟುವಟಿಕೆಗೆ ಹೆಚ್ಚು ವ್ಯಯವಾಗುತ್ತದೆ. ಉಳಿದ ಲಾಭಾಂಶದಲ್ಲಿಯೂ ಬಹುಪಾಲು ಮುಂದಿನ ವರ್ಷದ ಕೃಷಿ ಚಟುವಟಿಕೆಗೆ ಮೀಸಲಿಟ್ಟುಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.

ಇಸ್ರೇಲ್ ಮಾದರಿ ಕೃಷಿ

ಕಲ್ಲಂಗಡಿ ಬೆಳೆಗೆ ಇಸ್ರೇಲ್ ಪದ್ಧತಿಯನ್ನು ಅಳವಡಿಸಿಕೊಂಡಿರುವ ರಾಮಚಂದ್ರ ಕಲ್ಲಂಗಡಿ ಸಸಿಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಹೊದಿಸುವ ಜತೆಗೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪಂಪ್ ಮೂಲಕ ನೀರಿನ ಜತೆ ಗೊಬ್ಬರ ಹಾಯಿಸುತ್ತಾರೆ. ಇದರಿಂದ ನೀರು ಕಡಿಮೆ ಸಾಕು ಕೆಲಸ ಕಡಿಮೆಯಾಗಲಿದೆ. ಅಲ್ಲದೆ ರೋಗಗಳೂ ಕಡಿಮೆ ಎಂಬುದು ಅವರ ಅನುಭವ.

ಹವಾಮಾನ ಸರಿಯಾಗಿದ್ದು ರೋಗಬಾಧೆ ಕಾಡದಿದ್ದರೆ ಕಲ್ಲಂಗಡಿ ಬೆಳೆ ಲಾಭದಾಯವಾಗುತ್ತದೆ.
-ರಾಮಚಂದ್ರ ಕೊಳಂಬಕರ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT