ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ಹಿಂಬಾಕಿ ವೇತನ ಪಾವತಿಸಲು ಆದೇಶ

Last Updated 1 ಏಪ್ರಿಲ್ 2022, 15:51 IST
ಅಕ್ಷರ ಗಾತ್ರ

ಅಂಕೋಲಾ: ಅನುದಾನಿತ ಪದವಿ ಕಾಲೇಜುಗಳ ಪ್ರಾಧ್ಯಾಪಕರ ಸ್ಥಾನಿಕರಣ (ಪದೋನ್ನತಿ) ಹಿಂಬಾಕಿ ವೇತನ ಬಿಡುಗಡೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಎಂ.ಜಿ. ವೆಂಕಟೇಶಯ್ಯ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಆದೇಶಿಸಿದ್ದಾರೆ.

ಅನುದಾನಿತ ಪದವಿ ಕಾಲೇಜುಗಳ ಪ್ರಾಧ್ಯಾಪಕರ ಹಲವು ವರ್ಷಗಳ ಬೇಡಿಕೆ ಪರಿಣಾಮ ಹಣಕಾಸು ಇಲಾಖೆಯಿಂದ ಸ್ಥಾನಿಕರಣ ಹಿಂಬಾಕಿ ವೇತನ ಬಿಡುಗಡೆಯಾಗಿತ್ತು. ಮಾರ್ಚ್ 23ರಂದು ಮಂಜೂರಾಗಿದ್ದ ₹ 13 ಕೋಟಿ ಹಣವನ್ನು, ಆರು ಮತ್ತು ಏಳನೇ ವೇತನ ಆಯೋಗದ ಯುಜಿಸಿ ಪರಿಷ್ಕೃತ ವೇತನದಲ್ಲಿ ಹೆಚ್ಚುವರಿ ತುಟ್ಟಿಭತ್ಯೆ ಪಡೆದ ಕಾರಣ ಹಿಂಬಾಕಿ ಸೆಳೆಯಬಾರದು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ನೀಡಿದ್ದರು. ಈ ಆದೇಶ ಸಾವಿರಾರು ಪ್ರಾಧ್ಯಾಪಕರಿಗೆ ನಿರಾಸೆ ಮೂಡಿಸಿತ್ತು. ಸ್ಥಾನಿಕರಣ ಹಿಂಬಾಕಿ ವೇತನ ತಡೆಹಿಡಿದ ಕುರಿತು ‘ಪ್ರಜಾವಾಣಿ’ ಮಾರ್ಚ್ 29 ರಂದು ವಿಶೇಷ ವರದಿ ಪ್ರಕಟಿಸಿತ್ತು.

ಹಿಂಬಾಕಿ ವೇತನ ಬಿಡುಗಡೆ ಪಾವತಿಸಲು ಎಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಸಮಸ್ಯೆ ಇರುವುದರಿಂದ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಪಿ.ಡಿ ಖಾತೆಯಲ್ಲಿ ಜಮೆ ಮಾಡಿ ಏಪ್ರಿಲ್ ಅಂತ್ಯದೊಳಗೆ ಪ್ರಾಧ್ಯಾಪಕರಿಗೆ ಪಾವತಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಯು.ಜಿ.ಸಿ ವೇತನ ಹಿಂಬಾಕಿ ಬಿಡುಗಡೆ:ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರಾಧ್ಯಾಪಕರು ಮತ್ತು ತತ್ಸಮಾನ ಸಿಬ್ಬಂದಿಗೆ 2006 ಮತ್ತು 2016 ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಯ ವ್ಯತ್ಯಾಸ ಬಾಕಿ ಮೊತ್ತ ₹ 454.96 ಕೋಟಿ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ವ್ಯತ್ಯಾಸ ಬಾಕಿಯಲ್ಲಿ ಈ ಹಿಂದೆ ಪಾವತಿಸಿದ ಹೆಚ್ಚುವರಿ ಮೊತ್ತವನ್ನು ಸೆಳೆದು ಪಾವತಿ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆಗೆ ಉಪಕಾರ್ಯದರ್ಶಿ ಸೂಚಿಸಿದ್ದಾರೆ.

ಸರ್ಕಾರದ ಆದೇಶದಿಂದ ಸ್ಥಾನಿಕರಣ ಹಿಂಬಾಕಿ ವೇತನ ದೊರೆಯುವಂತಾಗಿದೆ. ಆದೇಶದಿಂದ ಸಾವಿರಾರು ಪ್ರಾಧ್ಯಾಪಕರಿಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಖಾಸಗಿ ಶಿಕ್ಷಕರ (ಕ.ವಿ.ಖಾ.ಶಿ) ಸಂಘದ ಪದಾಧಿಕಾರಿ ಡಾ.ಎಸ್.ವಿ. ವಸ್ತ್ರದ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT