ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಅಪಾಯಕ್ಕೆ ಆಹ್ವಾನಿಸುತ್ತಿರುವ ‘ಹೆಮ್ಮರ’

ಸಾರ್ವಜನಿಕ ಸ್ಥಳಗಳಲ್ಲಿ ಜೀವಭಯ: ಮರಗಳ ತೆರವಿಗೆ ನಿರ್ಲಕ್ಷ್ಯ
Published : 5 ಆಗಸ್ಟ್ 2024, 5:02 IST
Last Updated : 5 ಆಗಸ್ಟ್ 2024, 5:02 IST
ಫಾಲೋ ಮಾಡಿ
Comments

ಕಾರವಾರ: ಮಳೆ ಗಾಳಿಯ ಅಬ್ಬರಕ್ಕೆ ಧರೆಗುರುಳುವ ಮರಗಳು ಅಪಾಯ ಸೃಷ್ಟಿಸುವುದು ಸಾಮಾನ್ಯ ಸಂಗತಿ. ಆದರೆ, ಜಿಲ್ಲೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ ಎಂಬುದು ಜನರ ಆರೋಪ.

ಸರ್ಕಾರಿ ಶಾಲೆ, ಅಂಗನವಾಡಿ, ಕಚೇರಿ ಕಟ್ಟಡಗಳು, ಹೆದ್ದಾರಿ ಹೀಗೆ ಹಲವೆಡೆ ಅಪಾಯಕಾರಿ ಸ್ಥಿತಿಯಲ್ಲಿ ಮರಗಳಿವೆ. ಈಚೆಗೆ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲೆಯ 220ಕ್ಕೂ ಹೆಚ್ಚು ಶಾಲೆಗಳ ಪಕ್ಕದಲ್ಲಿ ಬೀಳುವ ಸ್ಥಿತಿಯಲ್ಲಿ ಮರಗಳಿವೆ ಎಂದು ಅಧಿಕಾರಿಗಳು ವರದಿ ನೀಡಿದ್ದರು. ಆದರೆ, ಅವುಗಳ ಪೈಕಿ ಕೆಲವೇ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

ಕಾರವಾರದ ಎಂ.ಜಿ.ರಸ್ತೆ, ಗ್ರೀನ್ ಸ್ಟ್ರೀಟ್‍ನಲ್ಲಿ ಬೃಹತ್ ಗಾತ್ರದ ಮರಗಳಿದ್ದು ಕಟ್ಟಡದ ಮೇಲೆ ಎರಗುವ ಆತಂಕ ಸೃಷ್ಟಿಸುತ್ತಿವೆ. ಮರಗಳ ಬೇರು ಸಡಿಲಗೊಂಡಿರುವ ಶಂಕೆಯನ್ನು ಜನರು ವ್ಯಕ್ತಪಡಿಸುತ್ತಾರೆ. ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವು ಮಾಡಲು ನಗರಸಭೆಗೆ ದೂರಿದರೂ ಸ್ಪಂದನೆ ಸಿಗುತ್ತಿಲ್ಲ ಎಂದು ನಂದನಗದ್ದಾದ ರಾಹುಲ್ ನಾಯ್ಕ ದೂರುತ್ತಾರೆ.

ಶಿರಸಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೆ ಸಾಗುವ ರಸ್ತೆ ಬದಿಗಳಲ್ಲಿ ಕೆಲವೆಡೆ ಅಪಾಯಕರ ಸ್ಥಿತಿಯಲ್ಲಿ ಮರಗಳಿದ್ದು, ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ.

ಹುತ್ಗಾರ್, ಕೆಂಗ್ರೆ ಹೊಲಕೆ, ಕೊಟ್ಗೆಮನೆ, ಹೆಗಡೆಕಟ್ಟಾ ರಸ್ತೆಯ ಬಹುಭಾಗ, ಸಿದ್ದಾಪುರ ರಸ್ತೆ, ಗಿಡಮಾವಿನಕಟ್ಟಾ, ಯಲ್ಲಾಪುರ ರಸ್ತೆ ಸುಬ್ರಾಯಕೊಡ್ಲು, ಚಿಪಗಿ ಸಮೀಪದಲ್ಲಿ ಮರಗಳು ರಸ್ತೆಗೆ ವಾಲಿಕೊಂಡಿದ್ದು, ಕೆಲವೆಡೆ ವಿದ್ಯುತ್ ತಂತಿಗಳ ಮೇಲೆಯೇ ಮರದ ರೆಂಬೆಗಳು ಬಿದ್ದುಕೊಂಡಿವೆ.

‘ತೀರಾ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಜನರ ದೂರಿನ ಮೇರೆಗೆ ತೆರವು ಮಾಡಲಾಗುತ್ತಿದೆ’ ಎನ್ನುತ್ತಾರೆ ಶಿರಸಿ ಡಿಸಿಎಫ್ ಜಿ.ಆರ್.ಅಜ್ಜಯ್ಯ.

ಮುಂಡಗೋಡ ತಾಲ್ಲೂಕಿನ ಕೆಲವು ಸರ್ಕಾರಿ ಕಚೇರಿ ಆವರಣ, ವಸತಿ ನಿಲಯದ ಆವರಣದಲ್ಲಿ ಹಳೆಯ ಮರಗಳು ಇವೆ. ಅವುಗಳ ಕೊಂಬೆಗಳು ಆಗಾಗ ಮಳೆ, ಗಾಳಿಗೆ ಕಟ್ಟಡದ ಮೇಲೆ ಬೀಳುತ್ತಿವೆ. ಕೆಲವೊಮ್ಮೆ ಕಟ್ಟಡದ ಚಾವಣಿ ಮೇಲೆ ಬಿದ್ದು ಹೆಂಚು, ತಗಡಿನ ಶೀಟ್‌ಗಳು ಹಾನಿಯಾಗಿವೆ.

ಪಟ್ಟಣದ ತಾಲ್ಲೂಕು ಪಂಚಾಯಿತಿ ಹಿಂಬದಿ, ಕೃಷಿ ಇಲಾಖೆಯ ಆವರಣದಲ್ಲಿ ಗಾಳಿ ಮರಗಳು ಬೆಳೆದಿವೆ. ಇವುಗಳ ಕೊಂಬೆಗಳು ಇತರ ಇಲಾಖೆಯ ಕಟ್ಟಡಗಳ ಮೇಲೂ ಚಾಚಿವೆ.

‘ಅರಣ್ಯ ಇಲಾಖೆಯಿಂದ ನಿಗದಿಪಡಿಸಿದ 40 ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸಲು ಇಲಾಖೆಯ ಅನುಮತಿ ಪಡೆಯಬೇಕು. ಗಾಳಿ ಮರದಂಥ ಇತರ ಜಾತಿಯ ಮರಗಳನ್ನು ಆಯಾ ಇಲಾಖೆಯವರೇ ಕಟಾವು ಮಾಡಿಕೊಳ್ಳಲು ಅವಕಾಶವಿದೆ’ ಎಂದು ಉಪವಲಯ ಅರಣ್ಯಾಧಿಕಾರಿ ಅರುಣಕುಮಾರ ಕಾಶಿ ಹೇಳಿದರು.

ಗೋಕರ್ಣದ ಮೇಲಿನಕೇರಿಯ ಸಾರ್ವಜನಿಕ ಸ್ಥಳದಲ್ಲಿರುವ ಬೃಹತ್ ಮರದ ಟೊಂಗೆ ತೆಗೆಯುವಂತೆ ಕೆಲವು ವರ್ಷಗಳಿಂದ ನಾಗರಿಕರು ಆಗ್ರಹಿಸುತ್ತ ಬಂದರೂ, ಸ್ಥಳೀಯ ಆಡಳಿತ ಸ್ಪಂದಿಸುತ್ತಿಲ್ಲ ಎಂಬ ದೂರು ಇದೆ.

ಬೃಹದಾಕಾರದ ಮರದ ಟೊಂಗೆಯ ಭಾಗ ಅರ್ಧ ರಸ್ತೆಯ ಮೇಲೆಯೇ ಇದೆ. ಇವತ್ತೊ ನಾಳೆಯೋ ಮುರಿದು ಬೀಳುವ ಆತಂಕ ಜನರಲ್ಲಿ ಮೂಡಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿಗೆ ದೂರು ನೀಡಿದರೂ ಇನ್ನುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿಯಿಂದ ಆಲ್ವಾಡ-ಕಬ್ಬಿನಗದ್ದೆಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಲೈನ್ ಕಬ್ಬಿನಗದ್ದೆಯ ಅಂಗನವಾಡಿ ಪಕ್ಕದಲ್ಲಿ ಹಾದು ಹೋಗಿದ್ದು ಇಲ್ಲಿ ದೊಡ್ಡಮರವೊಂದು ವಿದ್ಯುತ್ ಲೈನ್ ಮೇಲೆ ಮುರಿದು ಬೀಳುವಂತಿದೆ.

ತಾಲ್ಲೂಕಿನಲ್ಲಿ ಈ ಬಾರಿ ಮಳೆಗಾಲದ ಪೂರ್ವ ವಿದ್ಯುತ್ ಲೈನ್ ಅಕ್ಕಪಕ್ಕದ ಟೊಂಗೆ ಕಟಾವು ಮಾಡಲಾಗಿಲ್ಲ. ಬಹಳಷ್ಟು ಕಡೆ ಗ್ರಾಮಸ್ಥರೇ ವಿದ್ಯುತ್ ಲೈನ್ ಅಕ್ಕಪಕ್ಕದ ಟೊಂಗೆ ಕಟಾವು ಮಾಡಿದ್ದಾರೆ.

ಹಳಿಯಾಳ ಪಟ್ಟಣದಲ್ಲಿ ಬೃಹದಾಕಾರವಾಗಿ ಬೆಳೆದ ಅಪಾಯಕಾರಿ ಸ್ಥಿತಿಯಲ್ಲಿರುವ ಹಲವು ಮರಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಆದರೂ, ಕೆಲವೆಡೆ ಅಪಾಯದ ಸ್ಥಿತಿಯಲ್ಲಿರುವ ಮರಗಳು ಉಳಿದುಕೊಂಡಿವೆ. ನಾರನಹಳ್ಳಿ ಗ್ರಾಮದ ಹತ್ತಿರ ಮರದ ಬೃಹತ್ ಟೊಂಗೆಗಳು ಹಾಗೂ ಮರಗಳು ವಿದ್ಯುತ್ ತಂತಿಯ ಮೇಲೆ ಹರಿದುಬಿದ್ದು ಸುಮಾರು 12 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು.‌

‘ಕೆಲವು ಖಾಸಗಿ ಜಾಗದಲ್ಲಿರುವ ಮರಗಳು ಬೃಹದಾಕಾರವಾಗಿ ಬೆಳೆದಿದ್ದು, ಅಪಾಯದ ಮುಂಚೆಯೇ ಜಾಗದ ಮಾಲೀಕರು ಮರಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದು ತೆರವುಗೊಳಿಸಬೇಕು’ ಎಂಬುದು ಜನರ ಅಭಿಪ್ರಾಯ.

ಅಂಕೋಲಾ ತಾಲ್ಲೂಕಿನ ಬಹುತೇಕ ಸರ್ಕಾರಿ ಕಟ್ಟಡ, ಶಾಲೆ, ವಸತಿ ನಿಲಯ ಪ್ರದೇಶಗಳ ಕಟ್ಟಡದ ಮುಂದೆ ಬಹಳಷ್ಟು ಬೃಹದಾಕಾರದ ಮರಗಳಿದ್ದು, ಇದೇ ಮರಗಳ ಕೆಳಗೆ ವಿದ್ಯುತ್ ಪರಿವರ್ತಕ, ಕಂಬಗಳಿವೆ.

ಕೇಣಿಯ ವಸತಿ ನಿಲಯದ ಎದುರು ಬೃಹದಾಕಾರದ ಮರವಿದ್ದು, ಹತ್ತಿರದಲ್ಲೇ ವಿದ್ಯುತ್ ಕಂಬವಿದೆ. ಜೈಹಿಂದ್ ಶಾಲೆಯ ಹಿಂದುಗಡೆ ಪೊಲೀಸ್ ಠಾಣೆಯ ಮುಂದೆ ವಿದ್ಯುತ್ ಪರಿವರ್ತಕವಿದ್ದು ಅದರ ಪಕ್ಕದಲ್ಲಿ ಬಹಳಷ್ಟು ಬೃಹದಾಕಾರದ ಮರವಿದ್ದು ವಿದ್ಯಾರ್ಥಿಗಳು ಭಯದಲ್ಲಿ ಓಡಾಡುವಂತಾಗುತ್ತಿದೆ. 

ಯಲ್ಲಾಪುರ ಕಬ್ಬಿನಗದ್ದೆಯಲ್ಲಿ ಅಂಗನವಾಡಿ ಪಕ್ಕದಲ್ಲಿ ವಿದ್ಯುತ್ ತಂತಿಯ ಮೇಲೆ ಬೀಳುವ ಸ್ಥಿತಿಯ ಮರ ತೆರವಿಗೆ ಹೆಸ್ಕಾಂಗೆ ಹಲವು ದಿನದ ಹಿಂದೆಯೇ ದೂರು ನೀಡಲಾಗಿದೆ. ಈವರೆಗೆ ಮರ ತೆರವಾಗಿಲ್ಲ

–ರಾಮಣ್ಣ ಕಬ್ಬಿನಗದ್ದೆ ಹಾಸಣಗಿ ಗ್ರಾ.ಪಂ ಮಾಜಿ ಅಧ್ಯಕ್ಷ

ಗ್ರಾಮೀಣ ಭಾಗದಲ್ಲಿಯ ರಸ್ತೆಯ ಅಕ್ಕಪಕ್ಕ ವಿದ್ಯುತ್ ತಂತಿಗೆ ಹೊಂದಿಕೊಂಡು ಮರಗಳು ಬೃಹದಾಕಾರವಾಗಿ ಬೆಳೆದಿದ್ದು ಅಪಾಯಕಾರಿ ಮರಗಳನ್ನು ಗುರುತಿಸಿ ಅರಣ್ಯ ಇಲಾಖೆ ತೆರವುಗೊಳಿಸಬೇಕು.

–ಅಶೋಕ ಮೇಟಿ ಹಳಿಯಾಳ ಸಾಮಾಜಿಕ ಕಾರ್ಯಕರ್ತ

ಅಂಕೋಲಾ ಪಟ್ಟಣ ಗ್ರಾಮೀಣ ಭಾಗದ ಹಲವೆಡೆ ವಿದ್ಯುತ್ ಪರಿವರ್ತಕದ ಪಕ್ಕದಲ್ಲಿಯೇ ಅಪಾಯಕಾರಿ ಸ್ಥಿತಿಯಲ್ಲಿ ದೊಡ್ಡ ಮರಗಳಿವೆ. ಅವುಗಳನ್ನು ತುರ್ತಾಗಿ ತೆರವುಗೊಳಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕು.

–ಮಂಜುನಾಥ ನಾಯ್ಕ ಅಂಕೋಲಾ ಸಾಮಾಜಿಕ ಕಾರ್ಯಕರ್ತ

20 ಶಾಲೆಗಳಿಗೆ ಅಪಾಯದ ಸ್ಥಿತಿ

ಹೊನ್ನಾವರ ತಾಲ್ಲೂಕಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಮರಗಳನ್ನು ಕಡಿಯಬೇಕೆಂದರೆ ಅಧಿಕೃತ ಪರವಾನಗಿ ಸುಲಭವಾಗಿ ಸಿಗುತ್ತಿಲ್ಲ. ಸಂಬಂಧಿಸಿದ ಇಲಾಖೆಯೂ ತುರ್ತಾಗಿ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸುತ್ತಿಲ್ಲ ಎಂಬ ಆರೋಪಗಳಿವೆ.  ಕಳಸಿನಮೋಟೆ ಹೆಬ್ಬಾರಹಿತ್ಲ ಉಪಜಳಕೇರಿ ಕುಳಕೋಡ ಹರಡಸೆ ತುಂಬೆಬೀಳು ಚಿತ್ತಾರ ಬಾಂದೇಗದ್ದೆ ಬೆಳಕೊಂಡ ಬಂದರ ಸೇರಿದಂತೆ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಕನಿಷ್ಠ 20 ಶಾಲಾ ಕಟ್ಟಡಗಳ ಮೇಲೆ ಮರ ಬೀಳುವ ಅಪಾಯಕಾರಿ ಸ್ಥಿತಿ ಇದೆ. ಕೆಲವು ರಸ್ತೆಗಳ ಪಕ್ಕ ಹಾಗೂ ವಿದ್ಯುತ್ ತಂತಿಗಳ ಮಾರ್ಗದಲ್ಲಿ ಮಳೆಗಾಲದ ಮಧ್ಯದಲ್ಲಿ ಮರ ಕಡಿಯಲಾರಂಭಿಸಿದ್ದು ಟೊಂಗೆಗಳನ್ನು ತೆರವುಗೊಳಿಸದೇ ಹಾಗೆ ಬಿಟ್ಟಿರುವುದರಿಂದ ಸಂಚಾರಕ್ಕೆ ತೊಡಕಾಗಿರುವ ದೂರುಗಳಿವೆ. ‘ತಾಲ್ಲೂಕಿನ 19 ಶಾಲೆಗಳ ಸಮೀಪ ಅಪಾಯಕಾರಿಯಾಗಿರುವ ಮರಗಳನ್ನು ಕಟಾವು ಮಾಡುವಂತೆ ವಿನಂತಿಸಿ ಹೊನ್ನಾವರ ಮಂಕಿ ಹಾಗೂ ಗೇರುಸೊಪ್ಪ ವಲಯ ಅರಣ್ಯಾಧಿಕಾರಿಗಳಿಗೆ ಜುಲೈ 27 ರಂದು ಪತ್ರ ಬರೆಯಲಾಗಿದೆ’ ಎಂದು ಹೊನ್ನಾವರ ಬಿಇಒ ಜಿ.ಎಸ್. ನಾಯ್ಕ ತಿಳಿಸಿದರು.

ಐದು ಅಂಗನವಾಡಿಗಳ ಪಕ್ಕ ಮರ ತೆರವು

ಸಿದ್ದಾಪುರ ತಾಲ್ಲೂಕಿನಲ್ಲಿರುವ ಅಂಗನವಾಡಿಗಳಲ್ಲಿ 48 ಅಂಗನವಾಡಿಗಳ ಪಕ್ಕ ಮರಗಳಿದ್ದು ಮಳೆಗಾಲದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಈ ಕುರಿತು ತಹಶೀಲ್ದಾರ್‌ ಮುಖಾಂತರ ಅರಣ್ಯ ಇಲಾಖೆಗೆ ಮರಗಳನ್ನು ತೆರವುಗೊಳಿಸುವಂತೆ ಮನವಿ ನೀಡಿದ್ದು ಈಗಾಗಲೇ 5 ಅಂಗನವಾಡಿಗಳ ಸುತ್ತಲಿನ ಮರಗಳನ್ನು ತೆರವುಗೊಳಿಸಿದ್ದಾರೆ. ಮಂಡ್ಲಿಕೊಪ್ಪ ಮತ್ತು ಅಕ್ಕುಂಜಿ ಅಂಗನವಾಡಿಗಳ ಅಕ್ಕಪಕ್ಕದ ಮರಗಳನ್ನು ತುರ್ತಾಗಿ ತೆರವುಗೊಳಿಸುವ ಕೆಲಸ ಆಗಬೇಕಿದೆ ಎಂದು ಸಿಡಿಪಿಒ ಪೂರ್ಣಿಮಾ ದೊಡ್ಡಮನಿ ಮಾಹಿತಿ ನೀಡಿದರು. ‘33 ಶಾಲೆಗಳ ಪಕ್ಕ ಮರಗಳಿದ್ದು ಮಳೆಗಾಲದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಇದೆ. ಅರಣ್ಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. 13 ಶಾಲೆಗಳ ಪಕ್ಕದ ಮರಗಳನ್ನು ತೆರವುಗೊಳಿಸಲಾಗಿದ್ದು ಉಳಿದ ಶಾಲೆಗಳ ಮರಗಳನ್ನು ತೆರವುಗೊಳಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಸಿದ್ದಾಪುರ ಬಿಇಒ ಎಚ್.ಎಂ.ನಾಯ್ಕ ಮಾಹಿತಿ ನೀಡಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ವಿಶ್ವೇಶ್ವರ ಗಾಂವ್ಕರ, ಸುಜಯ್ ಭಟ್, ಮೋಹನ ದುರ್ಗೇಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT