ಸಹ್ಯಾದ್ರಿ ಬೆಟ್ಟಗಳ ಹೊಟ್ಟೆಯೊಳಗೆ ಹಚ್ಚೆ ಹಾಕಿದ ರಹಸ್ಯದಂತೆ ಮಲಗಿರುವ ಪುಟ್ಟ ಊರು ಬೈಲಗದ್ದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ. ದೂರ. ಮಳೆ, ಗಾಳಿ, ಮಣ್ಣು, ನಿಶ್ಯಬ್ದತೆಯೇ ಅಲ್ಲಿಯ ಮಂತ್ರ. ಮೊಬೈಲ್ ನೆಟ್ವರ್ಕ್ ಹುಡುಕಲು ಮರವೇರಿ ಕೈ ಎತ್ತುವಷ್ಟು ದೂರದ ಬದುಕು. ಆದರೆ, ಮಣ್ಣಿನ ಮಡಿಲಲ್ಲಿ ಮುದ್ದಿನ ಕಥೆಗಳು ಸಾಕಷ್ಟಿವೆ. ಶರಾವತಿಯ ಹರಿವು ಊರ ಪಕ್ಕದಲ್ಲಿ ಹಳೆಯ ಗೆಳೆಯನಂತೆ ನಗುತ್ತದೆ; ಕಾಡು, ಬೆಟ್ಟ, ತೊರೆಗಳು ಜೋಗುಳ ಹಾಡುತ್ತವೆ.

ಈ ಬೈಲಗದ್ದೆ ಊರಲ್ಲಿ ಅಕ್ಷರ ಬೆಳಕಿನ ಯಾತ್ರೆ ಆರಂಭವಾಗಿದ್ದೇ ಒಂದು ಚಂದದ ಇತಿಹಾಸ.

ಅದು 1963ರ ಕಾಲಘಟ್ಟ. ಯಾವ ಮೂಲಸೌಕರ್ಯಗಳನ್ನೂ ಕಾಣದ, ಕಾಡಂಚಿನ ಕುಗ್ರಾಮವಿದು. ಆ ಸಂದರ್ಭ ವಿದ್ಯೆಯ ದೀಪ ಬೆಳಗಿಸಲು ಊರಿನ ರೈತ ಗಣಪತಿ ಗೌಡರು, ವಾಟೆಕೋಲು ಮತ್ತು ತಾಳೆಗರಿಯಿಂದ ನಿರ್ಮಿಸಿದ್ದ ತಮ್ಮ ಗುಡಿಸಲಿನ ಮನೆಯನ್ನು ಮಕ್ಕಳಿಗೆ ಓದಲು ನೀಡಿದ್ದರು. ಪಾಟಿ, ಬಳಪ ಹಿಡಿದು ಬರುತ್ತಿದ್ದ ಮಕ್ಕಳ ಕಣ್ಣಲ್ಲಿ ಭರವಸೆಯ ಬೆಳಕು. ಆ ಪುಟ್ಟ ಗುಡಿಸಲ ಗರ್ಭದಿಂದ ಹೊರಬಂದ ಮೊದಲ ಅಕ್ಷರಗಳು, ಮೊದಲ ಕನಸು ವರ್ಣಮಾಲೆಯ ಅಕ್ಷರಗಳಾಗಿದ್ದವು.

ಆರಂಭದಲ್ಲಿ ಗುರುಗಳಾಗಿ ಬಂದ ಉಮೇಶ ನಾಯ್ಕರು, ಪ್ರತಿದಿನ ಕಾಲು ಸಂಕ ದಾಟಿ, ಕಾಡಿನ ದಾರಿ ನುಸುಳಿ, ಗುಡ್ಡ, ಬೆಟ್ಟ ಹತ್ತಿ, ಮಣ್ಣಿನ ಹಾದಿಯ ಮೇಲಿಂದ ತಮ್ಮ ಹೃದಯದ ಪಾಠವನ್ನು ಮಕ್ಕಳ ಹಸ್ತದಲ್ಲಿ ಇಡುತ್ತಿದ್ದರು. ಅವರು ತಂದದ್ದು ಕೇವಲ ಪಾಠ–ಪುಸ್ತಕವಾಗಿರಲಿಲ್ಲ, ಬೆಳಕಿನ ನಂಬಿಕೆಯಾಗಿತ್ತು.

ಮೂರು ವರ್ಷದ ನಂತರ ಜಿಲ್ಲಾ ಪಂಚಾಯ್ತಿಯಿಂದ ಎರಡು ಕೊಠಡಿಯ ಶಾಲೆ ನಿರ್ಮಾಣಕ್ಕೆ ಅನುಮೋದನೆ ಸಿಗುತ್ತದೆ. ಅದೇ ಗಣಪತಿ ಗೌಡರು ಎರಡು ಎಕರೆ ಜಾಗವನ್ನು ಶಾಲೆಗೆ ದಾನವಾಗಿ ನೀಡುತ್ತಾರೆ. ಬೈಲಗದ್ದೆಯ ಮಣ್ಣೆಲ್ಲ ಶಿಕ್ಷಣಕ್ಕೆ ಮುತ್ತು ಹಾಕಿದಂತಾಗುತ್ತದೆ. ಆ ಮಣ್ಣಿನಲ್ಲಿ ಓಡಾಡಿದ ಸಾವಿರಾರು ಮಕ್ಕಳ ಹೆಜ್ಜೆಗಳು ಇಂದು ಲೋಕದ ಹಲವೆಡೆ ಮಿಂಚುತ್ತಿವೆ.

ಕಾಲ ಉರುಳಿತ್ತು. ಗುಡಿಸಲು ಶಾಲೆ ಕೊಠಡಿ ಶಾಲೆಯಾಗಿ, ಈಗ ಆರ್ಸಿಸಿ ಕಟ್ಟಡವಾಗಿದೆ. ಒಂದರಿಂದ ಏಳನೇ ತರಗತಿವರೆಗೆ ಓದುವ ಸುಮಾರು ಐವತ್ತು ಮಕ್ಕಳು, ಇಂದಿನ ಆಧುನಿಕ ಶಿಕ್ಷಣದ ಅಂಚಿನಲ್ಲಿ ನಿಂತು, ಕಾಡಿನೊಳಗಿನ ಜಗತ್ತನ್ನು ನೋಡುತ್ತಿದ್ದಾರೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಎಂಬ ಸರಳ ಹೆಸರಿನೊಂದಿಗೆ, ಬದುಕು ಕಟ್ಟಿಕೊಂಡಿದ್ದಾರೆ, ಇನ್ನೂ ಅನೇಕರ ಬದುಕು ಸಹ ಅದರಲ್ಲಿ ಅಡಗಿದೆ.

ಜ. 31ರಂದು ಈ ಶಾಲೆಯ ಸುವರ್ಣ ಮಹೋತ್ಸವ ನಡೆದಿದ್ದು, ಅದು ಒಂದು ದಿನದ ಕಾರ್ಯಕ್ರಮವಷ್ಟೇ ಆಗಿರಲಿಲ್ಲ. ಒಂದು ಕಾಲಘಟ್ಟದ ಪುನರ್ಸೃಷ್ಟಿಯಾಗಿತ್ತು. ವಾಟೆಕೋಲುಗಳಿಂದ ಗುಡಿಸಲು ಶಾಲೆ ಅಲ್ಲಿ ಮತ್ತೆ ಎದ್ದು ನಿಂತಿತ್ತು, ಸ್ಮರಣೆಯಂತೆ, ಸಾಕ್ಷಿಯಂತೆ. ಇದಕ್ಕಿಂತಲೂ ಹೃದಯಸ್ಪರ್ಶಿಯಾಗಿದ್ದು, ಶಾಲಾ ಮೈದಾನವನ್ನೇ ಗದ್ದೆಯಾಗಿಸಿರುವ ದೃಶ್ಯ. ನೀರು ನಿಲ್ಲಿಸಿ, ಬೇಸಿಗೆಯಲ್ಲೇ ಭತ್ತದ ನಾಟಿ ಮಾಡಿ, ‘ನಮ್ಮ ಶಾಲೆ ಹೀಗಿತ್ತು’ ಎನ್ನುವ ಮಾತು, ಮಾರ್ಧನಿಸುವಂತೆ ಮಾಡಲಾಗಿತ್ತು. ಜಾನಪದದ ಜಾತ್ರೆಯೇ ನಡೆಸಿ ಶಾಲಾಂಗಣದಲ್ಲಿ ಹಬ್ಬದ ಕಳೆಕಟ್ಟಲಾಗಿತ್ತು. ಮಕ್ಕಳ ಕಣ್ಣುಗಳಲ್ಲಿ ಆಶ್ಚರ್ಯದ ಬೆಳ್ನಗೆ. ಹಳೆಯ ವಿದ್ಯಾರ್ಥಿಗಳ ನೆನಪಿನಲ್ಲಿ ಮುದ್ದಾದ ಬಾಲ್ಯ.

ಆರು ದಶಕದ ಹಿಂದಿನ ಇತಿಹಾಸ ಪುನರ್ ಸೃಷ್ಟಿಯಾಗಿದ್ದು, ಮುಖ್ಯಶಿಕ್ಷಕ ಎಸ್.ಎಂ. ಭಟ್ ಅವರ ಪರಿಕಲ್ಪನೆಯಲ್ಲಿ. ಇತಿಹಾಸ ಹೇಳುವುದು ಸುಲಭ, ತೋರಿಸುವುದು ಕಷ್ಟ. ಆದರೆ, ಶಾಲೆಯ ಸಹಶಿಕ್ಷಕರ, ಗ್ರಾಮಸ್ಥರ, ಹಳೇ ವಿದ್ಯಾರ್ಥಿಗಳ, ಶಾಲಾಭಿವೃದ್ಧಿ ಸಮಿತಿಯ ಹಾಗೂ ಸುತ್ತಲಿನ ಶಾಲೆಯ ಶಿಕ್ಷಕರ ಸಹಕಾರದಿಂದ ‘ಹಿಂದೆ ಶಾಲೆ ಹೇಗಿತ್ತು’ ಎನ್ನುವುದನ್ನು, ಇಂದಿನ ಮಕ್ಕಳ ಕಣ್ಣಮುಂದೆ ಜೀವಂತವಾಗಿಸಿದ್ದು ದೊಡ್ಡ ಸಾಧನೆಯೇ. ಅವರೆಲ್ಲರೂ ಒಂದು ತಿಂಗಳ ಕಾಲ ಬೆವರು ಹರಿಸಿ ಶಾಲೆಯ ಆತ್ಮದ ಬುಡದಲ್ಲಿ ‘ಸುವರ್ಣ’ದ ದೀಪ ಬೆಳಗಿಸಿದ್ದರು.

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವವರಿಗೆ ಬೈಲಗದ್ದೆ ಶಾಲೆ... ಇಂದು ಒಂದು ಪ್ರಶ್ನೆ, ಒಂದು ಉತ್ತರ, ಒಂದು ತಾಕೀತು. ‘ಸಂಪನ್ಮೂಲಗಳಿಲ್ಲದಿದ್ದರೂ ಸಂವೇದನೆಗಳ ಶ್ರೀಮಂತಿಕೆ ಸಾಕು; ದೊಡ್ಡ ಕಟ್ಟಡಗಳಿಲ್ಲದಿದ್ದರೂ ದೊಡ್ಡ ವ್ಯಕ್ತಿತ್ವವನ್ನು ರೂಪಿಸಬಹುದು’ ಎಂದು ಈ ಶಾಲೆಯೇ ಮ್ಲಾನವಾಗಿ ನಸುಗುತ್ತ ಹೇಳುತ್ತದೆ. ಗದ್ದೆಯ ಮಣ್ಣಲ್ಲಿ ಕಾಲಿಟ್ಟಾಗ, ಶಿಕ್ಷಣದ ಬೆಲೆ ಮಕ್ಕಳಿಗೆ ಪಾಠವಾಗುತ್ತದೆ. ಅದು ಪುಸ್ತಕಕ್ಕಿಂತ ಗಟ್ಟಿ ಪಾಠ.

ಇಲ್ಲಿ ಅಕ್ಷರ ಕಲಿಕೆಯೆಂದರೆ ಕೇವಲ ಪಠ್ಯವಲ್ಲ. ಮಣ್ಣು, ಬೆವರು, ನೆನಪು ಮತ್ತು ನಂಬಿಕೆಗಳ ಸಂಗಮ. ಕಾಡಿನ ಹಕ್ಕಿಗಳ ಜೋಗುಳದಲ್ಲಿ ಬೆಳೆದ ಜ್ಞಾನ. ಶರಾವತಿಯ ಹರಿವಿನ ತಾಳದಲ್ಲಿ ಲಯವಾಗಿ ಹಾಡಿದ ಪದ. ಅರವತ್ತೂ ವರ್ಷಗಳ ಒಂದು ಉಸಿರಿನ ಕಥೆ.

ಅದ್ದೂರಿಯಾಗಿ ನಡೆದ ಸುವರ್ಣ ಮಹೋತ್ಸವದ ವೇದಿಕೆಯಲ್ಲಿ ಅರವತ್ತು ವರ್ಷಗಳಲ್ಲಿ ಸೇವೆ ಸಲ್ಲಿಸಿದ್ದ ಎಲ್ಲ ಶಿಕ್ಷಕರನ್ನು ಗೌರವಿಸಲಾಗಿತ್ತು. ಹಳೆಯ ಮಕ್ಕಳು ತಮ್ಮ ಗುರುಗಳ ಎದುರು ತಲೆತಗ್ಗಿಸಿ ನಿಂತಿದ್ದರು. ಕಲಾವಿದರು ಹಾಡಿ ಕುಣಿದರು. ಬೈಲಗದ್ದೆಯ ಹೃದಯ ಆ ದಿನ, ‘ನಾನು ಶಾಲೆ, ನಾನು ಮನೆ, ನಾನು ನೆನಪು’ ಎಂದು ಬಡಿದುಕೊಳ್ಳುತ್ತಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು, ಶಿಕ್ಷಕರ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿ, ‘ಸರ್ಕಾರಿ ಶಾಲೆ ಇನ್ನೂ ಜೀವಂತವಾಗಿ ಉಸಿರಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೈಲಗದ್ದೆ ಶಾಲೆ ಒಂದು ಕಟ್ಟಡವಲ್ಲ, ಅದು ಮಣ್ಣಿನ ಮಾತು, ಒಂದು ಸಂದೇಶ, ಜನರ ನೆನಪು. ಊರಿನ ಜೀವ. ಸರ್ಕಾರಿ ಶಾಲೆ ಉಳಿಯಬೇಕಾದರೆ, ಗ್ರಾಮಸ್ಥರ ಕೈ, ಹಳೆಯ ವಿದ್ಯಾರ್ಥಿಗಳ ಹೃದಯ, ಶಿಕ್ಷಕರ ಕನಸು ಒಂದಕ್ಕೊಂದು ಬೆರೆತು ಸಮ್ಮಿಳಿತವಾಗಬೇಕು. ಅದೆಲ್ಲವನ್ನೂ ಈ ಶಾಲೆ ತೋರಿಸಿ ಕೊಟ್ಟಿದೆ. ಈ ಉತ್ಸವ ಕೇವಲ ಸುವರ್ಣದ ಸಂಭ್ರಮವಲ್ಲ, ಮಣ್ಣಿನ ಮಹೋತ್ಸವ... ಸಂವೇದನೆಗಳ ಮಹೋತ್ಸವ.

ಬೈಲಗದ್ದೆ ಶಾಲೆ ಸಣ್ಣದಾಗಿ ಉಸುರುತ್ತಿದೆ...

‘ನಾವು ಗುಡಿಸಲಿನಲ್ಲಿ ಹುಟ್ಟಿದರೂ, ಜಗತ್ತನ್ನು ಬೆಳಗಿಸುವ ಬೆಳಕಾಗಿ ಮಿನುಗಬಹುದು...’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.