ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ | ಬದಲಾದ ಸಾವಿರ ವರ್ಷದ ‘ಹನುಮ’

ಚಂದಾವರದಲ್ಲಿ ಮಾರ್ಚ್‌ 16ರಿಂದ ಪುನರ್ ಪ್ರತಿಷ್ಠೆ: ಲಕ್ಷಾಂತರ ಭಕ್ತರ ನಿರೀಕ್ಷೆ
Published 10 ಮಾರ್ಚ್ 2024, 4:55 IST
Last Updated 10 ಮಾರ್ಚ್ 2024, 4:55 IST
ಅಕ್ಷರ ಗಾತ್ರ

ಕುಮಟಾ: ಹೊನ್ನಾವರ, ಕುಮಟಾ ತಾಲ್ಲೂಕಿನ ಹತ್ತಾರು ಗ್ರಾಮಗಳು ಸೇರಿದಂತೆ ನಾಡಿನ ವಿವಿಧೆಡೆಯ ಭಕ್ತರ ಆರಾಧ್ಯ ದೈವವಾಗಿರುವ ಚಂದಾವರದ ಹನುಮಂತ ದೇವರ ಮೂಲ ಮೂರ್ತಿ ಪುನರ್ ಪ್ರತಿಷ್ಠಾಪನೆಗೆ ಭಕ್ತಗಣ ಕಾತರದಿಂದ ಕಾದಿದೆ.

ಮಾರ್ಚ್ 16 ರಿಂದ 18ರ ವರೆಗೆ ಹನುಮಂತ ದೇವರ ಮೂಲ ಮೂರ್ತಿಯ ಪುನರ್ ಪ್ರತಿಷ್ಠೆ ನಡೆಯಲಿದ್ದು, ಪಂಚಲೋಹದಿಂದ ತಯಾರಿಸಿದ ವಿಗ್ರಹ ದೇವಾಲಯದಲ್ಲಿ ವಿರಾಜಮಾನಗೊಳ್ಳಲಿದೆ. ಹೊಸ ಮೂರ್ತಿಯನ್ನು ತಮಿಳುನಾಡಿನ ಶಿಲ್ಪಿ ರಾಮ ಪ್ರಸಾದ್ ಎನ್ನುವವರು ತಯಾರಿಸಿದ್ದಾರೆ.

ಚಂದಾವರ ಸೀಮೆ ಎಂದೇ ಖ್ಯಾತಿ ಪಡೆದ ಪ್ರದೇಶದ ನೂರಕ್ಕೂ ಹೆಚ್ಚು ಗ್ರಾಮದ ಮೂರು ಲಕ್ಷ ಭಕ್ತರು ಇಲ್ಲಿಯ ಹನುಮಂತ ದೇವರಿಗೆ ನಡೆದುಕೊಳ್ಳುವ ಸಂಪ್ರದಾಯ ಇದೆ. ಪ್ರತೀ ವರ್ಷ ಸೀಮೆಯ ಹಳ್ಳಿಗಳಿಗೆ ದೇವರ ಪಲ್ಲಕ್ಕಿ ಸವಾರಿಗೆ ತೆರಳುತ್ತದೆ. ಆ ಸಮಯದಲ್ಲಿ ಆಯಾ ಊರಿನ ದೇವಸ್ಥಾನ, ಶಾಲೆಗಳಲ್ಲಿ ಪಲ್ಲಕ್ಕಿ ಇಟ್ಟು ಊರಿನವರೇ ಪೂಜೆ ನೆರವೇರಿಸುತ್ತಾರೆ. ಭಕ್ತರು ಕರೆದರೆ ಅವರ ಮನೆಗಳಿಗೂ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.

‘ಸಾವಿರಾರು ವರ್ಷಗಳ ಹಿಂದೆ ಹಾಲಕ್ಕಿ ಒಕ್ಕಲಿಗ ಸಮಾಜದ ವ್ಯಕ್ತಿಯೊಬ್ಬರಿಗೆ ಸಿಕ್ಕ ಹನುಮಂತ ದೇವರ ಮೂಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು ಎನ್ನುವ ಪ್ರತೀತಿ ಇದೆ. ಅಷ್ಟೊಂದು ಸುದೀರ್ಘ ವರ್ಷದ ತರುವಾಯ ಈಗ ಹೊಸ ಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತಿರುವುದರಿಂದ ಸಹಜವಾಗಿ ಭಕ್ತರು ಆ ಕ್ಷಣಕ್ಕೆ ಕಾತರದಿಂದ ಕಾಯುತ್ತಿದ್ದಾರೆ’ ಎಂದು ದೇವಾಲಯದ ಕಲಾವೃದ್ಧಿ ಸಮಿತಿ ಅಧ್ಯಕ್ಷ ಆರ್.ಜಿ.ನಾಯ್ಕ ಹೇಳುತ್ತಾರೆ.

‘ಚಂದಾವರ ಹನುಮಂತ ದೇವರ ಸೀಮೆಯ ಗ್ರಾಮಗಳ ವ್ಯಾಪ್ತಿ ಯಾಣದಿಂದ 70, ಕುಚ್ಚಿನಾಡವರೆಗೆ 30 ಹಳ್ಳಿಗಳು ಸೇರಿ ಒಟ್ಟೂ ನೂರು ಹಳ್ಳಿಗಳಾಗುತ್ತವೆ. ಪ್ರತೀ ವರ್ಷ ತನ್ನ ಸೀಮೆಯ ಗ್ರಾಮಗಳಿಗೆ ಸವಾರಿ ತೆರಳುವ ದೇವರ ಪಲ್ಲಕ್ಕಿ ಎಲ್ಲ ಗ್ರಾಮಗಳನ್ನು ಮುಗಿಸಲು ಎಂಟು ವರ್ಷ ಕಾಲ ಬೇಕು’ ಎಂದೂ ಹೇಳುತ್ತಾರೆ.

ಭೋಜನ ಸಿದ್ಧತೆಗೆ ಹತ್ತು ಎಕರೆ ಮೀಸಲು

‘ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ದೇವರ ದರ್ಶನದ ಸರತಿಗಾಗಿ ಒಂದು ಎಕರೆ ಜಾಗ ಮೀಸಲಿಡಲಾಗಿದೆ. ಐದು ಎಕರೆ ಜಾಗದಲ್ಲಿ ವಾಹನ ನಿಲುಗಡೆ ಏರ್ಪಾಡು ಮಾಡಲಾಗಿದೆ. ಹತ್ತು ಎಕರೆ ಪ್ರದೇಶದಲ್ಲಿ ಪ್ರಸಾದ ಭೋಜನ ತಯಾರಿ ಹಾಗೂ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪಂಡಿತ್‌ ವೆಂಕಟೇಶ ಕುಮಾರ ಅವರಿಂದ ಹಿಂದುಸ್ಥಾನಿ ಸಂಗೀತ ಹಾಗೂ ಪುತ್ತೂರು ನರಸಿಂಹ ನಾಯಕ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ಪ್ರಸಾದ ಭೋಜನ ಸ್ವೀಕರಿಸುವ ನಿರೀಕ್ಷೆ ಇದೆ’ ಎಂದು ದೇವಾಲಯ ಮೊಕ್ತೇಸರ ಮಂಡಳಿ ಅಧ್ಯಕ್ಷ ಎ.ಆರ್.ನಾಯ್ಕ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT