ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡಕ್ಕೆ ಪ್ರವಾಸಿಗರ ದಂಡು

Published 6 ಜನವರಿ 2024, 4:47 IST
Last Updated 6 ಜನವರಿ 2024, 4:47 IST
ಅಕ್ಷರ ಗಾತ್ರ

ಕಾರವಾರ: ಸುಂದರ ಕಡಲತೀರ, ಮನಸೆಳೆಯುವ ಪ್ರಾಕೃತಿಕ ಸಿರಿ, ಭೋರ್ಗರೆಯುತ್ತ ಧುಮ್ಮಿಕ್ಕುವ ಜಲಪಾತ, ಪುರಾಣ ಪ್ರಸಿದ್ಧ ದೇವಾಲಯಗಳು... ಹೀಗೆ ಬಗೆ ಬಗೆಯ ತಾಣಗಳ ಮೂಲಕ ಪ್ರವಾಸಿಗರನ್ನು ಸೆಳೆಯಬಲ್ಲ ಉತ್ತರ ಕನ್ನಡ ಜಿಲ್ಲೆಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 1.15 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

2020, 2021ರ ಅವಧಿಯಲ್ಲಿ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಸರಾಸರಿ 30 ರಿಂದ 35 ಲಕ್ಷದಷ್ಟು ಇತ್ತು. ಕೋವಿಡ್, ನೆರೆ ಹಾವಳಿಯ ಕಾರಣಕ್ಕೆ ಎರಡು ವರ್ಷ ಪ್ರವಾಸೋದ್ಯಮ ಕ್ಷೇತ್ರ ಕಳೆಗುಂದಿತ್ತು. 2020ಕ್ಕೂ ಮುನ್ನ ಪ್ರತಿ ವರ್ಷ ಸರಾಸರಿ 70 ರಿಂದ 80 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದರು. 2022ನೇ ಸಾಲಿನಲ್ಲಿ 1.03 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದು ಹಿಂದಿನ ದಾಖಲೆ ಆಗಿತ್ತು. ಅದಕ್ಕಿಂತಲೂ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ 12 ಲಕ್ಷದಷ್ಟು ಏರಿಕೆಯಾಗಿದೆ ಎಂಬುದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.

ವರ್ಷಾಂತ್ಯ ಆಚರಣೆ, ಕ್ರಿಸ್‍ಮಸ್ ರಜೆಯ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ 13.58 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. 2022ರ ಇದೇ ಅವಧಿಯಲ್ಲಿ ಈ ಸಂಖ್ಯೆ 18 ಲಕ್ಷದಷ್ಟಿತ್ತು. ಆದರೆ, ಪ್ರತಿ ಬಾರಿ ಮಳೆಗಾಲದ ಜುಲೈ, ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತಾದರೂ ಈ ಬಾರಿ ಅದು ಸರಾಸರಿ 2 ರಿಂದ 3 ಲಕ್ಷದಷ್ಟು ಏರಿಕೆಯಾಗಿದೆ.

‘ಕೋವಿಡ್ ಬಳಿಕ ಪ್ರವಾಸಕ್ಕೆ ತೆರಳಲು ಹಿಂಜರಿಯುತ್ತಿದ್ದವರು ಈ ಬಾರಿ ಪ್ರವಾಸ ಚಟುವಟಿಕೆ ಕೈಗೊಂಡಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲು ಒಂದು ಕಾರಣ. ಅಲ್ಲದೆ, ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿದ್ದೂ ಪ್ರವಾಸಿಗರ ಸಂಖ್ಯೆ ಏರಿಕೆಗೆ ಇನ್ನೊಂದು ಕಾರಣ’ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಹೇಳಿದರು.

‘ವಿಶ್ವ ಪ್ರಸಿದ್ಧವಾಗಿರುವ ಗೋಕರ್ಣ, ಮುರ್ಡೇಶ್ವರಕ್ಕೆ ನಿರೀಕ್ಷೆಗೂ ಮೀರಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ದಾಂಡೇಲಿ, ಜೊಯಿಡಾ, ಶಿರಸಿ ಭಾಗದ ತಾಣಗಳು ಭರಪೂರ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಬೇಬಿ ಮೊಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಇಳಿಕೆಯಾದ ವಿದೇಶಿ ಪ್ರವಾಸಿಗರು

ಜಿಲ್ಲೆಗೆ ಭೇಟಿ ನೀಡಿರುವ ದೇಶಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದ್ದು ಒಂದೆಡೆಯಾದರೆ, ಇನ್ನೊಂದೆಡೆ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. 2022ರಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದರು. ಈ ಸಂಖ್ಯೆ ಕಳೆದ ವರ್ಷ 3,602ಕ್ಕೆ ಇಳಿಕೆಯಾಗಿದೆ. ವರ್ಷಾಂತ್ಯದ ಸಂಭ್ರಮಕ್ಕೆ ಗೋಕರ್ಣದಲ್ಲಿ ತುಂಬಿಕೊಳ್ಳುತ್ತಿದ್ದ ವಿದೇಶಿ ಪ್ರವಾಸಿಗರು ಈ ಬಾರಿ ಅಷ್ಟಾಗಿ ಇರಲಿಲ್ಲ.

‘ಇಸ್ರೇಲ್, ರಷ್ಯಾ ಯುದ್ಧಗಳಿಂದ ಕೆಲವು ದೇಶದಲ್ಲಿ ಆರ್ಥಿಕ ಅಸ್ಥಿರತೆ ತಲೆದೋರಿದೆ. ಇದು ವಿದೇಶಿ ಪ್ರವಾಸಿಗರ ಇಳಿಕೆಗೆ ಕಾರಣ’ ಎಂಬುದು ಗೋಕರ್ಣದ ರೆಸಾರ್ಟ್ ಒಂದರ ಮಾಲೀಕರ ಸಮರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT