ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣವಿಲ್ಲದೆ ರಂಗೇರುವ ಗೌಳಿಗರ ಹೋಳಿ

ಬೆರಣಿಯ ಬೂದಿ ಎರಚಿ ಸಂಭ್ರಮ: ಆಕರ್ಷಿಸುವ ಸಾಂಪ್ರದಾಯಿಕ ಧಿರಿಸು
Last Updated 6 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಮುಂಡಗೋಡ: ಕಾಡಿನಲ್ಲಿ ವಾಸಿಸುತ್ತ ಇಂದಿಗೂ ತಮ್ಮ ಕಲೆ ಮತ್ತು ಸಂಸ್ಕೃತಿ ಸಂರಕ್ಷಿಸುತ್ತಿರುವ ದನಗರ ಗೌಳಿ ಸಮುದಾಯದವರು ‘ಹೋಳಿ’ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.

ರಂಗು ರಂಗಿನ ಬಣ್ಣ ಮೈ ಮೇಲೆ ಎರಚುವುದನ್ನು ಸಾಮಾನ್ಯವಾಗಿ ಹೋಳಿ ಹಬ್ಬದಲ್ಲಿ ಕಾಣುತ್ತೇವೆ. ಆದರೆ, ದನಗರ ಗೌಳಿ ಸಮುದಾಯದವರು ಯಾವುದೇ ಬಣ್ಣ ಉಪಯೋಗಿಸದೇ, ಸಾಂಪ್ರದಾಯಿಕ ನೃತ್ಯದಿಂದ ಹಬ್ಬ ಆಚರಿಸುತ್ತಾರೆ. ಸಗಣಿ ಬೆರಣಿಯ ಬೂದಿಯೇ ಇವರ ಪಾಲಿಗೆ ಬಣ್ಣ! ಬಣ್ಣ ಇಲ್ಲದಿದ್ದರೂ ಸಾಂಪ್ರದಾಯಿಕ ವೇಷಭೂಷಣ ದನಗರ ಗೌಳಿಗರ ಹೋಳಿಯ ರಂಗು.

ಬೆರಣಿ ಸುಟ್ಟು ಹಬ್ಬಕ್ಕೆ ಚಾಲನೆ:

‘ಹೋಳಿ ಹುಣ್ಣಿಮೆ ರಾತ್ರಿಯಂದು ವಾಡಾ ಮಧ್ಯದಲ್ಲಿ ‘ಹೊಳೋಬಾ ದೇವ್’ (ಹೋಳಿ ಹಬ್ಬದಂದು ಪೂಜಿಸುವ ಕಲ್ಲು) ಪೂಜೆ ಸಲ್ಲಿಸುತ್ತಾರೆ. ಅಲ್ಲಿರುವ ಪ್ರತಿ ಮನೆಯವರು ಸಗಣಿ ಬೆರಣಿಯನ್ನು ಕಲ್ಲಿನ ಸುತ್ತಲೂ ಇಟ್ಟು ಪೂಜಿಸುತ್ತಾರೆ. ನಂತರ ಬೆರಣಿಯನ್ನು ಸುಟ್ಟು, ಸಾಂಪ್ರದಾಯಿಕ ನೃತ್ಯ ಮಾಡುತ್ತಾರೆ. ಸಿಹಿ ಖಾದ್ಯ ಸವಿಯುತ್ತಾರೆ. ಮಾರನೇಯ ದಿನ ಪ್ರತಿಮನೆಯಿಂದ ಕೊಡದಲ್ಲಿ ನೀರು ತಂದು, ಹೋಳಿ ಕಲ್ಲಿಗೆ ಸುರಿಯುತ್ತಾರೆ. ಬೆಂಕಿ ಆರಿದ ನಂತರ, ಬೂದಿ ಸಂಗ್ರಹಿಸಿ, ಹಣೆಗೆ ಹಚ್ಚಿಕೊಂಡು ರಾಸಾಯನಿಕ ಬಣ್ಣ ಮುಕ್ತ ಹೋಳಿ ಹಬ್ಬಕ್ಕೆ ಚಾಲನೆ ನೀಡುತ್ತಾರೆ’ ಎಂದು ಬ್ಯಾನಳ್ಳಿಯ ಯುವಮುಖಂಡ ಭಾಗು ಕಾತ್ರೋಟ್ ಹೇಳಿದರು.

‘ಗೌಳಿವಾಡಾಗಳಲ್ಲಿ ಸಗಣಿ ಬೆರಣಿ ಸುಟ್ಟು ಹಬ್ಬ ಆರಂಭಗೊಳ್ಳುತ್ತಿದ್ದಂತೆ, ಮಾರನೇ ದಿನದಿಂದ 10-20 ಜನರ ಗುಂಪು ಕಟ್ಟಿಕೊಂಡು, ಹೋಳಿ ವೇಷಭೂಷಣವಾದ ‘ಖೇಳೆ’ ಧರಿಸಿಕೊಂಡು ಇತರ ಗೌಳಿವಾಡಾ ಹಾಗೂ ಪಟ್ಟಣಕ್ಕೆ ಸಂಚರಿಸುತ್ತಾರೆ. ಹೋಳಿ ಹಬ್ಬದ ಹಾಡು ಹಾಗೂ ನೃತ್ಯದ ಮೂಲಕ ಜನರಿಂದ ಕಾಣಿಕೆ ಸ್ವೀಕರಿಸುತ್ತಾರೆ. ಹೀಗೆ ಹುಣ್ಣಿಮೆಯಿಂದ ಐದು ದಿನಗಳ ಕಾಲ ಬೇರೆ ಬೇರೆ ಊರುಗಳಿಗೆ ಸಂಚರಿಸುತ್ತಾರೆ.

ಐದು ದಿನ ಮನೆಯಿಂದ ಹೊರಗಿದ್ದು, ಕೊನೆಯ ದಿನದಂದು ಗ್ರಾಮಕ್ಕೆ ಬರುತ್ತಾರೆ. ದೇಣಿಗೆ ರೂಪದಲ್ಲಿ ಸಂಗ್ರಹವಾಗಿರುವ ಧವಸಧಾನ್ಯ, ಹಣ ಒಟ್ಟುಗೂಡಿಸಿ ಕುರಿ, ಕೋಳಿ ಬಲಿಕೊಟ್ಟು ಪ್ರಸಾದ ಬಡಿಸುತ್ತಾರೆ’ ಎಂದು ದನಗರ ಗೌಳಿ ಸಮಾಜದ ಮುಖಂಡ ಸಿದ್ಧು ಥೋರತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT