ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಸಂಪರ್ಕ ಸೇತುವೆ ಕಾಮಗಾರಿ ಆರಂಭ ಯಾವಾಗ?

Published 23 ಮೇ 2024, 6:04 IST
Last Updated 23 ಮೇ 2024, 6:04 IST
ಅಕ್ಷರ ಗಾತ್ರ

ಶಿರಸಿ: ಹೊಸ ಸೇತುವೆ ಕಾಮಗಾರಿ ಮಂಜೂರಾಗಿ ನಾಲ್ಕು ವರ್ಷಗಳು ಕಳೇದರೂ ತಾಲ್ಲೂಕಿನ ಬನವಾಸಿ ಹೋಬಳಿಯ ಅಜ್ಜರಣಿ, ಮುತ್ತುಗುಣಿ ಗ್ರಾಮಗಳ ಸಂಪರ್ಕಕ್ಕೆ ಶಾಶ್ವತ ಸೇತುವೆ ನಿರ್ಮಾಣವಾಗಿಲ್ಲ. ಪ್ರಸ್ತುತ ಮಳೆಗಾಲ ಸಮೀಪಿಸುತ್ತಿದ್ದು, ಮತ್ತೆ ಗ್ರಾಮಸ್ಥರಿಗೆ ಸಂಪರ್ಕ ಕಡಿತದ ಭಯ ಆವರಿಸಿದೆ.

ಬನವಾಸಿಯಿಂದ ಅನತಿ ದೂರದಲ್ಲಿರುವ ಅಜ್ಜರಣಿ ಸುತ್ತಮುತ್ತ ನೂರಾರು ಮನೆಗಳಿವೆ. ಇಲ್ಲಿನ ಜನರು ಎಲ್ಲ ವಹಿವಾಟು, ದಿನಸಿ, ಆಸ್ಪತ್ರೆ, ಬಸ್ ನಿಲ್ದಾಣ ಎಲ್ಲದಕ್ಕೂ ಬನವಾಸಿಯನ್ನೇ ಅವಲಂಬಿಸಿದ್ದಾರೆ. ಈ ಊರಿನಿಂದ ಬನವಾಸಿಗೆ ಬರುವ ಮಧ್ಯೆ ಚಿಕ್ಕದೊಂದು ಸೇತುವೆಯಿದೆ. ಸಮೀಪದ ವರದಾ ನದಿಗೆ ಪ್ರವಾಹ ಬಂದರೆ ಈ ಸೇತುವೆ ಮುಳುಗುತ್ತದೆ‌. ಸುತ್ತಲಿನ ಪ್ರದೇಶಗಳ ಕೃಷಿ ಭೂಮಿ ಜಲಾವೃತವಾಗುತ್ತದೆ. ಇದರಿಂದ ಬನವಾಸಿ ಮತ್ತು ಅಜ್ಜರಣಿ ನಡುವಿನ ಸಂಪರ್ಕ ಕೊಂಡಿ ಕಳಚುತ್ತದೆ. ಪ್ರವಾಹ ಇಳಿಮುಖವಾಗದಿದ್ದರೆ ತಿಂಗಳುಗಟ್ಟಲೇ ರಸ್ತೆಯ ಮೇಲೆ ನಾಲ್ಕೈದು ಅಡಿ ನೀರು ನಿಂತಿರುತ್ತದೆ. ಹೀಗಾಗಿ
ತಗ್ಗಿನಲ್ಲಿರುವ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ಜತೆಗೆ ಎತ್ತರಿಸಬೇಕು ಎಂಬುದು ಇಲ್ಲಿನ ಜನರ ದಶಕಗಳ ಹಿಂದಿನ ಬೇಡಿಕೆಯಾಗಿತ್ತು.

ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅಂದಿನ ಬಿಜೆಪಿ ಸರ್ಕಾರ ಸ್ಪಂದಿಸಿ ಹೊಸ ಸೇತುವೆ ನಿರ್ವಿುಸಲು 2018ರಲ್ಲೇ ಆದೇಶ ನೀಡಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಈ ಸೇತುವೆ ಕಾಮಗಾರಿ ನಡೆಸುವಂತೆ ಸೂಚಿಸುವ ಜತೆ ₹1.8 ಕೋಟಿ ಮೊತ್ತಕ್ಕೆ ಗುತ್ತಿಗೆ‌ ನೀಡಲಾಗಿತ್ತು. ಆದರೆ ಸೇತುವೆ ಇನ್ನಷ್ಟು ಭದ್ರಗೊಳಿಸುವ ಸಲುವಾಗಿ ಹೊಸದಾಗಿ ಮತ್ತೆ ನೀಲನಕ್ಷೆ ಸಿದ್ಧಪಡಿಸಿ ಶಾಸಕ ಶಿವರಾಮ ಹೆಬ್ಬಾರ್ ₹3 ಕೋಟಿ ಮಂಜೂರಾತಿ ಕೂಡ ಪಡೆದಿದ್ದರು. ಆದರೆ ವರ್ಷಗಳು ಉರುಳಿದರೂ ಕಾಮಗಾರಿ ಮಾತ್ರ ನಡೆದಿಲ್ಲ.

‘ಗುತ್ತಿಗೆದಾರರು ಹಳೆಯ ಸೇತುವೆಯನ್ನು ಬಹುತೇಕ ಕೆಡವಿ ಹಾಕಿ ಕಾಮಗಾರಿ ಚಾಲನೆಗೆ ಶುರು ಮಾಡಿದ ಕೆಲವೇ ದಿನಗಳಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಜಾಗದ ಪರಿಹಾರ ವಿಚಾರವಾಗಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದ ಕಾರಣ ಕಾಮಗಾರಿ ಸ್ಥಗಿತವಾಗಿತ್ತು. ಪ್ರಸ್ತುತ ಪರಿಹಾರ ವಿತರಿಸಿ ಆಗಿದ್ದರೂ ಇಂದಿಗೂ ಕಾಮಗಾರಿ ಮಾತ್ರ ನಿಂತ ನೀರಾಗಿದೆ’ ಎಂಬುದು ಗ್ರಾಮಸ್ಥರ ದೂರಾಗಿದೆ.

‘ವರದೆಗೆ ನೆರೆ ಬಂದು ಸೇತುವೆ ಮುಳುಗಿದರೆ, ಅಜ್ಜರಣಿ, ಮತ್ತಗುಣಿ, ಕಂತ್ರಾಜಿ, ಗುಡ್ಡಾಪುರ ಭಾಗದ ಸಾವಿರಾರು ಜನರಿಗೆ ತೊಂದರೆಯಾಗುತ್ತದೆ. ಅರ್ಧ ಕಿ.ಮೀ ದೂರದ ಬನವಾಸಿ ತಲುಪಲು ಎಂಟು ಕಿ.ಮೀ. ಸುತ್ತು ಹಾಕಿ, ಗುಡ್ನಾಪುರ ಮಾರ್ಗವಾಗಿ ಬರಬೇಕಾಗುತ್ತದೆ. ಶಾಲೆಗೆ ಹೋಗುವ ಮಕ್ಕಳು, ನಿತ್ಯ ಕೆಲಸಕ್ಕೆ ಹೋಗುವವರಿಗೆ ತುಂಬಾ ತೊಂದರೆಯಾಗುತ್ತದೆ’ ಎಂದು ಸ್ಥಳೀಯ ರಾಜೇಂದ್ರ ಗೌಡ ಸಮಸ್ಯೆ ಬಿಚ್ಚಿಟ್ಟಿದ್ದಾರೆ.

ಪ್ರವಾಹ ಬಂದರೆ ಮುಳುಗಡೆ ಆಗುವ ಸೇತುವೆ ಒಂದೆಡೆ ಆದರೆ ಅಪಘಾತಕ್ಕೆ ದಾರಿ ಮಾಡಿ ಕೊಡುವ ಕಿರಿದಾದ ರಸ್ತೆ ಮತ್ತೊಂದು ಕಡೆಯಾಗಿದೆ. ವರದಾ ನದಿಯ ಪ್ರವಾಹಕ್ಕೆ ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ
ಇಂದ್ರೇಶ ನಾಯ್ಕ ಗ್ರಾಮಸ್ಥ
ತಾಂತ್ರಿಕ ಕಾರಣದಿಂದ ಅಜ್ಜರಣಿ ಸೇತುವೆ ಕಾಮಗಾರಿ ಆರಂಭವಾಗಿರಲಿಲ್ಲ. ಪ್ರಸ್ತುತ ಇರುವ ಸಮಸ್ಯೆಗಳು ನಿವಾರಣೆಯಾಗಿದ್ದು ಶೀಘ್ರದಲ್ಲಿ ಸೇತುವೆ ಕಾರ್ಯ ನಡೆಯಲಿದೆ
ಶಿವರಾಮ ಹೆಬ್ಬಾರ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT