ಶನಿವಾರ, ಅಕ್ಟೋಬರ್ 1, 2022
20 °C
ವಾಹನ ವ್ಯವಸ್ಥೆಯೂ ಇಲ್ಲ, ವಿದ್ಯುತ್‌ ದೀಪಗಳೂ ಇಲ್ಲ, ಸುರಕ್ಷತೆಯೂ ಇಲ್ಲ

ವಿಜಯನಗರ: ಭಯದಲ್ಲೇ ಹಂಪಿ ಸ್ಮಾರಕಗಳ ವೀಕ್ಷಣೆ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಂಪಿ ಸ್ಮಾರಕಗಳಿಗೆ ತ್ರಿವರ್ಣ ಧ್ವಜದ ಬಣ್ಣಗಳನ್ನು ಹೋಲುವ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಆದರೆ, ಪ್ರವಾಸಿಗರು ಸ್ಮಾರಕಗಳನ್ನು ಆತಂಕ, ಭಯದಲ್ಲೇ ನೋಡುವ ಪರಿಸ್ಥಿತಿ ಬಂದೊದಗಿದೆ!

ಹಂಪಿ ಸಂರಕ್ಷಿತ ಸ್ಮಾರಕಗಳಾಗಿರುವ ವಿಜಯ ವಿಠಲ ದೇವಸ್ಥಾನ, ಸಪ್ತಸ್ವರ ಮಂಟಪ, ಕಲ್ಲಿನ ರಥ ಹಾಗೂ ಅಲ್ಲಿರುವ ಮಂಟಪಗಳಿಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ವಿದ್ಯುತ್‌ ದೀಪಗಳಿಂದ ಅಂದಗಾಣಿಸಲಾಗಿದೆ. ಇದನ್ನು ಕಣ್ತುಂಬಿಕೊಳ್ಳಲೆಂದೆ ವಿವಿಧ ಕಡೆಗಳಿಂದ ಜನ ಭೇಟಿ ಕೊಡುತ್ತಿದ್ದಾರೆ. ಆದರೆ, ಕನಿಷ್ಠ ಸೌಕರ್ಯ ಕಲ್ಪಿಸದೇ ಇರುವುದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.

ವಿಜಯ ವಿಠಲ ದೇವಸ್ಥಾನವೂ ಗೆಜ್ಜಲ ಮಂಟಪದಿಂದ ಒಂದು ಕಿ.ಮೀ ದೂರದಲ್ಲಿದೆ. ಈ ಪ್ರದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಚಾಲಿತ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಹಂಪಿವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಪ್ರವಾಸಿಗರಿಗೆ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆಯಿದೆ. ಆದರೆ, ಅವು ಬೆಳಿಗ್ಗೆ 9ರಿಂದ ಸಂಜೆ 6ರ ವರೆಗಷ್ಟೇ ಸಂಚರಿಸುತ್ತವೆ.

ಆದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾತ್ರಿ 9ಗಂಟೆಯ ವರೆಗೆ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಸ್ಮಾರಕಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಆದರೆ, ಸಂಜೆ 6ರ ನಂತರ ಬ್ಯಾಟರಿಚಾಲಿತ ವಾಹನಗಳು ಇಲ್ಲದೇ ಇರುವುದರಿಂದ ಜನರಿಗೆ ಸಮಸ್ಯೆ ಎದುರಾಗುತ್ತಿದೆ. ಜನರು ಸ್ವಂತ ವಾಹನಗಳನ್ನು ಕೂಡ ಕೊಂಡೊಯ್ಯುವಂತಿಲ್ಲ. ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರಿಗೆ ಅಷ್ಟು ದೂರ ಕ್ರಮಿಸಲು ಸಾಧ್ಯವಾಗುತ್ತಿಲ್ಲ.

ಯುವಕರು, ಮಧ್ಯ ವಯಸ್ಕರು ಕಾಲ್ನಡಿಗೆಯಲ್ಲಿ ಹೋಗಿ ಬರಬಹುದು. ಆದರೆ, ಸೂರ್ಯ ಮುಳುಗಿದ ನಂತರ ಹಂಪಿ ಪರಿಸರದಲ್ಲಿ ಚಿರತೆ, ಕರಡಿ ಸೇರಿದಂತೆ ಇತರೆ ಪ್ರಾಣಿ, ಸರೀಸೃಪಗಳು ಮುಕ್ತವಾಗಿ ಓಡಾಡುತ್ತವೆ. ಈ ಭಯದಿಂದ ಜನ ಸ್ಮಾರಕಗಳನ್ನು ನೋಡದೇ ಹಿಂತಿರುಗುತ್ತಿದ್ದಾರೆ. ಕೆಲವರು ಏನೇ ಆಗಲಿ ನೋಡಿಕೊಂಡೇ ಹೋಗಬೇಕೆಂದು ಆತಂಕ, ಭಯದಲ್ಲಿ ಹೋಗಿ ಬರುತ್ತಿದ್ದಾರೆ. ಗುಂಪುಗಳಲ್ಲಿ ಹೋಗುತ್ತಿರುವವರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿಲ್ಲ. ಏಕಾಂಗಿ, ಒಂದಿಬ್ಬರೇ ಇದ್ದರೆ ಎರಡೆರಡು ಸಲ ಯೋಚಿಸಿ ತೀರ್ಮಾನಿಸುವಂತಾಗಿದೆ.

‘ಹಂಪಿ ಸ್ಮಾರಕಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿರುವುದನ್ನು ‘ಪ್ರಜಾವಾಣಿ’ಯಲ್ಲಿ ಓದಿದ್ದೆ. ಹಾಗಾಗಿ ಕುಟುಂಬ ಸದಸ್ಯರೊಡನೆ ಸಂಜೆ ಏಳು ಗಂಟೆಗೆ ಕಾರಿನಲ್ಲಿ ಹೋಗಿದ್ದೆ. ಆದರೆ, ಕಾರು ಬಿಡಲಿಲ್ಲ. ಬ್ಯಾಟರಿ ವಾಹನಗಳೂ ಸಂಚರಿಸಲಿಲ್ಲ. ನನ್ನ ಮಾವನವರಿಗೆ ಬಹಳ ವಯಸ್ಸಾಗಿದ್ದು, ಅವರಿಗೆ ನಡೆಯಲು ಆಗುವುದಿಲ್ಲ. ಮಕ್ಕಳು ಅಷ್ಟು ದೂರ ಕ್ರಮಿಸಲಾರರು. ಎಷ್ಟೇ ಮನವಿ ಮಾಡಿದರೂ ಕಾರು ಬಿಡಲಿಲ್ಲ. ನಾನು ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಏನನ್ನೂ ನೋಡದೇ ವಾಪಸ್‌ ಬಂದೆ’ ಎಂದು ಕಮಲಾಪುರದ ಗೃಹಿಣಿ ನಾಗವೇಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯ ವಿಠಲಕ್ಕೆ ಹೋಗುವ ಮಾರ್ಗದಲ್ಲಿ ಎಲ್ಲೂ ಕೂಡ ವಿದ್ಯುತ್‌ ದೀಪಗಳ ವ್ಯವಸ್ಥೆ ಇಲ್ಲ. ಕತ್ತಲು ಆವರಿಸಿಕೊಂಡಿರುತ್ತದೆ. ಅಂಥದ್ದರಲ್ಲಿ ಯಾರು ಕೂಡ ಹೋಗಿ ಬರಲು ಹೇಗೆ ಸಾಧ್ಯ. ಕನಿಷ್ಠ ಬ್ಯಾಟರಿ ವಾಹನಗಳಿಗೆ ವ್ಯವಸ್ಥೆ ಮಾಡಿದ್ದರೆ ಎಲ್ಲರಿಗೂ ಅನುಕೂಲವಾಗಿರುತ್ತಿತ್ತು. ಪ್ರಾಧಿಕಾರ ಎಷ್ಟೇ ಉತ್ತಮ ಕೆಲಸ ಮಾಡಿದರೂ ಅದರ ಪ್ರಯೋಜನ ಜನರಿಗೆ ಸಿಗಬೇಕಲ್ಲ’ ಎಂದು ವಿಷಾದಿಸಿದರು.

*
ಪ್ರವಾಸಿಗರಿಗೆ ತೊಂದರೆ ಆಗದಂತೆ ರಾತ್ರಿ ಒಂಬತ್ತು ಗಂಟೆಯ ವರೆಗೆ ಬ್ಯಾಟರಿಚಾಲಿತ ವಾಹನಗಳನ್ನು ಓಡಿಸಲು ಕ್ರಮ ಜರುಗಿಸಲಾಗುವುದು
-ಸಿದ್ದರಾಮೇಶ್ವರ, ಆಯುಕ್ತ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

*
ವಿಜಯ ವಿಠಲ ಪರಿಸರದಲ್ಲಿ ಕತ್ತಲಾಗುತ್ತಿದ್ದಂತೆ ಚಿರತೆ, ಕರಡಿಗಳು ಓಡಾಡುತ್ತವೆ. ರಾತ್ರಿ ವಾಹನ ವ್ಯವಸ್ಥೆ ಇಲ್ಲದೇ ಸ್ಮಾರಕಗಳನ್ನು ನೋಡುವುದು ಹೇಗೆ? -ವಿವೇಕ್‌,ಪ್ರವಾಸಿಗ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು