ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಪರ ಯೋಜನೆಗಳಿಗೆ ಮರುಜೀವ: ರೂಪೇಶ್

ಹೊಸಪೇಟೆ ನಗರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ
Published : 16 ಸೆಪ್ಟೆಂಬರ್ 2024, 15:43 IST
Last Updated : 16 ಸೆಪ್ಟೆಂಬರ್ 2024, 15:43 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ‘ಮಾಜಿ ಸಚಿವ ಆನಂದ್ ಸಿಂಗ್ ಅವರು ಹೊಸಪೇಟೆ ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿ ಕಾಮಗಾರಿ ಆರಂಭಿಸಿದ್ದರು. ಅವು ನಿಂತಿವೆ. ಪರಿಶೀಲನೆ ನಡೆಸಿ ಚಾಲನೆ ನೀಡಲಾಗುವುದು’ ಎಂದು ನಗರಸಭೆ ನೂತನ ಅಧ್ಯಕ್ಷ ಎನ್‌.ರೂಪೇಶ್‌ ಕುಮಾರ್ ಹೇಳಿದರು.

ಸೋಮವಾರ ಕಚೇರಿಯಲ್ಲಿ ಹೋಮ ನೆರವೇರಿಸಿ, ಉಪಾಧ್ಯಕ್ಷ ರಮೇಶ್‌ ಗುಪ್ತ ಜತೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಾತ್ರಿ ನಿವಾಸ, ಇ–ಶೌಚಾಲಯ, ನೀರಿನ ಟ್ಯಾಂಕ್‌ ಸಹಿತ ಹಲವು ಉಪಯುಕ್ತ ಯೋಜನೆಗಳನ್ನು ಆನಂದ್ ಸಿಂಗ್ ರೂಪಿಸಿದ್ದರು. ನೀರಿನ ಟ್ಯಾಂಕ್‌ಗಳು ನಿರ್ಮಾಣವಾಗುತ್ತಿವೆ. ಉಳಿದ ಯೋಜನೆಗಳಲ್ಲವಕ್ಕೂ ಮರುಜೀವ ಸಿಗಲಿದೆ. ಪ್ರವಾಸಿಗರಿಗೆ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು’ ಎಂದರು.

‘ಓಣಿಗಳಲ್ಲಿರುವ ಶೌಚಾಲಯಗಳನ್ನು ಶಾಶ್ವತವಾಗಿ ಮುಚ್ಚಲಾಗುವುದು. ಸ್ವಚ್ಛತೆ ಕಾಪಾಡುವುದು ಕಷ್ಟವಾಗಿದ್ದು, ಈ ನಿರ್ಧಾರಕ್ಕೆ ಕಾರಣ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಜನರಿಗೆ ಉತ್ತೇಜನ ನೀಡಲಾಗುವುದು. ಇದಕ್ಕೆ ಹಣದ ಕೊರತೆ ಇಲ್ಲ’ ಎಂದರು.

‘ನಗರದೊಳಗಿನ ಸರ್ಕಾರಿ ನಿವೇಶನಗಳನ್ನು ಒತ್ತುವರಿಯಿಂದ ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಉಪಾಧ್ಯಕ್ಷರು ಈ ಹಿಂದೆ ಸರ್ವೆ ವಿಭಾಗದಲ್ಲಿ ಕೆಲಸ ಮಾಡಿದವರು, ಅವರಿಗೆ ಅದರ ಆಳ ಅಗಲ ಗೊತ್ತಿದೆ. ತೆರಿಗೆ ವಸೂಲಾತಿಗಾಗಿ ಮಂಗಳವಾರವೇ ಕಂದಾಯ ಅಧಿಕಾರಿಗಳ ಸಭೆ ಕರೆಯಲಾಗಿದೆ. 15 ಸಾವಿರ ವ್ಯಾಪಾರ ಪರವಾನಗಿ ಪೈಕಿ 3 ಸಾವಿರ ವ್ಯಾಪಾರ ಪರವಾನಗಿ ಮಾತ್ರ ಇದೆ. ಜಿಎಸ್‌ಟಿ ನೋಂದಾಯಿತ ವ್ಯಾಪಾರ ಮಳಿಗೆಗಳಿಗೆ ಪರವಾನಗಿ ನವೀಕರಣ ಅಗತ್ಯ ಇಲ್ಲ. ಉಳಿದವುಗಳನ್ನು ಈ ವ್ಯಾಪ್ತಿಗೆ ತರಲು ಪ್ರಯತ್ನ ತೀವ್ರಗೊಳಿಸಲಾಗುವುದು. ಹೀಗಾದಾಗ ನಗರದ ಅಭಿವೃದ್ಧಿಗೆ ಸ್ವಂತ ಸಂಪನ್ಮೂಲವೇ ದೊಡ್ಡ ಪ್ರಮಾಣದಲ್ಲಿ ಸಿಗುವಂತಾಗಲಿದೆ’ ಎಂದು ಹೇಳಿದರು.

‘ನಗರಕ್ಕೆ 24 ಗಂಟೆಯೂ ಕುಡಿಯುವ ನೀರು ಪೂರೈಸುವುದು ಮತ್ತು ಒಳಚರಂಡಿ ಸಮಸ್ಯೆ ಬಗೆಹರಿಸುವುದು ದೊಡ್ಡ ಸವಾಲಿನ ಕೆಲಸ. ಇದಕ್ಕಾಗಿ ಗಂಭೀರ ಪ್ರಯತ್ನ ನಡೆದಿದೆ. ಘನತ್ಯಾಜ್ಯ ವಿಲೇವಾರಿಗಾಗಿ ₹4 ಕೋಟಿ ಇದೆ. ಅದರಲ್ಲಿ ಆಧುನಿಕ ಯಂತ್ರ ಬಳಸಿ ಒಳಚರಂಡಿ ನೀರನ್ನು 88 ಮುದ್ಲಾಪುರ ಬಳಿ ಶುದ್ಧೀಕರಿಸಿ, ಆ ನೀರನ್ನು ಕೈಗಾರಿಕೆಗಳಿಗೆ ಬಳಸುವುದಕ್ಕೆ ಅವಕಾಶ ನೀಡಲಾಗುವುದು. ಒಳಚರಂಡಿ ನೀರು ಚರಂಡಿಗೆ ಸೇರುತ್ತಿದ್ದು, ಅದನ್ನು ಸಹ ತಪ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಬೀದಿ ನಾಯಿ ಹಾವಳಿ ತಡೆಯಲು 5 ಎಕರೆ ಪ್ರದೇಶದಲ್ಲಿ ನಾಯಿ ಪಾಲನಾ ಕೇಂದ್ರ ಸ್ಥಾಪಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕಸ ವಿಲೇವಾರಿಗಾಗಿ ಗುರುತಿಸಲಾದ 54 ಎಕರೆ ಸ್ಥಳ ಇದ್ದು, ಅದರಲ್ಲೇ 5 ಎಕರೆಯನ್ನು ಈ ಉದ್ದೇಶಕ್ಕೆ ಬಳಸಲಾಗುವುದು’ ಎಂದರು.

‘ಗಣೇಶ ಹಬ್ಬದ ಪ್ರಯುಕ್ತ ತರಾತುರಿಯಲ್ಲಿ ಸಿಮೆಂಟ್‌ ಸುರಿದು ರಸ್ತೆ ಗುಂಡಿ ಮುಚ್ಚಲಾಗಿತ್ತು. ಅದು ಅವೈಜ್ಞಾನಿಕವಾಗಿದೆ. ಮತ್ತೆ ವೈಜ್ಞಾನಿಕವಾಗಿ ಗುಂಡಿ ಮುಚ್ಚುವ ಕೆಲಸ ನಡೆಯಲಿದೆ’ ಎಂದರು.

ಬಾಲಕಿಯರ ಪ್ರೌಢಶಾಲೆ ಇನ್ನು ವಾಣಿಜ್ಯ ಮಳಿಗೆ

‘ನಗರದ ಕೇಂದ್ರ ಭಾಗದಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಇದ್ದ ಸ್ಥಳದಲ್ಲಿ ನಗರಸಭೆ ಕಚೇರಿ ಸಮೀಪದ ಹಳೆ ಪಿಡಬ್ಲ್ಯುಡಿ ಸ್ಥಳದಲ್ಲಿ ಸುಸಜ್ಜಿತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು. ಕೆಲವು ವಾಹನ ನಿಲುಗಡೆ ಸ್ಥಳಗಳ ಕುರಿತಾದ ವಿವಾದವನ್ನೂ ಶೀಘ್ರ ಬಗೆಹರಿಸಿಕೊಳ್ಳುವ ವಿಶ್ವಾಸ ಇದೆ’ ಎಂದು ರೂಪೇಶ್‌ ಕುಮಾರ್ ಹೇಳಿದರು.

ನಗರಸಭೆಯಲ್ಲಿ ಹೋಮದ ಧೂಮ

ಈದ್ ಮಿಲಾದ್ ರಜಾ ದಿನವಾಗಿದ್ದರೂ ನಗರಸಭೆಯಲ್ಲಿ ಭರ್ಜರಿ ಹೋಮದೊಂದಿಗೇ ಅಧ್ಯಕ್ಷ ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡರು. ‘ಮಂಗಳವಾರದಿಂದ ಪಿತೃಪಕ್ಷ ಆರಂಭವಾಗುತ್ತದೆ. ಇಂದೇ ಉತ್ತಮ ದಿನ ಎಂಬ ಕಾರಣಕ್ಕೆ ಹಾಗೂ ನಗರದ ಜನತೆಗೆ ಒಳಿತಾಗಲಿ ಎಂದು ಹೋಮ ಮಾಡಿಸಿದ್ದೇವೆ’ ಎಂದು ಅಧ್ಯಕ್ಷ ರೂಪೇಶ್‌ ಹೇಳಿದರು. ನಗರಸಭೆಯ ಪ್ರವೇಶ ದ್ವಾರ ತೋರಣಗಳಿಂದ ಕಂಗೊಳಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT