ಸೋಮವಾರ, ಸೆಪ್ಟೆಂಬರ್ 27, 2021
22 °C
3,500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ; ₹20 ಲಕ್ಷ ಅಂದಾಜು ವೆಚ್ಚ

ವಿಜಯನಗರ | ಹೊಸಪೇಟೆಗೆ ಬರಲಿದೆ ಯೋಗ ಪಾರ್ಕ್‌

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರದಲ್ಲಿ ಈಗಾಗಲೇ ಚಿಣ್ಣರು, ವಯಸ್ಕರಿಗಾಗಿ ಪ್ರತ್ಯೇಕ ಉದ್ಯಾನಗಳಿವೆ. ಅದಕ್ಕೆ ಈಗ ಹೊಸ ಸೇರ್ಪಡೆಯಾಗಲಿದೆ ಯೋಗ ಪಾರ್ಕ್‌.

ದಿನೇ ದಿನೇ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿರುವ ಬೆನ್ನಲ್ಲೇ ನಗರದಲ್ಲಿ ಅದಕ್ಕಾಗಿಯೇ ಪ್ರತ್ಯೇಕ ಉದ್ಯಾನ ನಿರ್ಮಿಸಲು ಇಲ್ಲಿನ ನಗರಸಭೆ ಮುಂದಾಗಿದೆ. ಅದಕ್ಕಾಗಿ ಇಲ್ಲಿನ ಎಂ.ಜೆ. ನಗರದಲ್ಲಿ 3,500 ಅಡಿ ಜಾಗ ಕೂಡ ಗುರುತಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ ₹20 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ.

ಸಂಪೂರ್ಣ ಹೊಸ ಪರಿಕಲ್ಪನೆಯೊಂದಿಗೆ ತಲೆ ಎತ್ತಲಿರುವ ಉದ್ಯಾನದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌, ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್ ಪಿ. ಶ್ರವಣ್‌ ಕೂಡ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ. ಉದ್ಯಾನ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ಕೊಡುವ ಭರವಸೆ ಕೊಟ್ಟಿದ್ದಾರೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಎಂ.ಜೆ. ನಗರದ ಮೊದಲನೇ ಮುಖ್ಯರಸ್ತೆಯಲ್ಲಿ 3,500 ಚದರ ಅಡಿ ವಿಸ್ತೀರ್ಣದ ಜಾಗ ನಗರಸಭೆಗೆ ಸೇರಿದೆ. 1987–88ರಲ್ಲಿ ಲೇಔಟ್‌ ನಿರ್ಮಾಣವಾದಾಗ ಉದ್ಯಾನಕ್ಕಾಗಿ ಈ ಜಾಗ ಮೀಸಲಿಡಲಾಗಿತ್ತು. ಆದರೆ, ಇದುವರೆಗೆ ಅಲ್ಲಿ ಉದ್ಯಾನ ತಲೆ ಎತ್ತಿರಲಿಲ್ಲ. ಈ ವಾರ್ಡಿನ ಮಾಜಿ ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್‌ ಅವರು ಅಲ್ಲಿ ಯೋಗ ಪಾರ್ಕ್‌ ನಿರ್ಮಿಸಬೇಕೆಂದು ಈ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಿದ್ದರು. ಬಳಿಕ ನಗರಸಭೆ ಅವಧಿ ಮುಕ್ತಾಯಗೊಂಡಿದ್ದರಿಂದ ವಿಷಯ ನನೆಗುದಿಗೆ ಬಿದ್ದಿತು. ಆದರೆ, ಕಾಮತ್‌ ಅವರು ಸತತವಾಗಿ ನಗರಸಭೆ ಅಧಿಕಾರಿಗಳನ್ನು ಈ ವಿಷಯವಾಗಿ ನೆನಪಿಸುತ್ತಲೇ ಬಂದಿದ್ದಾರೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ.

‘ಎಂ.ಜೆ. ನಗರದಲ್ಲಿ ಈಗಾಗಲೇ ನಾಲ್ಕು ಉದ್ಯಾನಗಳನ್ನು ನಗರಸಭೆ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿದೆ. ಮೊದಲನೇ ಮುಖ್ಯರಸ್ತೆಯಲ್ಲಿ ಉದ್ಯಾನಕ್ಕೆ ಮೀಸಲಾದ ಜಾಗದಲ್ಲಿ ಯೋಗ ಪಾರ್ಕ್ ನಿರ್ಮಿಸಿದರೆ ಯೋಗ ಮಾಡುವವರಿಗೆ ಬಹಳ ಅನುಕೂಲವಾಗುತ್ತದೆ. ಈ ದೃಷ್ಟಿಯಿಂದ ನಾನು ಮೊದಲಿನಿಂದಲೂ ಅದರ ಪರವಾಗಿ ಧ್ವನಿ ಎತ್ತುತ್ತ ಬಂದಿದ್ದೇನೆ. ಈಗ ನಗರಸಭೆ ವಿಶೇಷ ಕಾಳಜಿ ವಹಿಸಿ, ಅದರ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ಸಂಗತಿ’ ಎಂದು ಚಂದ್ರಕಾಂತ ಕಾಮತ್‌ ಪ್ರತಿಕ್ರಿಯಿಸಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಯೋಗ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉದ್ಯಾನದಲ್ಲಿ ಎಲ್ಲ ತರಹದ ಜನ ಬರುತ್ತಾರೆ. ಯೋಗ ಮಾಡುವವರಿಗೆ ಪ್ರಶಾಂತ ವಾತಾವರಣ ಇರಬೇಕಾಗುತ್ತದೆ. ಸಾಮಾನ್ಯ ಉದ್ಯಾನಗಳಲ್ಲಿ ಅದು ಸಾಧ್ಯವಾಗುವುದಿಲ್ಲ. ಯೋಗ ಮಾಡುವವರಿಗೆ ಪ್ರತ್ಯೇಕ ಉದ್ಯಾನ ನಿರ್ಮಾಣವಾದರೆ ಅವರಿಗೆ ಅನುಕೂಲವಾಗುತ್ತದೆ. ವಿಶೇಷವಾಗಿ ಯುವತಿಯರು, ಮಹಿಳೆಯರು ಯಾವುದೇ ರೀತಿಯ ಅಳುಕು ಇಲ್ಲದೆ ಯೋಗಾಭ್ಯಾಸ ಮಾಡಬಹುದು. ಸ್ಥಳೀಯರಿಂದಲೂ ಇದಕ್ಕೆ ಬಹುವರ್ಷಗಳಿಂದ ಬೇಡಿಕೆ ಇದೆ’ ಎಂದು ತಿಳಿಸಿದ್ದಾರೆ.

‘ಉದ್ಯಾನದಲ್ಲಿ ಸಾಮಾನ್ಯ ಗಿಡ ಮರಗಳನ್ನು ಬೆಳೆಸದೇ ಹೆಚ್ಚಿನ ಆಮ್ಲಜನಕ ಹೊರಸೂಸುವ ಸಸಿಗಳನ್ನು ಬೆಳೆಸಿ, ಪೋಷಿಸಬೇಕು. ಸುತ್ತಮುತ್ತಲಿನ ವಾತಾವರಣದಲ್ಲಿ ಗಾಳಿ ಶುದ್ಧವಾಗುತ್ತದೆ. ವಿಶೇಷ ಅಧಿಕಾರಿ ಕೂಡ ಇದರ ಬಗ್ಗೆ ಆಸಕ್ತಿ ತೋರಿಸುವುದರಿಂದ ಗುಣಮಟ್ಟದ ಕೆಲಸ ಆಗಬಹುದು ಎಂಬ ನಿರೀಕ್ಷೆ ಇದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು