ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರಪಳಿ ರಚನೆ ಮೂರು ನಿಮಿಷ ವಿಳಂಬ

ಎಲ್ಲೆಡೆ ಬ್ಯಾನರ್‌, ಕಮಾನು ರಚನೆ–ಹಬ್ಬದ ವಾತಾವರಣ ನಿರ್ಮಿಸಲು ಕ್ರಮ
Published : 14 ಸೆಪ್ಟೆಂಬರ್ 2024, 16:14 IST
Last Updated : 14 ಸೆಪ್ಟೆಂಬರ್ 2024, 16:14 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಭಾನುವಾರ ಬೆಳಿಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಂತೆ ವಿಜಯನಗರ ಜಿಲ್ಲೆಯಲ್ಲಿ ಸಹ ಸುಮಾರು 40 ಕಿ.ಮೀ.ನಷ್ಟು ಉದ್ದದ ಮಾನವ ಸರಪಳಿ ರಚನೆಯಾಗಲಿದ್ದು, ಆದರೆ ಸರಪಳಿ ರಚಿಸುವ ಸಮಯದಲ್ಲಿ ಸ್ವಲ್ಪ ಬದಲಾವಣೆ ಆಗಿದೆ. 

ಈ ಹಿಂದಿನ ಸೂಚನೆಯಂತೆ ಬೆಳಿಗ್ಗೆ 9.57ರಿಂದ 59ರವರೆಗೆ ಸರಪಳಿ ರಚಿಸಬೇಕಿತ್ತು. ಆದರೆ ಸರ್ಕಾರದ ಪರಿಷ್ಕೃತ ಸೂಚನೆಯಂತೆ ಬೆಳಿಗ್ಗೆ 10ರಿಂದ 10.02ರವರೆಗೆ ಸರಪಳಿ ರಚನೆಯಾಗಬೇಕು ಹಾಗೂ 10.05ರವರೆಗೆ ಮಾನವ ಸರಪಳಿಯಲ್ಲೇ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಜೈಹಿಂದ್‌, ಜೈ ಕರ್ನಾಟಕ ಎಂದು ಘೋಷಣೆ ಕೂಗಬೇಕಾಗುತ್ತದೆ. 10.05ಕ್ಕೆ ರಾಷ್ಟ್ರಗೀತೆ ಮೊಳಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

‘ಬೆಳಿಗ್ಗೆ 9.15ಕ್ಕೆ ಮಾನವ ಸರಪಳಿ ನಿರ್ಮಿಸುವ ಕೆಲಸ ಆರಂಭವಾಗಲಿದೆ. ಅದಕ್ಕೆ ಮೊದಲಾಗಿಯೇ ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿದ ಸ್ಥಳಗಳಿಗೆ ತೆರಳಬೇಕಾಗುತ್ತದೆ. ಸರಪಳಿ ರಚನೆ ಪ್ರಕ್ರಿಯೆ ಆರಂಭವಾಗುವ ತನಕ ವಿದ್ಯಾರ್ಥಿಗಳು ನೆರಳಲ್ಲಿ ಇರಬೇಕು. ಕೇವಲ 45 ನಿಮಿಷದೊಳಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಆಟೋ ರಿಕ್ಷಾ, ಟ್ಯಾಕ್ಸಿ ಮಾಲೀಕರ ಸಂಘ ಸಹಿತ ವಿವಿಧ ಸಂಘಟನೆಗಳು ಮಾನವ ಸರಪಳಿಯಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ. ವಿವಿಧ ಹಂತದಲ್ಲಿ ಅಧಿಕಾರಿಗಳಿಗೆ ವಿವಿಧ ಹೊಣೆಗಾರಿಕೆ ನೀಡಲಾಗಿದೆ. ಬಹುತೇಕ ಒಂದು ವಾರದಿಂದ ಜಿಲ್ಲಾಡಳಿತ ಕಾರ್ಯಕ್ರಮದ ಯಶಸ್ಸಿಗೆ ಭಾರಿ ಸಿದ್ಧತೆ ಕೈಗೊಂಡಿದೆ.

ಬದಲಾವಣೆಗೆ ಕಾರಣ: ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ ಅವರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅವರ ಕಾರ್ಯಕ್ರಮದಲ್ಲಿ ಪರಿಷ್ಕರಣೆ ಆಗಿರುವ ಕಾರಣ ಇತರ ಜಿಲ್ಲೆಗಳಲ್ಲಿ ಸಹ ಕಾರ್ಯಕ್ರಮದ ಸಮಯವನ್ನು ಮರುನಿಗದಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಬ್ಬದ ಸಂಭ್ರಮ: ಮಾನವ ಸರಪಳಿಗಾಗಿ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಸರಪಳಿ ಮಾಡಲಿರುವ ಸ್ಥಳಗಳಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಟಿ.ಬಿ.ಡ್ಯಾಂ ಸಮೀಪದ ಮೊದಲನೇ ಸೇತುವೆಯ ಬಳಿ ಹೆದ್ದಾರಿಯಲ್ಲಿ ವಿಜಯನಗರ ಜಿಲ್ಲೆಗೆ ಸ್ವಾಗತ ಎಂಬ ಬೃಹತ್ ಪೇಂಟ್‌ ಬಳಿಯಲಾಗಿದೆ.

ಭುವನಹಳ್ಳಿ ಗ್ರಾಮದವರೆಗೆ ನಡೆಯಲಿರುವ ಮಾನವ ಸರಪಳಿ ಮರ‍್ಗದುದ್ದಕ್ಕೂ ಅಚ್ಚುಕಟ್ಟಾಗಿ ನಂಬರ್‌ಗಳನ್ನು ನಮೂದಿಸಲಾಗಿದ್ದು, ಆಯಾ ಕಡೆಗಳಲ್ಲಿ ಮೇಲ್ವಿಚಾರಣೆಗಾಗಿ ಶಿಸ್ತುಬದ್ಧವಾಗಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಶನಿವಾರ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ಆಯಾ ಕಡೆಗೆ ಸಂಚರಿಸಿ ಮರ‍್ಗಸಿದ್ಧತೆಯ ಬಗ್ಗೆ ಖಚಿತಪಡಿಸಿಕೊಂಡರು.

ಮಾನವ ಸರಪಳಿಯ ಮಾರ್ಗಗಳಲ್ಲಿ ಬಾವುಟಗಳನ್ನು ಅಳವಡಿಸಲಾಗಿದೆ. ಕೆಲ ಕಡೆಗೆ ಕಮಾನುಗಳನ್ನು ಹಾಕಲಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಪ್ರಚಾರಕ್ಕಾಗಿ ಅಲ್ಲಲ್ಲಿ ಬ್ಯಾನರ್ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT