ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂ ಐಸೋಲೇಷನ್‌ನಲ್ಲಿರುವವರಿಗೆ ಎಚ್ಚರಿಕೆ; ಖಾಕಿ ಪಡೆಯಿಂದ ಕಟ್ಟುನಿಟ್ಟು ಕ್ರಮ

Last Updated 23 ಏಪ್ರಿಲ್ 2021, 9:44 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೋವಿಡ್‌–19 ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೊಳಿಸಿದ್ದು, ಅದರ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಪೊಲೀಸ್‌ ಇಲಾಖೆ ಮುಂದಾಗಿದೆ.

ಸರ್ಕಾರದ ಸೂಚನೆಯಂತೆ ಎಪಿಎಂಸಿ, ಸೋಗಿ ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರುವುದನ್ನು ತಡೆಯಲು ನಗರದ ಐದು ಕಡೆಗಳಲ್ಲಿ ಶುಕ್ರವಾರ ತರಕಾರಿ, ಹಣ್ಣಿನ ಮಾರುಕಟ್ಟೆ ಆರಂಭಿಸಲಾಗಿದೆ.

ನಗರದ ತಾಲ್ಲೂಕು ಕ್ರೀಡಾಂಗಣ, ದೀಪಾಯನ ಶಾಲೆ, ಎಂ.ಜೆ. ನಗರ, ಬಳ್ಳಾರಿ ರಸ್ತೆಯ ಸರ್ದಾರ್‌ ಪಟೇಲ್‌ ಶಾಲೆ ಹಾಗೂ ತುಂಗಭದ್ರಾ ಶಾಲೆ ಸಮೀಪದ ಮೈದಾನ ಸೇರಿವೆ. ಪೊಲೀಸರು ಎಲ್ಲ ಐದೂ ಕಡೆಗಳಲ್ಲಿ ಮಾರ್ಕಿಂಗ್‌ ಮಾಡಿದ್ದು, ಅದರೊಳಗೆ ಕುಳಿತುಕೊಂಡು ವ್ಯಾಪಾರಿಗಳು ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರಿಗೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು, ಅಂತರ ಕಾಯ್ದುಕೊಂಡು ವ್ಯವಹರಿಸುವಂತೆ ಸೂಚಿಸಿದ್ದಾರೆ. ಮೊದಲ ದಿನ ಬೆರಳೆಣಿಕೆಯಷ್ಟು ವ್ಯಾಪಾರಿಗಳು ವಹಿವಾಟು ನಡೆಸಿದರು. ಶನಿವಾರ, ಭಾನುವಾರದಿಂದ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನದಿಂದಲೇ ನಗರದ ಕಾಲೇಜು ರಸ್ತೆ, ಟಿ.ಬಿ. ಡ್ಯಾಂ ರಸ್ತೆ, ಮೇನ್‌ ಬಜಾರ್‌, ರೋಟರಿ ವೃತ್ತ, ಗಾಂಧಿ ವೃತ್ತ, ರಾಣಿಪೇಟೆ ಸೇರಿದಂತೆ ಇತರೆಡೆ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದ್ದರು. ಶುಕ್ರವಾರ ಹೆಚ್ಚಿನ ಮಳಿಗೆಗಳು ಬಾಗಿಲು ತೆರೆದಿರಲಿಲ್ಲ. ಅಲ್ಲಲ್ಲಿ ತೆರೆದಿದ್ದ ಕೆಲ ಮಳಿಗೆಗಳನ್ನು ಪೊಲೀಸರು ಪುನಃ ಮುಚ್ಚಿಸಿದರು. ತರಕಾರಿ, ಹಣ್ಣು, ಹಾಲು, ದಿನಪತ್ರಿಕೆ ಎಂದಿನಂತೆ ಪೂರೈಕೆಯಾಯಿತು. ಔಷಧ ಮಳಿಗೆಗಳು ತೆರೆದಿದ್ದವು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಹೆಚ್ಚಾಗಿ ಜನ ಸುಳಿಯಲಿಲ್ಲ. ಬಸ್‌ ನಿಲ್ದಾಣ, ರೈಲು ನಿಲ್ದಾಣದಲ್ಲೂ ಇದೇ ದೃಶ್ಯ ಕಂಡು ಬಂತು. ಮೇನ್‌ ಬಜಾರ್‌, ಗಾಂಧಿ ವೃತ್ತ, ಸೋಗಿ ಮಾರುಕಟ್ಟೆ, ರಾಮ ಟಾಕೀಸ್‌ ಸೇರಿದಂತೆ ಜನ ಸೇರುವ ಪ್ರದೇಶಗಳಲ್ಲಿ ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಪ್ರಮುಖ ವೃತ್ತಗಳಲ್ಲಿ ನಿಂತು, ಮಾಸ್ಕ್‌ ಧರಿಸದೇ ಓಡಾಡುತ್ತಿರುವವರಿಗೆ ದಂಡ ವಿಧಿಸುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚಾಗಿ ಜನ ಸೇರುವ ಸಾಧ್ಯತೆ ಇರುವುದರಿಂದ ಗಸ್ತು ಹೆಚ್ಚಿಸಿದ್ದಾರೆ.

ಐಸೋಲೇಷನ್‌ನಲ್ಲಿರುವವರಿಗೆ ಎಚ್ಚರಿಕೆ:ಕೋವಿಡ್‌–19 ದೃಢಪಟ್ಟ ನಂತರ ಮನೆಯಲ್ಲೇ ಐಸೋಲೇಷನ್‌ನಲ್ಲಿರುವವರು ವಿನಾಕಾರಣ ಹೊರಗೆ ತಿರುಗುತ್ತಿದ್ದು, ಅವರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂಬ ಆರೋಪ ಕೇಳಿ ಬಂದಿರುವುದರಿಂದ ಜಿಲ್ಲಾಡಳಿತ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದೆ.

ಹೊಸಪೇಟೆಯ ಕೌಲ್‌ಪೇಟೆಯಲ್ಲಿ ಶಟರ್‌ ಮುಚ್ಚಿಕೊಂಡು ಗ್ರಾಹಕರನ್ನು ಒಳಗೆ ಕೂರಿಸಿಕೊಂಡು ಬಟ್ಟೆ ಮಾರಾಟ ಮಾಡುತ್ತಿದ್ದ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡು ಬಾಗಿಲು ಮುಚ್ಚಿಸಿದ ಪೊಲೀಸರು
ಹೊಸಪೇಟೆಯ ಕೌಲ್‌ಪೇಟೆಯಲ್ಲಿ ಶಟರ್‌ ಮುಚ್ಚಿಕೊಂಡು ಗ್ರಾಹಕರನ್ನು ಒಳಗೆ ಕೂರಿಸಿಕೊಂಡು ಬಟ್ಟೆ ಮಾರಾಟ ಮಾಡುತ್ತಿದ್ದ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡು ಬಾಗಿಲು ಮುಚ್ಚಿಸಿದ ಪೊಲೀಸರು

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಕಂದಾಯ ಇಲಾಖೆಯ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನಗೌಡ ಹಾಗೂ ಅವರ ಸಿಬ್ಬಂದಿ ಹೋಂ ಐಸೋಲೇಷನ್‌ನಲ್ಲಿರುವವರ ಮನೆಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದಾರೆ.

‘ಐಸೋಲೇಷನ್‌ ಅವಧಿ ಮುಗಿದು, ಇನ್ನೊಮ್ಮೆ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬರುವವರೆಗೆ ಯಾರೂ ಹೊರಗೆ ಓಡಾಡುವಂತಿಲ್ಲ. ಒಂದುವೇಳೆ ಓಡಾಡಿದರೆ ಅವರನ್ನು ಕೋವಿಡ್‌ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕಾನೂನು ಕ್ರಮಕ್ಕೂ ಚಿಂತಿಸಲಾಗುತ್ತಿದೆ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಈಗ ಯಾರಿಗೂ ಹೊರಗೆ ಓಡಾಡಲು ಬಿಡುತ್ತಿಲ್ಲ’ ಎಂದು ಡಾ. ಭಾಸ್ಕರ್‌ ತಿಳಿಸಿದ್ದಾರೆ.

‘ಉಚಿತವಾಗಿ ಲಸಿಕೆ ಕೊಡಿ’
‘ವೈದ್ಯಕೀಯ ಕಂಪನಿಗಳಿಂದ ₹ 150ಕ್ಕೆ ಕೊರೊನಾ ಲಸಿಕೆ ಖರೀದಿ ಮಾಡಿ, ಅದನ್ನು ಖಾಸಗಿ ಆಸ್ಪತ್ರೆಗಳಲ್ಲಿ ₹400ಕ್ಕೆ ಮಾರಾಟ ಮಾಡುತ್ತಿರುವುದು ಖಂಡನಾರ್ಹ’ ಎಂದು ಡಿವೈಎಫ್‌ಐ ತಾಲ್ಲೂಕು ಅಧ್ಯಕ್ಷ ಈಡಿಗರ ಮಂಜುನಾಥ ತಿಳಿಸಿದ್ದಾರೆ.

‘ಕೋವಿಡ್‌–19 ವ್ಯಾಪಕವಾಗಿ ಹರಡುತ್ತಿರುವುದರಿಂದ ಜನ ಹಾಸಿಗೆ, ವೆಂಟಿಲೇಟರ್‌ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ. ಹೋದ ವರ್ಷದ ಲಾಕ್‌ಡೌನ್‌ನಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಮತ್ತೆ ಕರ್ಫ್ಯೂ ಜಾರಿಗೆ ಬಂದಿದೆ. ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ಕೊಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಎರಡ್ಮೂರು ದಿನಗಳಲ್ಲಿ ಹೊಸ ಲಸಿಕೆ’
‘ಕೊರೊನಾ ಲಸಿಕೆ ಮುಗಿಯುವ ಹಂತಕ್ಕೆ ಬಂದಿದೆ. ಆದರೆ, ಅದು ಮುಗಿಯುವುದರೊಳಗೆ ಹೊಸ ಲಸಿಕೆ ಬರಲಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್‌ ತಿಳಿಸಿದ್ದಾರೆ.

‘ಲಸಿಕೆ ಮುಗಿದಿದೆ ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ಅದು ನಿಜವಲ್ಲ. ಕಾಲಕಾಲಕ್ಕೆ ಅಗತ್ಯಕ್ಕೆ ಅನುಗುಣವಾಗಿ ಲಸಿಕೆ ಬರುತ್ತಿದೆ. ಎಷ್ಟೇ ಹೊಸ ಕೋವಿಡ್‌–19 ಪ್ರಕರಣ ಬಂದರೂ ಅದನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನ ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು, ಅಂತರ ಕಾಯ್ದುಕೊಂಡು ಇರಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT