ಬುಧವಾರ, ಜನವರಿ 19, 2022
23 °C
2019ರ ಮಾರ್ಚ್‌ನಲ್ಲೇ ಹೊಸಪೇಟೆ ನಗರಸಭೆ ಅವಧಿ ಮುಕ್ತಾಯ

ಹೊಸಪೇಟೆ: ನಗರಸಭೆ ಚುನಾವಣೆಗೆ ಮಾರ್ಗ ಸುಗಮ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇದುವರೆಗೆ ಚುನಾವಣೆ ನಡೆಯದ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್‌ 30ರೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿರುವುದರಿಂದ ಇಲ್ಲಿನ ನಗರಸಭೆ ಚುನಾವಣೆಗೆ ಮಾರ್ಗ ಸುಗಮಗೊಂಡಂತಾಗಿದೆ.

2019ರ ಮಾರ್ಚ್‌ನಲ್ಲೇ ನಗರಸಭೆ ಅವಧಿ ಪೂರ್ಣಗೊಂಡಿತ್ತು. ಆದರೆ, ವಾರ್ಡ್‌ವಾರು ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಮಾಜಿ ನಗರಸಭೆ ಸದಸ್ಯ ಕೆ. ವೇಣುಗೋಪಾಲ್‌ ಹಾಗೂ ಇತರೆ ಸದಸ್ಯರು ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದ ಮೊರೆ ಹೋಗಿದ್ದರು.

ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯ ಅವಧಿ ಕೂಡ ಪ್ರಸಕ್ತ ಸಾಲಿನ ಜೂನ್‌ನಲ್ಲಿ ಕೊನೆಗೊಂಡಿತ್ತು. ಆದರೆ, ಚುನಾವಣೆ ನಡೆಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಆಗಿರಲಿಲ್ಲ. ಈಗ ನಗರಸಭೆ, ಪುರಸಭೆಗೆ ಡಿ. 30ರೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್‌ ಗಡುವು ವಿಧಿಸಿರುವುದರಿಂದ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ. ನ. 26ರೊಳಗೆ ಮೀಸಲಾತಿ ಕರಡಿನ ಅಂತಿಮ ಅಧಿಸೂಚನೆ ಹೊರಡಿಸಬೇಕು. ನಂತರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವಂತೆಯೂ ಸೂಚಿಸಿದೆ.

‘ಉದ್ದೇಶಪೂರ್ವಕವಾಗಿಯೇ ನಾಲ್ಕೈದು ವಾರ್ಡ್‌ಗಳಲ್ಲಿ ಅವೈಜ್ಞಾನಿಕವಾಗಿ ಮೀಸಲಾತಿ ನಿಗದಿಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದೆ. ಈಗ ನ್ಯಾಯಾಲಯವೇ ಹೊಸ ಮೀಸಲಾತಿ ನಿಗದಿಗೊಳಿಸಿ, ಚುನಾವಣೆ ನಡೆಸುವಂತೆ ಸೂಚಿಸಿರುವುದಕ್ಕೆ ಖುಷಿಯಾಗಿದೆ’ ಎಂದು ಮಾಜಿ ನಗರಸಭೆ ಸದಸ್ಯ ಕೆ. ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎರಡು ವರ್ಷಗಳಿಂದ ನಗರಸಭೆಯಲ್ಲಿ ಅಧಿಕಾರಿಗಳದ್ದೇ ಕಾರುಬಾರು ನಡೆಯುತ್ತಿದೆ. ಆಯಾ ವಾರ್ಡ್‌ ಜನರು ಅವರ ಕುಂದುಕೊರತೆ ಹೇಳಿಕೊಳ್ಳಲು ವೇದಿಕೆ ಇಲ್ಲದಂತಾಗಿತ್ತು. ಬೇಗ ಚುನಾವಣೆ ನಡೆದು ಜನಪ್ರತಿನಿಧಿಗಳು ಆಯ್ಕೆಯಾದರೆ ಸಮಸ್ಯೆ ಬಗೆಹರಿದಂತಾಗುತ್ತದೆ. ಎಲ್ಲ ಕೆಲಸಗಳು ಬೇಗ ಆಗಬಹುದು’ ಎಂದು ಸ್ಥಳೀಯ ನಿವಾಸಿ ರಾಮು ಹೇಳಿದರು.

ಖುದ್ದು ಹಾಜರಾತಿಗೆ ಸೂಚನೆ

ನಗರಸಭೆ ವಾರ್ಡ್‌ವಾರು ಮೀಸಲು ನಿಗದಿಗೆ ಸಂಬಂಧಿಸಿದಂತೆ ವಿವರಣೆ ಕೊಡಲು ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ, ಚುನಾವಣಾ ಆಯೋಗದ ಅಧಿಕಾರಿಗಳಿಗೆ ಖುದ್ದು ಹಾಜರಾಗುವಂತೆ ತಿಳಿಸಿರುವ ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠ, ಇಬ್ಬರನ್ನು ನಿಂದನಾ ಪ್ರಕರಣ ಎದುರಿಸುವಂತೆ ಸೂಚಿಸಿದೆ.

2018ರ ಕರಡಿನಲ್ಲಿ ನಗರಸಭೆಯ ಆರನೇ ವಾರ್ಡ್‌ ಅನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿತ್ತು. ಅಂತಿಮ ಅಧಿಸೂಚನೆಯಲ್ಲಿ ಬದಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಾಜಿ ನಗರಸಭೆ ಸದಸ್ಯ ಕೆ. ವೇಣುಗೋಪಾಲ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಕರಡು ಪರಿಷ್ಕರಿಸಿ ಅಂತಿಮ ಅಧಿಸೂಚನೆ ಹೊರಡಿಸಲು ವಿಳಂಬ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್‌ ಈಗ ಇಬ್ಬರೂ ಹಿರಿಯ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು