ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ : ಬಿಡಿಸಿಸಿ ಬ್ಯಾಂಕ್‌ಗೆ ₹12 ಕೋಟಿ ಲಾಭ

ಲಾಭದ ಪ್ರಮಾಣ ಕಳೆದ ವರ್ಷಕ್ಕಿಂತ ಸುಮಾರು ₹ 3 ಕೋಟಿಯಷ್ಟು ಅಧಿಕ
Published 22 ಜುಲೈ 2023, 13:30 IST
Last Updated 22 ಜುಲೈ 2023, 13:30 IST
ಅಕ್ಷರ ಗಾತ್ರ

ಹೊಸಪೇಟೆ : ‘ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ 2022–23ನೇ ಸಾಲಿನಲ್ಲಿ ₹12.31 ಕೋಟಿ ನಿವ್ವಳ ಲಾಭ ಗಳಿಸಿದ್ದು, ₹2,362.87 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಶೇ 4ರಷ್ಟು ಲಾಭಾಂಶ ನೀಡಲಾಗುತ್ತದೆ’ ಎಂದು ಬ್ಯಾಂಕ್‌ನ ಪ್ರಭಾರ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಸರ್ವ ಸದಸ್ಯರ ಮಹಾಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕ್‌ ಸತತ 47 ವರ್ಷಗಳಿಂದಲೂ ಲಾಭ ಗಳಿಸುತ್ತ ಬಂದಿದೆ. ಕಳೆದ ವರ್ಷ ಬ್ಯಾಂಕ್‌ನ ಲಾಭ ₹9.56 ಕೋಟಿ ಆಗಿತ್ತು’ ಎಂದರು.

‘ಬ್ಯಾಂಕ್‌ನ ಸಾಲ ವಸೂಲಾತಿ ಪ್ರಮಾಣ ಶೇ 94.12ರಷ್ಟಿದೆ. ಒಟ್ಟು ಠೇವಣಿ ಮೊತ್ತ ₹1,437ರಷ್ಟಿದೆ’ ಎಂದರು.

‘₹1,440  ಕೋಟಿ ಸಾಲ ವಿತರಿಸಿದೆ. ಒಟ್ಟು ಸಾಲದ ಹೊರಬಾಕಿ ಮೊತ್ತ ₹1,656 ಕೋಟಿಯಷ್ಟಿದೆ. ಒಟ್ಟು ಹೂಡಿಕೆ ₹ 534 ಕೋಟಿ, ಒಟ್ಟು ಷೇರು ಬಂಡವಾಳ ₹125.53 ಕೋಟಿ ಇದೆ’ ಎಂದು ಅವರು ಮಾಹಿತಿ ನೀಡಿದರು.

‘ಬ್ಯಾಂಕ್‌ ಸದ್ಯ 33 ಶಾಖೆಗಳನ್ನು ಮತ್ತು 294 ನೌಕರರನ್ನು ಒಳಗೊಂಡಿದೆ. ಇನ್ನೂ ಹತ್ತು ಶಾಖೆಗಳನ್ನು ತೆರೆಯುವ ನಿಟ್ಟಿನಲ್ಲಿ ಆರ್‌ಬಿಐಗೆ ಕೋರಿಕೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ’ ಎಂದರು.

‘ರಾಜ್ಯದಲ್ಲಿ ಯುಪಿಐ ಪಾವತಿ ಪದ್ಧತಿಯನ್ನು ಅಳವಡಿಸಿಕೊಂಡ ಮೊದಲ ಬ್ಯಾಂಕ್‌ ಎಂಬ ಹೆಗ್ಗಳಿಕೆಯ ಬಿಡಿಸಿಸಿ  ಬ್ಯಾಂಕ್‌, ಸಿ.ಬಿ.ಎಸ್‌ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ಸ್ಥಾನ ಪಡೆದಿದೆ. ಎನ್‌ಪಿಎ ಪ್ರಮಾಣ ಶೇ 4.15ರಷ್ಟಿದೆ’ ಎಂದರು.

ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್‌.ಹರೀಶ್‌, ನಿರ್ದೇಶಕರು ಇದ್ದರು.

‌ಅಧ್ಯಕ್ಷರ ರಾಜೀನಾಮೆ ಅಂಗೀಕಾರ

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಆನಂದ್‌ ಸಿಂಗ್ ಅವರು ನೀಡಿರುವ ರಾಜೀನಾಮೆಯನ್ನು ಮಹಾಸಭೆ ಅಂಗೀಕರಿಸಿದೆ. ಉಪಾಧ್ಯಕ್ಷರಾಗಿರುವ ಕೆ.ತಿಪ್ಪೇಸ್ವಾಮಿ ಅವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅಧಿಕಾರ ನೀಡಲಾಗಿದೆ. ಅಧ್ಯಕ್ಷ ಸ್ಥಾನದ ತೆರವಾಗಿರುವ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದ್ದು ಆಯೋಗ ನೀಡುವ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ಎಸ್.ಹರೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT