ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ನೀರಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಬಾರಿ ಒಂದು ಬೆಳೆಗೆ ಸಹ ನೀರು ಸಿಗುವುದು ಸಂಶಯವಿದೆ. ಹೀಗಾಗಿ ಸರ್ಕಾರ ತಕ್ಷಣ ಭತ್ತ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ವಾಸುದೇವ ಮೇಟಿ ಒತ್ತಾಯಿಸಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಬೆಳೆಗೆ ನೀರು ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿರುವುದು ಮಳೆ ಬರುವ ಅಂದಾಜಿನ ಮೇರೆಗೆ ಮಾತ್ರ, ಹಿಂಗಾರು ಮಳೆ ಬಾರದೆ ಹೋದರೆ ಒಂದು ಬೆಳೆಗೂ ನೀರು ಸಿಗುವುದಿಲ್ಲ, ಸರ್ಕಾರ ತಕ್ಷಣ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಪ್ಯಾಕೇಜ್ ನೀಡಬೇಕು ಎಂದರು.
ಮಲತಾಯಿ ಧೋರಣೆ: ಉತ್ತರ ಕರ್ನಾಟಕ ಭಾಗದ ಅಣೆಕಟ್ಟುಗಳ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಗೇಟ್ ಒಡೆದು ಹೋಗಲು ಕೇವಲ ಅಧಿಕಾರಿಗಳನ್ನು ದೂರುವುದು ಸರಿಯಲ್ಲ, ಸರ್ಕಾರದ ಹೊಣೆಗಾರಿಕೆ ಅಷ್ಟೇ ಇದೆ, ಜಿಲ್ಲಾ ಉಸ್ತುವಾರಿ ಸಚಿವರೇ ಸ್ಥಳಕ್ಕೆ ಬಂದಿಲ್ಲ ಎಂದರೆ ಸರ್ಕಾರಕ್ಕೆ ಇರುವ ಕಾಳಜಿ ಅರ್ಥವಾಗುವಂತದ್ದೇ ಆಗಿದೆ ಎಂದು ಮೇಟಿ ಆರೋಪಿಸಿದರು.
‘ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಒಂದು ವೇಳೆ ಇಂತಹ ದುರಂತ ಸಂಭವಿಸಿದ್ದರೆ ಇಡೀ ಸರ್ಕಾರವೇ ಅಲ್ಲಿರುತ್ತಿತ್ತು. ಆದರೆ ತುಂಗಭದ್ರಾ ವಿಚಾರದಲ್ಲಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಕೇವಲ ಅರ್ಧ ಗಂಟೆ ಹೊತ್ತು ಇದ್ದು ಹೋದರು. ಒಂದು ವಾರದೊಳಗೆ ಕಿತ್ತುಹೋದ ಗೇಟ್ ಮತ್ತೆ ಅಳವಡಿಸಬೇಕು, ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಗಾಳೆಪ್ಪ ಮಾತನಾಡಿ, ಪರಿಸ್ಥಿತಿಯ ಗಂಭೀರತೆ ಅರಿತು ಸರ್ಕಾರ ತಕ್ಷಣ ರೈತರ ಸಾಲ ಮನ್ನಾ ಮಾಡಬೇಕು ಎಂದರು.
ಸಂಘದ ಮುಖಂಡರಾದ ಉದಿಯಪ್ಪ ನಾಯಕ್, ಬೀನಾ ರೂಪಕಲಾ, ಬಿ.ಎಸ್.ವೆಂಕಟೇಶ್ ಇತರರು ಇದ್ದರು