ಗುರುವಾರ , ಜೂನ್ 17, 2021
21 °C
ಖರೀದಿಗೆ ಮೀಸಲಿಟ್ಟಿರುವ ಸಮಯ ವಿಸ್ತರಣೆಗೆ ವ್ಯಾಪಾರಿಗಳ ಆಗ್ರಹ

ತರಕಾರಿ, ಹಣ್ಣು ಮಾರಾಟವಾಗದೆ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೋವಿಡ್–19 ಕರ್ಫ್ಯೂ ನೇರ ಪರಿಣಾಮ ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳ ಮೇಲೆ ಬಿದ್ದಿದೆ.

ಜನ ಒಂದೆಡೆ ಗುಂಪು ಗೂಡದಂತೆ ತಡೆಯುವುದಕ್ಕಾಗಿ ಜಿಲ್ಲಾಡಳಿತವು ನಗರದ ಆರು ಕಡೆಗಳಲ್ಲಿ ತಾತ್ಕಾಲಿಕ ಮಾರುಕಟ್ಟೆ ಆರಂಭಿಸಿ, ವ್ಯಾಪಾರಿಗಳಿಗೆ ಅವರ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಕರ್ಫ್ಯೂ ಜಾರಿಗೆ ಬಂದ ದಿನದಿಂದ ಬೆಳಿಗ್ಗೆ 6ರಿಂದ 10 ಗಂಟೆಯ ವರೆಗೆ ಖರೀದಿ ಮತ್ತು ವಹಿವಾಟು ನಡೆಸುವವರಿಗೆ ಅವಕಾಶ ಕಲ್ಪಿಸಿದ್ದರಿಂದ ನಷ್ಟ ಎದುರಿಸುತ್ತಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ (ಎಪಿಎಂಸಿ) ತರಕಾರಿ, ಹಣ್ಣು ಖರೀದಿಸಿ ಮಾರಾಟಕ್ಕೆ ನಿಗದಿಪಡಿಸಿದ ಆಯಾ ಸ್ಥಳಗಳಿಗೆ ಹೋಗಲು ಸಮಯ ಹೋಗುತ್ತದೆ. ಹತ್ತು ಗಂಟೆಯ ವರೆಗೆ ಖರೀದಿಗೆ ಅವಕಾಶ ಇರುವುದರಿಂದ ಜನ ಎಂಟು ಗಂಟೆಯ ನಂತರ ಹೊರಗೆ ಬರುತ್ತಿದ್ದಾರೆ. ಎರಡು ಗಂಟೆಗಳಲ್ಲೇ ವ್ಯಾಪಾರ ಮುಗಿಸಬೇಕು. ಇದರಿಂದಾಗಿ ಸಹಜವಾಗಿಯೇ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಅರ್ಧಕ್ಕರ್ಧ ವಸ್ತು ವಾಪಸ್‌ ಮನೆಗೆ ಕೊಂಡೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ವ್ಯಾಪಾರಸ್ಥರ ಅಳಲು.

‘ಸಾಮಾನ್ಯ ದಿನಗಳಲ್ಲಿ ದಿನಕ್ಕೆ ಮೂರು ಸಾವಿರ ವ್ಯಾಪಾರ ಆಗುತ್ತಿತ್ತು. ಎಪಿಎಂಸಿಯಿಂದ ಖರೀದಿಸಿ ತರುತ್ತಿದ್ದ ಹೆಚ್ಚಿನ ತರಕಾರಿ ಮಾರಾಟವಾಗುತ್ತಿತ್ತು. ಈಗ ದಿನಕ್ಕೆ ₹500ರಿಂದ ₹600ರ ತನಕ ವ್ಯಾಪಾರವಾದರೆ ಹೆಚ್ಚು. ಖರೀದಿಗೆ ಇನ್ನಷ್ಟು ಕಾಲಾವಕಾಶ ಕೊಡಬೇಕು. ಜನರಿಗೂ ವ್ಯಾಪಾರಿಗಳಿಗೂ ಅನುಕೂಲವಾಗುತ್ತದೆ’ ಎಂದು ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ತರಕಾರಿ ಮಾರಾಟ ಮಾಡುತ್ತ ಕುಪೇಂದ್ರ ಮಾತಿಗಿಳಿದರು. ವ್ಯಾಪಾರಿ ಮೊಹಮ್ಮದ್‌ ಏಜಾಸ್‌ ಅವರ ಅಭಿಪ್ರಾಯವೂ ಇದೇ ಆಗಿದೆ.

‘ತರಕಾರಿ, ಹಣ್ಣು ಹೆಚ್ಚು ದಿನ ಸಂಗ್ರಹಿಸಿ ಇಡಲು ಆಗುವುದಿಲ್ಲ. ನಿತ್ಯ ಹೇಳಿಕೊಳ್ಳುವಂತಹ ವ್ಯಾಪಾರ ಆಗುತ್ತಿಲ್ಲ. ಅನೇಕರು ಆಯಾ ಬಡಾವಣೆಗಳಿಗೆ ಹೋಗಿ ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದಾರೆ. ಹೊರಗೆ ಬಂದರೆ ಕೊರೊನಾ ಬರುತ್ತದೆ ಎಂಬ ಭಯದಲ್ಲಿ ಜನ ಖರೀದಿಗೆ ಬರುತ್ತಿಲ್ಲ. ಇದರಿಂದಲೂ ವ್ಯಾಪಾರಕ್ಕೆ ಹಿನ್ನಡೆ ಉಂಟಾಗುತ್ತಿದೆ’ ಎಂದು ಮಾವಿನ ಹಣ್ಣುಗಳ ವ್ಯಾಪಾರಿ ಅಕ್ಬರ್‌ ತಿಳಿಸಿದರು.

ಕೆಲವು ವ್ಯಾಪಾರಿಗಳು ಮೊದಲಿನಿಂದಲೂ ಅವರಿಗೆ ತರಕಾರಿ, ಹಣ್ಣು ಸಂಗ್ರಹಿಸಿ ಇಡಲು ನಿರ್ದಿಷ್ಟ ಜಾಗವಿಲ್ಲ. ದಿನವಿಡೀ ಮಾರಾಟ ಮಾಡಿ ಮನೆಗಳಿಗೆ ಮರಳುತ್ತಿದ್ದರು. ಈಗ ಮಾರಾಟವಾಗದೇ ಉಳಿಯುತ್ತಿರುವುದರಿಂದ ಮೈದಾನದಲ್ಲೇ ಪ್ಲಾಸ್ಟಿಕ್‌ ಹೊದಿಕೆ ಹಾಕಿ ಹೋಗುತ್ತಿದ್ದಾರೆ. ಅದಕ್ಕೆ ಯಾವುದೇ ಭದ್ರತೆ ಇಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು