ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಬರದಿಂದ ತತ್ತರ, 40 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ ನೀರೇ ಗತಿ

ಕುಡಿಯುವ ನೀರಿಗಾಗಿ ಜನ ಪರದಾಟ
Published 12 ಮಾರ್ಚ್ 2024, 5:30 IST
Last Updated 12 ಮಾರ್ಚ್ 2024, 5:30 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿಗೆ ಹೊಂದಿಕೊಂಡು ಹರಿಯುತ್ತಿರುವ ತುಂಗಭದ್ರಾ ನದಿ ನೀರಿನ ಯೋಜನೆಗಳು ಸಾಕಾರಗೊಳ್ಳದ ಪರಿಣಾಮ ಇಲ್ಲಿಯ ಜನತೆಗೆ ನೀರಿನ ಬವಣೆ ತಪ್ಪಿಲ್ಲ. ಬರದ ಛಾಯೆಗೆ ಜಲಮೂಲಗಳು ಬತ್ತುತ್ತಿದ್ದು, 40 ಗ್ರಾಮಗಳಿಗೆ ಸದ್ಯಕ್ಕೆ ಖಾಸಗಿ ಕೊಳವೆ ಬಾವಿಗಳ ನೀರೇ ಗತಿಯಾಗಿದೆ.

ರಾಜೀವ್‌ ಗಾಂಧಿ ಸಬ್‌ಮಿಷನ್‌ ಯೋಜನೆಯಡಿ ಮೂರು ಹಂತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು ಸಮರ್ಪಕ ಅನುಷ್ಠಾನಗೊಂಡಿಲ್ಲ. ಚುನಾವಣೆ ಪೂರ್ವದಲ್ಲಿ 56 ಕೆರೆಗಳಿಗೆ ನೀರು ತುಂಬಿಸುವ ಪ್ರಯೋಗ ಯಶಸ್ವಿಯಾಯಿತು ಎನ್ನುವಷ್ಟರಲ್ಲಿ ನದಿಯಲ್ಲಿ ನೀರು ಕ್ಷೀಣಿಸಿ, ಜನರಿಗೆ ನಿರಾಸೆಯಾಯಿತು.

ಕಳೆದ ವರ್ಷಗಳಲ್ಲಿ ತಾಲ್ಲೂಕಿಗೆ ಕುಡಿಯುವ ನೀರು ಪೂರೈಸಲು ಮುಂಜೂರಾಗಿರುವ ಕೋಟ್ಯಂತರ ಅನುದಾನ ಈವರೆಗೂ ಫಲ ಕೊಡದಿರುವ ಕೊರಗು ಕ್ಷೇತ್ರದ ಜನರನ್ನು ಕಾಡುತ್ತಿದೆ.

ಈ ಕ್ಷೇತ್ರಕ್ಕೆ ಶಾಸಕರಾದವರು ತುಂಗಭದ್ರಾ ನದಿ ಆಶ್ರಯದಲ್ಲಿ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಯೋಜನೆಗೆ ಮರುಜೀವ ನೀಡುತ್ತಲೇ ಬಂದಿದ್ದಾರೆ. ಪ್ರತಿ ಸಲವೂ ಕ್ರಿಯಾಯೋಜನೆ, ಬಜೆಟ್‌ ಗಾತ್ರ ಹೆಚ್ಚಿಸಿದ್ದಾರೆ. ಆದರೆ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಈಗ ಶಾಸಕರಾಗಿರುವ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರು ವಿಳಂಬವಾಗಿರುವ ಎಲ್ಲ ಯೋಜನೆ ಪೂರ್ಣಗೊಳಿಸಲು ಬೆನ್ನತ್ತಿದ್ದಾರೆ.

ಪಟ್ಟಣದ ಜನಸಂಖ್ಯೆ ಅನುಸಾರ 29 ಕಿ.ಮೀ. ದೂರದಲ್ಲಿರುವ ತುಂಗಭದ್ರಾ ನದಿಯಿಂದ 2ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೆ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಅಂದುಕೊಂಡಂತೆ ಎಲ್ಲ ಯೋಜನೆಗಳು ಸಾಕಾರಗೊಂಡರೆ ಜಲಮೂಲಗಳು ಭರ್ತಿಯಾಗುತ್ತವೆ. ಕೊಳವೆಬಾವಿಗಳು ಪುನಶ್ಚೇತನಗೊಂಡು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕುತ್ತದೆ. ಇಲ್ಲವಾದರೆ ಪ್ರತಿವರ್ಷ ನೀರಿನ ಬವಣೆ ತಪ್ಪಿದ್ದಲ್ಲ.

41 ಖಾಸಗಿ ಕೊಳವೆಬಾವಿ ಬಾಡಿಗೆ

ಬೆಣ್ಣಿಹಳ್ಳಿ ನಿಲುವಂಜಿ ಕೆ.ಕಲ್ಲಹಳ್ಳಿ ಚಿಗಟೇರಿ ಚಿರಸ್ತಹಳ್ಳಿ ಹಾರಕನಾಳು ಕನ್ನನಾಯ್ಕನಹಳ್ಳಿ ಹುಲಿಕಟ್ಟೆ ಹಾರಕನಾಳ ಸಣ್ಣತಾಂಡಾ ಜೋಷಿಲಿಂಗಾಪುರ ಪಾವನಪುರ ಕಡಬಗೆರೆ ಹಿಕ್ಕಿಮಗೇರಿತೊಗರಿಕಟ್ಟೆ ಬಾಪೂಜಿನಗರ ಉದ್ಗಟ್ಟಿ ತಾಂಡ ಹಾಗೂ ಅರಸೀಕೆರೆ ಹೋಬಳಿ ವ್ಯಾಪ್ತಿಯ ಅಣಜಿಗೆರೆ ಹುಣಸಿಕಟ್ಟೆ ಶ್ರೀನಿವಾಸಪುರ ಗಡಿಗುಡಾಳ್ ಹನುಮನಹಳ್ಳಿ ಯು.ಕಲ್ಲಹಳ್ಳಿ ಹಿರೆಮೇಗಳಗೆರೆ ಬೂದಿಹಾಳ್ ಕಂಚಿಕೇರಿ ಪುಣಬಗಟ್ಟ ಚೆನ್ನಾಪುರ ಕಮ್ಮತ್ತಹಳ್ಳಿ ಕ್ಯಾರಕಟ್ಟೆ ಯರಬಳ್ಳಿ ಬೇವಿನಹಳ್ಳಿ ಉಚ್ಚಂಗಿದುರ್ಗ ಕೋಟೆ ಕ್ಯಾಂಪ್‌ನ ಜನತೆಗೆ ನೀರು ಪೂರೈಸಲು 41 ರೈತರ ಮನವೊಲಿಸಿ ಕೊಳವೆ ಬಾವಿ ಬಾಡಿಗೆ ಪಡೆಯಲಾಗಿದೆ ಎಂದು ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಕಿರಣ್‌ ನಾಯ್ಕ ಮಾಹಿತಿ ನೀಡಿದರು.

ಹರಪನಹಳ್ಳಿ ಪಟ್ಟಣದ ಪುರಸಭೆ ಪೌರ ಕಾರ್ಮಿಕರು ಬಿರು ಬಿಸಿಲಿನಲ್ಲಿ ಕೆಲಸ ಮುಗಿಸಿ ರಸ್ತೆ ಪಕ್ಕದ ವಾಟರ್ ವಾಲ್ ನಿಂದ ಹರಿಯುತ್ತಿರುವ ನೀರಿನಲ್ಲಿ ಕೈಕಾಲು ಮುಖ ತೊಳೆಯುತ್ತಿರುವುದು.
ಹರಪನಹಳ್ಳಿ ಪಟ್ಟಣದ ಪುರಸಭೆ ಪೌರ ಕಾರ್ಮಿಕರು ಬಿರು ಬಿಸಿಲಿನಲ್ಲಿ ಕೆಲಸ ಮುಗಿಸಿ ರಸ್ತೆ ಪಕ್ಕದ ವಾಟರ್ ವಾಲ್ ನಿಂದ ಹರಿಯುತ್ತಿರುವ ನೀರಿನಲ್ಲಿ ಕೈಕಾಲು ಮುಖ ತೊಳೆಯುತ್ತಿರುವುದು.
ಹರಪನಹಳ್ಳಿ ಪಟ್ಟಣದ ಹೂವಿನಹಡಗಲಿ ರಸ್ತೆಯಲ್ಲಿ ವಾಟರ್ ವಾಲ್‍ ನಿಂದ ವ್ಯರ್ಥವಾಗಿ ಹರಿಯುತ್ತಿರುವ ನೀರು ಬಿಂದಿಗೆಯಲ್ಲಿ ಸಂಗ್ರಹಿಸುತ್ತಿರುವ ಹಣ್ಣಿನ ವ್ಯಾಪಾರಿ.
ಹರಪನಹಳ್ಳಿ ಪಟ್ಟಣದ ಹೂವಿನಹಡಗಲಿ ರಸ್ತೆಯಲ್ಲಿ ವಾಟರ್ ವಾಲ್‍ ನಿಂದ ವ್ಯರ್ಥವಾಗಿ ಹರಿಯುತ್ತಿರುವ ನೀರು ಬಿಂದಿಗೆಯಲ್ಲಿ ಸಂಗ್ರಹಿಸುತ್ತಿರುವ ಹಣ್ಣಿನ ವ್ಯಾಪಾರಿ.
2ನೇ ಹಂತದ ಯೋಜನೆಗೆ ₹120 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಅಮೃತ 2.0 ಯೋಜನೆಯಡಿ ₹37.50 ಕೋಟಿ ಅನುದಾನ ಮುಂಜೂರಾಗಿದೆ. ಉಳಿದ ₹98 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಮಂಜೂರಾಗುವ ವಿಶ್ವಾಸವಿದೆ.
-ಎಂ.ಪಿ.ಲತಾ ಮಲ್ಲಿಕಾರ್ಜುನ್‌, ಶಾಸಕಿ
ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ತಕ್ಷಣ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ. ಟಾಸ್ಕ್ ಪೋರ್ಸ್ ಸಮಿತಿ ಅನುಮತಿ ಪಡೆದು ಆ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು.
-ಕಿರಣ್, ಎಇಇ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಹರಪನಹಳ್ಳಿ
ಸದ್ಯಕ್ಕೆ ನದಿಯಲ್ಲಿ ಲಭ್ಯವಿರುವ ನೀರು ಮತ್ತು ಕೊಳವೆಬಾವಿಗಳ ನೀರು ಪಟ್ಟಣಕ್ಕೆ ಪೂರೈಸಲಾಗುತ್ತದೆ. ಯಾವುದೇ ವಾರ್ಡ್‌ನಲ್ಲಿ ನೀರಿನ ಕೊರತೆ ಎದುರಾದರೆ ಟ್ಯಾಂಕರ್ ಮೂಲಕ ಪೂರೈಸಲಾಗುವುದು.
-ಎರಗುಡಿ ಶಿವಕುಮಾರ, ಮುಖ್ಯಾಧಿಕಾರಿ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT