ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಗಳ ನಿರ್ಮಾಣಕ್ಕೆ ₹1020 ಕೋಟಿ: ಜಿಗಜಿಣಗಿ

ವಿಜಯಪುರ ಜಿಲ್ಲೆಯ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ
Last Updated 16 ಆಗಸ್ಟ್ 2022, 13:43 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಹಾದುಹೋಗಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆಕೇಂದ್ರ ಸರ್ಕಾರವು ₹1020 ಕೋಟಿ ಹೆಚ್ಚುವರಿ ಅನುದಾನ ನೀಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 548ಬಿ ವಿಜಯಪುರ ಪ್ರವಾಸಿ ಮಂದಿರ ಸಮೀಪದ ವೃತ್ತ(ಇಟಗಿ ಪೆಟ್ರೋಲ್‌ ಪಂಪ್‌)ನಿಂದ ತೆಲಸಂಗ ಕ್ರಾಸ್‌ ವರೆಗೆ 39 ಕಿ.ಮೀ ರಸ್ತೆಯನ್ನು ₹250 ಕೋಟಿ ಮೊತ್ತದಲ್ಲಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ನಂ.561 ‘ಎ’ ಮಹಾರಾಷ್ಟ್ರ ಗಡಿಯಿಂದ ಸಿದ್ದಾಪುರ–ಅರಕೇರಿ–ವಿಜಯಪುರ ವರೆಗೆ 12 ಕಿ.ಮೀ. ರಸ್ತೆಯನ್ನು ₹69.53 ಕೋಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ನಂ.548‘ಬಿ’ ಮಹಾರಾಷ್ಟ್ರ ಗಡಿಯಿಂದ ಇಂಡಿ ತಾಲ್ಲೂಕಿನ ಮಣ್ಣೂರ, ಹಿರೇಬೇವನೂರ, ಇಂಡಿ(ಬೈಪಾಸ್‌), ರೂಗಿ, ಅಥರ್ಗಾ(ಬೈಪಾಸ್‌), ನಾಗಠಾಣ, ಅಲಿಯಾಬಾದ್‌ ಮೂಲಕ ಹಾದು ವಿಜಯಪುರ ನಗರದ ವರ್ತುಲ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರದ ವರೆಗೆ 82 ಕಿ.ಮೀ. ರಸ್ತೆಯನ್ನು ₹650 ಕೋಟಿಯಲ್ಲಿ ನಿರ್ಮಾಣ ಮಾಡಲು ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ವಿಜಯಪುರದ ಗಣೇಶ ನಗರ ಜಂಕ್ಷನ್‌ಗೆ(ಮನಗೂಳಿ ರೋಡ್‌) ₹ 50 ಕೋಟಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕಾಮಗಾರಿ ಮಂಜೂರಾತಿ ಹಂತದಲ್ಲಿದ್ದು, ಶೀಘ್ರದಲ್ಲೆ ಟೆಂಡರ್‌ ಕರೆಯಲಾಗುವುದು ಎಂದು ತಿಳಿಸಿದರು.

ಷಟ್ಪಥ ಶೀಘ್ರ:

ಸೋಲಾ‍ಪುರ–ವಿಜಯಪುರ ನಡುವೆ ವಾಹನಗಳ ದಟ್ಟಣೆ ಅಧಿಕ ಇರುವುದರಿಂದ ಈಗಿರುವ ಚತುಷ್ಪಥವನ್ನು ಷಟ್ಪಥವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಸಚಿವ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಆಗಬೇಕಿದೆ:

ಶಿರಡೋಣ–ಲಿಂಗಸೂಗೂರು ನಡುವಿನ 180 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮಾಡುವುದು ಬಾಕಿ ಇದೆ. ಈ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಶೀಘ್ರದಲ್ಲೇ ಈ ಹೆದ್ದಾರಿ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ವಿಜಯ್‌ ಜೋಶಿ ಇದ್ದರು.

‘ಕೆಲವರ ಪಾಲಿಗೆ ನಾನು ಸಿಂಹಸ್ವಪ್ನ’

ವಿಜಯಪುರ: ‘ಜಿಲ್ಲೆಯಲ್ಲಿ ಕೆಲವರಿಗೆ ನಾನು ಸಿಂಹಸ್ವಪ್ನವಾಗಿದ್ದೇನೆ’ ಎಂದುಸಂಸದ ರಮೇಶ ಜಿಗಜಿಣಗಿ ಹೇಳಿದರು.

ಜಿಲ್ಲೆಯಲ್ಲಿ ಸಂಸದರು ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂದು ಸದಾ ನನ್ನನ್ನು ಟೀಕಿಸುತ್ತಿರುತ್ತಾರೆ. ಅವರಿಗೆ ಸದ್ದುಗದ್ದಲವಿಲ್ಲದೇ ಅಭಿವೃದ್ಧಿ ಕಾರ್ಯಗಳ ಮೂಲಕ ಪ್ರತ್ಯುತ್ತರ ನೀಡುತ್ತಿದ್ದೇನೆ ಎಂದರು.

ಗೋಳಗುಮ್ಮಟ, ಉಪಲಿ ಬುರ್ಜ್‌ ಕಟ್ಟಿಸಿರುವುದು ನಾನೇ ಎಂದು ಸುಳ್ಳು ಹೇಳುವುದಿಲ್ಲ. ಶೌಚಾಲಯ ಕಟ್ಟಿಸಿ ಹೆಸರು ಬರೆಸಿಕೊಳ್ಳುವಷ್ಟು ಕನಿಷ್ಠ ಪ್ರಚಾರಕ್ಕೆ ನಾನು ಎಂದೂ ಹೋಗಿಲ್ಲ ಎಂದು ತಿರುಗೇಟು ನೀಡಿದರು.

‘ಎಂದೂ ಅಧಿಕಾರದ ಹಿಂದೆ ಹೋಗಬೇಡ. ಅಧಿಕಾರ ಎಂಬುದು ಬಿಸಿಲ ಕುದುರೆ ಇದ್ದಂತೆ’ ಎಂದುನನ್ನ ರಾಜಕೀಯ ಗುರು ರಾಮಕೃಷ್ಣ ಹೆಗಡೆ ಹೇಳುತ್ತಿದ್ದರು. ಅವರ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ನಾನು ಎಂದೂ ಅಧಿಕಾರದ ಹಿಂದೆ ಹೋಗಿಲ್ಲ. ಅಧಿಕಾರವೇ ನನ್ನ ಹಿಂದೆ ಬಂದಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಜಾಹೀರಾತಿನಲ್ಲಿ ಪ್ರಥಮ ಪ್ರಧಾನಿ ನೆಹರೂ ಹೆಸರು, ಭಾವಚಿತ್ರ ಕೈಬಿಟ್ಟಿರುವ ವಿಚಾರ ಹಾಗೂ ಅಂಬೇಡ್ಕರ್‌ಗಿಂತ ಸಾವರ್ಕರ್‌ಗೆ ಮೊದಲ ಆದ್ಯತೆ ನೀಡಿರುವರಾಜ್ಯ ಸರ್ಕಾರದ ಕ್ರಮದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT