ಭಾನುವಾರ, ಸೆಪ್ಟೆಂಬರ್ 19, 2021
25 °C

ವಿಜಯಪುರ: ಉದಯೋನ್ಮುಖ ವನ್ಯಜೀವಿ ಛಾಯಾಗ್ರಾಹಕ ಧ್ರುವ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಜಯಪುರದ ಮಂದಿಗೆ ಹಸಿರು, ಕಾಡು, ಮೇಡು, ಬೆಟ್ಟಗುಡ್ಡ, ಪ್ರಾಣಿ, ಪಕ್ಷಿ, ನದಿ, ಸರೋವರ ಎಂಬುದು ದೂರದ ಮಾತು. ಆದರೂ, ಇಂತಹ ಬಯಲು, ಬರ, ನೆರೆಯ ನಾಡಿನಲ್ಲಿ ಹುಟ್ಟಿ ಬೆಳೆದ ಧ್ರುವ ಪಾಟೀಲ್(18) ವನ್ಯಜೀವಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ನಾಡಿನ ಉದಯೋನ್ಮುಖ ವನ್ಯಜೀವಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ.

ಆಫ್ರೀಕಾದ ಮಸಾಯಿಮಾರಾ, ರಾಜಸ್ತಾನದ ರಣತಂಬೂರ್‌ ಸೇರಿದಂತೆ ರಾಜ್ಯದ ಕಬಿನಿ, ಬಂಡೀಪುರ, ದಾಂಡೇಲಿ, ಅಣಸಿ, ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಅಪರೂಪದ ಪ್ರಾಣಿ, ಪಕ್ಷಿಗಳ 10 ಸಾವಿರಕ್ಕೂ ಅಧಿಕ ಛಾಯಾಚಿತ್ರಗಳನ್ನು ತಮ್ಮ ‘ನಿಕಾನ್‌ ಜಿ–7‘ ಕ್ಯಾಮೆರಾದಲ್ಲಿ ಸೆರೆಹಿಡಿದು ಇದೀಗ ನಾಡಿನ ಗಮನ ಸೆಳೆದಿದ್ದಾರೆ.

ಅಷ್ಟೇ ಅಲ್ಲ, 2011ರಲ್ಲಿ ಎಸ್‌ಪಿಪಿಎ (ಸೊಸೈಟಿ ಫಾರ್‌ ಪ್ರೊಟೆಕ್ಷನ್‌ ಪ್ಲಾಂಟ್‌ ಅ್ಯಂಡ್‌ ಅನಿಮಲ್ಸ್‌) ಎಂಬ ವನ್ಯಪ್ರಾಣಿ ಪಕ್ಷಿ, ಗಿಡಮರಗಳನ್ನು ಸಂರಕ್ಷಿಸುವ ಸ್ವಯಂ ಸೇವಾ ಸಂಘಟನೆಯನ್ನು ಕಟ್ಟಿ, ಅದರ ಮೂಲಕ ಶಾಲಾ, ಕಾಲೇಜು ವಿದ್ಯಾರ್ಥಿ, ಯುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಚಿಕ್ಕ ವಯಸ್ಸಿನಲ್ಲೇ ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಧ್ರುವ ಪಾಟೀಲ್ ಅವರು ಅತ್ಯಂತ ಅಪರೂಪದ ಕರಿಚಿರತೆಯ(ಬ್ಲ್ಯಾಕ್‌ ಪ್ಯಾಂ‌ಥರ್‌) ಚಿತ್ರವನ್ನು ಕಬಿನಿ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದಿದ್ದಾರೆ. ಅಷ್ಟೇ ಅಲ್ಲ, ಪಶ್ಚಿಮಘಟ್ಟದ ದಟ್ಟ ಕಾನನದಲ್ಲಿ ಮಾತ್ರ ಕಾಣಸಿಗುವ ‘ಪ್ಯಾರಾಡೈಸ್‌ ಫ್ಲೈ ಕ್ಯಾಚರ್‌’ ಎಂಬ ವಿರಳಾತಿವಿರಳವಾದ ಸುಂದರ ಪಕ್ಷಿಯ ಚಿತ್ರವನ್ನು ವಿಜಯಪುರದಲ್ಲಿ ಸೆರೆ ಹಿಡಿದಿರುವುದು ವಿಶೇಷ.

‘ನಾನು ವನ್ಯಜೀವಿ ಛಾಯಾಗ್ರಾಹಕನಾಗಿ ಗುರುತಿಸಿಕೊಳ್ಳಲು ಮುಖ್ಯ ಕಾರಣ ಕಬಿನಿ ವನ್ಯಧಾಮ. 2013ರಲ್ಲಿ ಅಮ್ಮನ ಜೊತೆ ಕಬಿನಿಗೆ ಪ್ರಥಮ ಬಾರಿಗೆ ಹೋಗಿದ್ದೆ. ಅಲ್ಲಿನ ಪ್ರಾಣಿ, ಪಕ್ಷಿಗಳನ್ನು ನೋಡಿ, ಅವುಗಳ ಸೌಂದರ್ಯಕ್ಕೆ ಮಾರುಹೋದೆ. ಕಬಿನಿ ಒಂದು ರೀತಿ ಜಂಗಲ್‌ಬುಕ್‌ ಹಾಗೆ ನನಗೆ ಕಂಡುಬಂದಿತು. ಅಲ್ಲಿಂದ ಇದುವರೆಗೆ ಸುಮಾರು 24 ಬಾರಿ ಕಬಿನಿಗೆ ಭೇಟಿ ನೀಡಿದ್ದೇನೆ. ಪ್ರತಿ ಬಾರಿ ಭೇಟಿ ನೀಡಿದಾಗಲೂ ವಾರಗಟ್ಟಲೇ ಪ್ರಾಣಿ, ಪಕ್ಷಿಗಳ ಛಾಯಾಚಿತ್ರ ಸೆರೆಹಿಡಿಯಲು ಕಳೆದಿದ್ದೇನೆ. ಈ ಅನುಭವ ಎಂದಿಗೂ ಮರೆಯಲಾಗದು’ ಎನ್ನುತ್ತಾರೆ ಅವರು.

‘ಭವಿಷ್ಯದಲ್ಲಿ ವನ್ಯಪ್ರಾಣಿ, ಪಕ್ಷಿಗಳ ಕುರಿತು ನನ್ನ ಅನುಭವವನ್ನು ಒಳಗೊಂಡ ಪುಸ್ತಕ ಬರೆಯಬೇಕು ಎಂದುಕೊಂಡಿದ್ದೇನೆ’ ಎನ್ನುತ್ತಾರೆ ಧ್ರುವ.

ನಿಕಾನ್‌ ಇಂಡಿಯಾ ಕಂಪನಿಯು ಧ್ರುವ ಅವರು ಸೆರೆಹಿಡಿದಿರುವ ಬ್ಲ್ಯಾಕ್‌ ಪ್ಯಾಂಥರ್‌ ಚಿತ್ರವನ್ನು ಗುರುತಿಸಿ, ತನ್ನ ಅಫೀಸಿಯಲ್‌ ಫೇಜ್‌ನಲ್ಲಿ ರಿಪೋಸ್ಟ್‌ ಮಾಡಿದೆ.

ಧುವ್ರ ಪಾಟೀಲ್‌ ಅವರು ವಿಜಯಪುರದ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಎಂ.ಬಿ.ಪಾಟೀಲ ಮತ್ತು ಆಶಾ ಪಾಟೀಲ ದಂಪತಿಯ ದ್ವಿತೀಯ ಪುತ್ರರಾಗದ್ದಾರೆ. ಸದ್ಯ ಪಿಯುಸಿ ಮುಗಿದ್ದಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ (ಹಾಸ್ಪೆಟಲಿಟಿ ಆ್ಯಂಡ್‌ ಬಿಸಿನೆಸ್‌ ಸ್ಟಡಿ) ಮುಂಬರುವ ಆಗಸ್ಟ್‌ನಲ್ಲಿ ಅಮೆರಿಕಾದ ನ್ಯೂಯಾರ್ಕ್‌ ವಿಶ್ವವಿದ್ಯಾಲಯಕ್ಕೆ ತೆರಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು