ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಕಾಂಗ್ರೆಸ್‌ ನಿಯೋಗದಿಂದ ಡಿಸಿಗೆ ದೂರು

ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ
Last Updated 2 ಡಿಸೆಂಬರ್ 2022, 13:12 IST
ಅಕ್ಷರ ಗಾತ್ರ

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮತದಾರರ ಹೆಸರು ತೆಗೆದು ಹಾಕಿರುವುದು ಸಂಶಯಕ್ಕೆ ಎಡೆ ಮಾಡಿದ್ದು, ಈ ಸಂಬಂಧ ನ್ಯಾಯಯುತ ಪರಿಶೀಲನೆ ನಡೆಯಬೇಕು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ನಿಯೋಗವು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್‌ ನಿಯೋಗವು ಶುಕ್ರವಾರಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿತು.

ಮಹಾನಗರ ಪಾಲಿಕೆ ಚುನಾವಣೆ ವೇಳೆ ಅಲ್ಪಸಂಖ್ಯಾತರು, ದಲಿತರು, ಕೊಳೆಗೇರಿ ನಿವಾಸಿಗಳು ಹಾಗೂ ಒಂದು ಪಕ್ಷದ ಪರ ಒಲವುಳ್ಳ ಸಾವಿರಾರು ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ನ್ಯಾಯಯುತ ಪರಿಶೀಲನೆಯಾಗಬೇಕು ಎಂದು ಎಂ.ಬಿ.ಪಾಟೀಲ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮತದಾರರ ಪಟ್ಟಿಯಿಂದ ಸಾವಿರಾರು ಸಂಖ್ಯೆಯಲ್ಲಿ ಮತದಾರರನ್ನು ಕೈಬಿಡುವ ಮುನ್ನಾ ನಿಯಮಗಳನ್ನು ಪಾಲಿಸದೇ ಇರುವುದು ಗಮನಕ್ಕೆ ಬಂದಿದೆ. ಹೆಸರು ತೆಗೆದುಹಾಕುವ ಮುನ್ನಾ ಸಂಬಂಧಿಸಿದ ಮತದಾರರಿಗೆ ನೋಟಿಸ್‌ ನೀಡಬೇಕು, ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿ ಮಾಹಿತಿ ಪಡೆದ ಬಳಿಕ ಮುಂದಿನ ಕ್ರಮಕೈಗೊಳ್ಳಬೇಕು. ಆದರೆ, ಈ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ ಎಂದರು.

ಪಾಲಿಕೆ ಚುನಾವಣೆ ವೇಳೆ ರಾಜಕೀಯ ಪಕ್ಷಗಳಿಗೆ ನೀಡಿರುವ ಮತದಾರರ ಪಟ್ಟಿಯೇ ಬೇರೆ, ಮತಗಟ್ಟೆ ಸಿಬ್ಬಂದಿಗೆ ನೀಡಿದ ಮತದಾರರ ಪಟ್ಟಿಯೇ ಬೇರೆ ಇದೆ. ಹೀಗಾಗಿಬಹಳಷ್ಟು ಜನ ಮತದಾನದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ವಿಚಾರಿಸಿದಾಗ ಮತದಾರರ ಪಟ್ಟಿ ಪರಿಷ್ಕರಣೆ 1, 2 ಮತ್ತು 3 ಮಾಡಿದ್ದೇವೆ. ಹೀಗಾಗಿ ವ್ಯತ್ಯಾಸ ಕಂಡುಬಂದಿದೆ ಎನ್ನುತ್ತಾರೆ. ಆದರೆ, ಆ ಪರಿಷ್ಕೃತ ಮತದಾರರ ಪಟ್ಟಿ ರಾಜಕೀಯ ಪಕ್ಷಗಳಿಗೆ ಲಭಿಸಿಲ್ಲ ಎಂದು ದೂರಿದರು.

ನಾಗಠಾಣ ಕ್ಷೇತ್ರದ ಮತದಾರರನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ ಎಂದರು.

ಖಾಸಗಿ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ನಗರದ ವಿವಿಧ ವಾರ್ಡ್‌ಗಳಲ್ಲಿ ಮತದಾರರ ಮಾಹಿತಿ ಸಂಗ್ರಹಿಸುತ್ತಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆಯೂ ಪರಿಶೀಲನೆಯಾಗಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇವೆ ಎಂದರು.

ಮತದಾರರ ಪಟ್ಟಿಯಿಂದ ಹೆಸರು ತೆಗೆದಿರುವ ಬಗ್ಗೆ ಯಾರನ್ನೂ ಗುರಿ ಮಾಡುತ್ತಿಲ್ಲ, ವಿವಾದ ಮಾಡುವ ಉದ್ದೇಶವಿಲ್ಲ. ಆದರೆ, ಈ ಅನುಮಾನಗಳಿಗೆಪಾರದರ್ಶಕವಾದ ಸ್ಪಷ್ಟ ಉತ್ತರ ಬೇಕು. ತಪ್ಪುಗಳಾಗಿದ್ದರೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಸಂಗಮೇಶ ಬಬಲೇಶ್ವರ, ಗಂಗಾಧರ ಸಂಬಣ್ಣಿ ಇದ್ದರು.

****

ಪಾಲಿಕೆ ಚುನಾವಣೆ ವೇಳೆ ಸಾವಿರಾರು ಸಂಖ್ಯೆಯ ಮತದಾರರು ಮತದಾನದ ಹಕ್ಕಿನಿಂದ ವಂಚಿತವಾಲು ಏನು ಕಾರಣ ಎಂಬ ಬಗ್ಗೆ ಒಂದು ವಾರದೊಳಗೆ ಜಿಲ್ಲಾಡಳಿತದಿಂದ ಸ್ಪಷ್ಟತೆ ಬೇಕು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು
–ಎಂ.ಬಿ.ಪಾಟೀಲ, ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT