ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಿಧಾರಿಯ ಕೃಷಿಗಾಥೆ: ಪ್ರವಚನದಿಂದ ಕೃಷಿ ಪ್ರಯೋಗದತ್ತ ಸ್ವಾಮೀಜಿ ಪಯಣ

ಕಾವಿಧಾರಿಯ ಕೃಷಿಗಾಥೆ
Last Updated 29 ಏಪ್ರಿಲ್ 2022, 2:23 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಪುರಾಣ ಪ್ರವಚನ, ಮಠ, ಧರ್ಮಸಭೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಿಮೀತಗೊಳ್ಳದೇ ದಾಳಿಂಬೆ, ಬಾಳೆ ಸೇರಿದಂತೆ ವಿವಿಧ ಹಣ್ಣುಗಳ ಕೃಷಿಯಲ್ಲಿ ವಿಶೇಷ ಪ್ರಯೋಗಗಳನ್ನು ಕೈಗೊಳ್ಳುವುದರ ಮೂಲಕ ಇತರರಿಗೆ ಮಾದರಿಯಾದ ಕಾವಿಧಾರೆಯ ಕೃಷಿಗಾಥೆಯಿದು.

ಪಟ್ಟಣದ ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ ಮೂರು ವರ್ಷಗಳಿಂದ ದಾಳಿಂಬೆ ಬೆಳೆಯಲ್ಲಿ ನಿರತವಾಗಿ ಯಶಸ್ಸಿನ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ.

ಈ ಕುರಿತು ಅವರೇ ಹೇಳುವಂತೆ, ‘ಕೃಷಿಯಲ್ಲಿ ನನಗೆ ಮೊದಲಿಂದಲೂ ಆಸಕ್ತಿ ಇದ್ದರಿಂದ ಪುರಾಣ, ಪ್ರವಚನದಿಂದ ಗಳಿಸಿದ ಹಣ ಹಾಗೂ ಸ್ವಲ್ಪ ಹಣ ಸಾಲವಾಗಿ ಪಡೆದು ಇಂಡಿ-ದೇವರಹಿಪ್ಪರಗಿ ನಡುವಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಹತ್ತಿರ 9 ಎಕರೆ ಜಮೀನು ಖರೀದಿಸಿದೆ. ನಂತರ 4 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯುವ ಉದ್ದೇಶದಿಂದ ಕೊಳವೆಭಾವಿ ತೊಡಿಸಿ ಕೃಷಿ ಆರಂಭಿಸಿದೆ. ನನ್ನ ದುರಾದೃಷ್ಟ ಮೊದಲ ವರ್ಷದ ಫಸಲು ಬರುವ ಸಮಯ ಮಳೆ, ಗಾಳಿಯಂತ ಪ್ರಕೃತಿ ವಿಕೋಪಗಳಿಂದ ಬೆಳೆಗೆ ಬೆಲೆ ಬರದೇ ನಿರಾಶೆಯಾಯಿತು. ಎರಡನೆಯ ವರ್ಷ ದಾಳಿಂಬೆ ಉತ್ತಮವಾಗಿ ಬೆಳೆದು, ಕೈಹಿಡಿದು ₹ 7.50 ಲಕ್ಷ ಆದಾಯ ನೀಡಿತು. ಈ ಬಾರಿ ದಾಳಿಂಬೆ ಬೆಳೆ ಕನಿಷ್ಠ ₹ 20 ಲಕ್ಷ ಲಾಭ ತರುವ ನಿರೀಕ್ಷೆಯಿದೆ’ ಎಂದರು.

ಕೃಷಿಗೆ ಅಗತ್ಯದಷ್ಟು ನೀರು ಮುಖ್ಯ. ನಮ್ಮ ಜಮೀನಿನಲ್ಲಿ 4 ಕೊಳವೆಬಾವಿಗಳಿವೆ. ಆದರೆ, ಅವುಗಳಲ್ಲಿ ಕಡಿಮೆ ಇದ್ದ ನೀರನ್ನು ಬಳಕೆ ಮಾಡಿಕೊಂಡು ಕೃಷಿಹೊಂಡ ನಿರ್ಮಿಸಲಾಗಿದೆ. ಹೊಂಡದ ಮೂಲಕ ಹನಿ ನೀರಾವರಿ ಉಪಯೋಗಿಸಿ ಈಗ ದಾಳಿಂಬೆ ಬೆಳೆಯಲಾಗುತ್ತಿದೆ. ಜೊತೆಗೆ ಒಂದು ಎಕರೆ ಪ್ರದೇಶದಲ್ಲಿ 50 ಜವಾರಿ ಪೇರಲ, 50 ಸೀತಾಫಲ, 50 ಎಲಕ್ಕಿಬಾಳೆ, 10 ಬೊರೆಹಣ್ಣು, 10 ನೆಲ್ಲಿಕಾಯಿ, 2 ನೇರಳೆ, 2 ಹಲಸು, 2 ಮೊಸಂಬಿ, 10 ಡ್ರ್ಯಾಗನ್ ಪ್ರೂಟ್ ಹಾಗೂ ಕಬ್ಬುಗಳನ್ನು ಬೆಳೆಯಲಾಗಿದೆ ಎಂದರು.

ವಿಶೇಷವೆಂದರೇ ಇವುಗಳಿಗೆ ಸಾವಯವ ಗೊಬ್ಬರ ಮಾತ್ರ ಬಳಕೆ ಮಾಡಲಾಗಿದೆ. ಇನ್ನೂಳಿದಂತೆ ಯಾವುದೇ ರಾಸಾಯನಿಕಗಳನ್ನು ಬಳಸಿಲ್ಲ. ಆದರೆ, ಈಗೀಗ ಹಣ್ಣಿನ ಗಿಡಗಳು ಬೆಳೆಯುತ್ತಿರುವಂತೆ ನೀರಿನ ಕೊರತೆ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ 70X150 ಅಳತೆಯ ಇನ್ನಷ್ಟು ವಿಶಾಲ ಕೃಷಿ ಹೊಂಡ ನಿರ್ಮಿಸುವ ಯೋಜನೆಯಿದೆ ಎಂದು ಮಾಹಿತಿ ನೀಡಿದರು.

ದಾಳಿಂಬೆ ಹಾಗೂ ಇತರೆ ಹಣ್ಣುಗಳ ಬೆಳೆಗೆ ಸಂಬಂಧಿಸಿದಂತೆ ನಾನು ಈವರೆಗೆ ₹ 30 ಲಕ್ಷದಷ್ಟು ಹಣ ವಿನಿಯೋಗ ಮಾಡಿದ್ದೇನೆ. ಆದರೆ, ಸರ್ಕಾರದಿಂದ ಯಾವುದೇ ಸಬ್ಸಿಡಿಯಾಗಲಿ, ಸಹಾಯವಾಗಲಿ ಪಡೆದಿಲ್ಲ. ದಾಳಿಂಬೆ ಬೆಳೆ ತನ್ನ 3ನೇ ವರ್ಷದಿಂದ ವಿನಿಯೋಗ ಮಾಡಿದ ಹಣ ಮರಳಿಸುತ್ತಿದೆ. ಇದು ನೆಮ್ಮದಿಯ ವಿಚಾರ ಎಂದು ಹೇಳಿದರು.

ಪಟ್ಟಣದಿಂದ 10 ಕಿ.ಮೀ ದೂರವಿರುವ ತೋಟದಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ಕಾವಿತೊಟ್ಟು ಸ್ವತ: ಜಮೀನಿನಲ್ಲಿ ಕೆಲಸ ಮಾಡುವುದನ್ನು ಕಂಡ ಆಸಕ್ತರು ಈಗೀಗ ವಿವಿಧ ಹಣ್ಣುಗಳ ಕುರಿತು ಮಾಹಿತಿ ಪಡೆಯಲು ಬರುತ್ತಾರೆ. ಅವರಿಗೆ ಮೊಸಂಬಿ, ಏಲಕ್ಕಿಬಾಳೆ, ಹಲಸಿನ ಗಿಡಗಳು ಇಂಥ ಮಣ್ಣಿನಲ್ಲಿ ಬೆಳೆಯುತ್ತಿರುವ ಕುರಿತು ಕುತೂಹಲ. ಅವರಿಗೆ ನನ್ನಲ್ಲಿರುವುದು ಒಂದೇ ಉತ್ತರ ನೀವು ನಿಮ್ಮ ಜಮೀನುಗಳಲ್ಲಿ ಪ್ರಯತ್ನ ಮತ್ತು ಪ್ರಯೋಗ ಮಾಡಿ ನಿಮ್ಮಲ್ಲಿಯೂ ಬೆಳೆಯಬಹುದು ಎಂಬುದಾಗಿದೆ.

* ಜಮೀನಿನ ಇನ್ನೂಳಿದ ಪ್ರದೇಶದಲ್ಲಿ ದಾಳಿಂಬೆ, ಲಿಂಬೆ ಬೆಳೆಗಳ ಜೊತೆಗೆ ಬರುವ ದಿನದಲ್ಲಿ ಹೂಗಳನ್ನು ಬೆಳೆಸುವ ವಿಚಾರವಿದೆ . ಜಮೀನಿಗೆ ಬಂದವರಿಗೆ ಮಲೆನಾಡಿನ ಅನುಭವವಾಗಬೇಕು. ಕೃಷಿ ಕುರಿತು ಆಸಕ್ತಿ ಮೂಡಬೇಕು.

–ವೀರಗಂಗಾಧರ ಸ್ವಾಮೀಜಿ,ಸದಯ್ಯನಮಠ,ದೇವರಹಿಪ್ಪರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT