ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದರಕುಂದಿ: ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ

Published 7 ಮೇ 2024, 14:43 IST
Last Updated 7 ಮೇ 2024, 14:43 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಲೋಕಸಭಾ ಚುನಾವಣೆಗೆ ಮಂಗಳವಾರ ನಡೆದ ಮತದಾನ ಪ್ರಕ್ರಿಯೆ ಮತಕ್ಷೇತ್ರದ 245 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಪೂರ್ಣಗೊಂಡಿದೆ.

ನಡಹಳ್ಳಿಯಲ್ಲಿ ಬೂತ್ ಸಂಖ್ಯೆ 58ರಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದ ಇಬ್ಬರು ಮತದಾರರು ಈ ಬಾರಿ ಮತ ಚಲಾಯಿಸಲು ಬಂದಾಗ ಪಟ್ಟಿಯಲ್ಲಿ ಅವರ ಹೆಸರು ಇಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ ಘಟನೆ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ ಪಾಟೀಲ್ ಹಾಗೂ ಗುರುನಾಥ ಬಿರಾದಾರ ಅವರು, ‘ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಾವು ಮತ ಚಲಾಯಿಸಿದ್ದೇವೆ. ಈ ಬಾರಿ ನಮ್ಮ ಹೆಸರು ಪಟ್ಟಿಯಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ. ನಾವು ಇಲ್ಲಿಯವರೇ ಆದರೂ ಮತದಾನದಿಂದ ವಂಚಿರಾಗುವಂತಾಗಿದೆ’ ಎಂದು ಹೇಳಿದರು.

ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರಿನಲ್ಲಿ ಸಂಜೆ 7ರವರೆಗೂ ಮತದಾನ ನಡೆದಿದೆ. ಮುದ್ದೇಬಿಹಾಳದ ಮಹೆಬೂಬ ನಗರದ ಕೆಲವು ಮತಗಟ್ಟೆಗಳಲ್ಲಿ ಸಂಜೆ 6.15ರವರೆಗೂ ಮತದಾನ ನಡೆದಿದೆ. ಮುದ್ದೇಬಿಹಾಳದ ಮತಗಟ್ಟೆ ಸಂಖ್ಯೆ 151ನ್ನು ಸಖಿ ಮತಗಟ್ಟೆಯನ್ನಾಗಿ ರೂಪಿಸಲಾಗಿತ್ತು. ಆದರೆ ಇಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಇಕ್ಕಟ್ಟಾದ ಜಾಗದಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಬೇಕಾಯಿತು. ತಾಲ್ಲೂಕಿನ ಬಿದರಕುಂದಿಯಲ್ಲಿನ ಒಂದು ಮತಗಟ್ಟೆಯಲ್ಲಿ ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅದನ್ನು ಬದಲಿಸಿ ಮತ್ತೊಂದು ಅಳವಡಿಸಿ ಮತದಾನ ಪ್ರಕ್ರಿಯೆ ನಡೆಸಲಾಯಿತು.

ಒಬ್ಬ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ ಬೆಳಗ್ಗೆ 9ರ ವೇಳೆಗೆ ಬಂದಿದ್ದ 200ಕ್ಕೂ ಹೆಚ್ಚು ಜನ ಮತದಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಇದೇ ವೇಳೆ ಇಲ್ಲಿಯ ಮತಗಟ್ಟೆಯನ್ನು ಸೋಠೆ ಗಲ್ಲಿಯ ಸರ್ಕಾರಿ ಉರ್ದು ಶಾಲೆಗೆ ಸ್ಥಳಾಂತರಿಸಬೇಕು ಎಂಬ ಆಗ್ರಹವೂ ಮತದಾರರಿಂದ ಕೇಳಿ ಬಂದವು.

ಕೊಣ್ಣೂರಿನ ಮತಗಟ್ಟೆಯಲ್ಲಿ ಬಿರು ಬಿಸಿಲಿನ ಕಾರಣ ಮತದಾರರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಡಿಕೇಶ್ವರ ಗ್ರಾಮದ ಮತಗಟ್ಟೆಯಲ್ಲಿ ಜಿಲ್ಲ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ದಂಪತಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ನಡಹಳ್ಳಿಯಲ್ಲಿ ಕಾಂಗ್ರಸ್ ಮುಖಂಡ ಶಾಂತಗೌಡ ಪಾಟೀಲ್ ನಡಹಳ್ಳಿ ಹಾಗೂ ಅವರ ಪತ್ನಿ ರಾಜೇಶ್ವರಿ ಪಾಟೀಲ್ ನಡಹಳ್ಳಿ ಮತದಾನ ಮಾಡಿದರು.

ಮತಕ್ಷೇತ್ರದ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದರು. ನಾಲತವಾಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಅಡವಿ ಹುಲಗಬಾಳ, ಶಿವಪುರ, ಅಡವಿ ಸೋಮನಾಳ, ಖಿಲಾರಹಟ್ಟಿ, ಚವನಬಾವಿ, ಮಾವಿನಬಾವಿ, ಬಿಜ್ಜೂರು, ಕಾನಿಕೇರಿ ಘಾಳಪೂಜಿ, ಕೋಳೂರು, ಅಮರಗೋಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಗೋವಾ, ಮಹಾರಾಷ್ಟ್ರ ಕಡೆಗಳಲ್ಲಿ ದುಡಿಯಲು ಗುಳೇ ಹೋಗಿದ್ದ ಕೆಲವು ಕುಟುಂಬದವರು ಮತದಾನ ಮಾಡಿದರು. ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಹಶೀಲ್ದಾರ್ ಬಸವರಾಜ ನಾಗರಾಳ, ಪಿಎಸ್‌ಐ ಸಂಜಯ ತಿಪರೆಡ್ಡಿ ಮಾಹಿತಿ ನೀಡಿದರು.

ಮುದ್ದೇಬಿಹಾಳ ಮತಕ್ಷೇತ್ರದ ನಡಹಳ್ಳಿಯಲ್ಲಿ ಮಂಗಳವಾರ ಮತದಾನದಿಂದ ವಂಚಿತರಾದ ಬಸನಗೌಡ ಪಾಟೀಲ್ ಹಾಗೂ ಗುರುನಾಥ ಬಿರಾದಾರ ತಮ್ಮ ಅಳಲು ತೋಡಿಕೊಂಡರು
ಮುದ್ದೇಬಿಹಾಳ ಮತಕ್ಷೇತ್ರದ ನಡಹಳ್ಳಿಯಲ್ಲಿ ಮಂಗಳವಾರ ಮತದಾನದಿಂದ ವಂಚಿತರಾದ ಬಸನಗೌಡ ಪಾಟೀಲ್ ಹಾಗೂ ಗುರುನಾಥ ಬಿರಾದಾರ ತಮ್ಮ ಅಳಲು ತೋಡಿಕೊಂಡರು
ಮುದ್ದೇಬಿಹಾಳ ಮತಕ್ಷೇತ್ರದ ಕೊಣ್ಣೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಸ್ಕಿ ಫೌಂಡೇಶನ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹಾಗೂ ಬೆಂಬಲಿಗರು ಮತದಾನ ಮಾಡಿದ್ದನ್ನು ಸಾಮೂಹಿಕವಾಗಿ ಪ್ರದರ್ಶಿಸಿದರು
ಮುದ್ದೇಬಿಹಾಳ ಮತಕ್ಷೇತ್ರದ ಕೊಣ್ಣೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಸ್ಕಿ ಫೌಂಡೇಶನ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹಾಗೂ ಬೆಂಬಲಿಗರು ಮತದಾನ ಮಾಡಿದ್ದನ್ನು ಸಾಮೂಹಿಕವಾಗಿ ಪ್ರದರ್ಶಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT