ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಬೇಸಿಗೆಯ ವಿಶ್ರಾಂತಿ ಧಾಮ ಗಗನ ಮಹಲ್..!

ವಿಜಯಪುರಿಗರು ಸೇರಿದಂತೆ, ಪರವೂರಿಗರಿಗೂ ನೆರಳಿನ ಆಸರೆ; ಬಡ ಸಂಘಟನೆಗಳ ಸಭಾಂಗಣವಿದು
Last Updated 12 ಮೇ 2019, 19:46 IST
ಅಕ್ಷರ ಗಾತ್ರ

ವಿಜಯಪುರ:ವಿಜಯಪುರ ಜಿಲ್ಲಾಧಿಕಾರಿ ಕಚೇರಿ, ನಿವಾಸಕ್ಕೆ ಕೂಗಳತೆ ದೂರದಲ್ಲಿರುವ ಐತಿಹಾಸಿಕ ಸ್ಮಾರಕ ಗಗನ ಮಹಲ್‌ನ ಆವರಣ ಬಡವರು, ಮಧ್ಯಮ ವರ್ಗದವರ ಅಚ್ಚುಮೆಚ್ಚಿನ ವಿಶ್ರಾಂತಿಯ ತಾಣವಾಗಿದೆ.

ಪ್ರವಾಸಿ ತಾಣವೂ ಆಗಿರುವ ಇಲ್ಲಿಗೆ ವರ್ಷದ 365 ದಿನವೂ ಜನರ ಭೇಟಿಯಿರುತ್ತದೆ. ವಿಜಯಪುರಿಗರು ಸೇರಿದಂತೆ, ಪರವೂರಿಗರು, ಬಹುತೇಕ ಬಡ ಸಂಘಟನೆಗಳ ಆಶ್ರಯ ತಾಣವೂ ಇದಾಗಿದೆ.

ವಿಜಯಪುರ ಕೇಂದ್ರ ಬಸ್‌ ನಿಲ್ದಾಣಕ್ಕೆ ಸಮೀಪವಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿದೆ. ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಗಾಂಧಿಚೌಕ್‌ಗೂ ಇಲ್ಲಿಂದ ಕೊಂಚ ದೂರವಷ್ಟೇ.

ಕಡು ಬೇಸಿಗೆಯ ಈ ದಿನಗಳಲ್ಲಿ ವಿಜಯಪುರದ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ದಾಖಲಾಗುತ್ತಿದೆ. ವಿವಿಧ ಕೆಲಸಗಳ ನಿಮಿತ್ತ ಮನೆಯಿಂದ ಹೊರ ಬಂದವರು, ಪರವೂರುಗಳಿಂದ ವಿಜಯಪುರಕ್ಕೆ ಬಂದವರು, ಬೇಸಿಗೆಯ ಬಿಸಿಲ ಝಳದಿಂದ ಬಸವಳಿದವರು ಕೊಂಚ ಹೊತ್ತು ವಿಶ್ರಮಿಸಿಕೊಳ್ಳುವುದು ಗಗನ ಮಹಲ್‌ನ ಆವರಣದಲ್ಲೇ.

ಗಗನ ಮಹಲ್‌ನ ಆವರಣ ವಿಶಾಲ ಮೈದಾನ ಹೊಂದಿದೆ. ಎಲ್ಲೆಡೆಯೂ ಹಸಿರ ಹುಲ್ಲುಹಾಸು ನಳನಳಿಸುತ್ತಿದೆ. ಬೃಹತ್ ಮರಗಳ ನೆರಳಿನ ತಂಪಿನಲ್ಲಿ, ಹಸಿರ ಹುಲ್ಲುಹಾಸಿನ ಮೇಲೆ ಮಲಗಿ ನಿತ್ಯವೂ ವಿಶ್ರಮಿಸುವವರ ಸಂಖ್ಯೆಗೆ ಇಲ್ಲಿ ಲೆಕ್ಕವಿಲ್ಲ.

ವಿಜಯಪುರ ಐತಿಹಾಸಿಕ ನಗರವಾದರೂ ಸುಂದರ ಉದ್ಯಾನಗಳಿಲ್ಲ. ಗೋಳಗುಮ್ಮಟ, ಇಬ್ರಾಹಿಂ ರೋಜಾ ಆವರಣದಲ್ಲಿ ಉದ್ಯಾನಗಳಿದ್ದರೂ; ಅಲ್ಲಿ ಪ್ರವೇಶ ಶುಲ್ಕವಿದೆ. ಜತೆಗೆ ನಗರದ ಹೃದಯ ಭಾಗದಿಂದ ಈ ಎರಡೂ ಸ್ಮಾರಕಗಳು ಅನತಿ ದೂರದಲ್ಲಿವೆ.

ಬಾರಾ ಕಮಾನ್‌ ಗಗನ ಮಹಲ್‌ನಂತೆ ಹೃದಯ ಭಾಗದಲ್ಲಿದ್ದರೂ ಹೆಚ್ಚಿನ ಜನರಿಗೆ ಅವಕಾಶವಿರಲ್ಲ. ಇದರಿಂದ ಬಹುತೇಕರು ಗಗನ ಮಹಲ್ ಆವರಣವನ್ನೇ ತಮ್ಮ ನೆಚ್ಚಿನ ತಾಣವನ್ನಾಗಿಸಿಕೊಂಡಿದ್ದಾರೆ. ಮಧ್ಯಾಹ್ನದ ವೇಳೆ ಹಲವರು ವಿಶ್ರಾಂತಿಯ ತಾಣವನ್ನಾಗಿ ಮಾಡಿಕೊಂಡರೆ, ಮುಸ್ಸಂಜೆ ವೇಳೆ ಸಾಕಷ್ಟು ಮಂದಿ ಕುಟುಂಬದೊಂದಿಗೆ ಭೇಟಿಯಿತ್ತು ವಿರಮಿಸುತ್ತದೆ.

ಮುಂಜಾನೆಯ ಸಮಯ ವಿವಿಧ ಸಂಘಟನೆಗಳ ಸಭೆ ಜರುಗುವುದು ಇಲ್ಲಿಯೇ. ಹೋರಾಟಗಳ ನಿರ್ಣಯ ಅಂಗೀಕಾರವಾಗುವುದು ಇದೇ ಉದ್ಯಾನದ ನೆಲದಲ್ಲಿ. ಮುಂಜಾನೆಯಿಂದ–ಮುಸ್ಸಂಜೆಯವರೆಗೂ ಒಟ್ಟಾರೆ ಗಗನ ಮಹಲ್‌ ಚಟುವಟಿಕೆಯ ಕೇಂದ್ರವಾಗಿರುತ್ತದೆ.

‘ಎಲೆಕ್ಟ್ರಿಕಲ್‌ ಸಾಮಗ್ರಿ ಖರೀದಿಗೆಂದು ಬಂದಿದ್ದೆ. ಬಿಸಿಲು ಭಾಳ ಆಯ್ತು. ಸುತ್ತಾಟ ಸಂಕಟವಾಯ್ತು. ತಕ್ಷಣವೇ ಗಗನ ಮಹಲ್‌ ನೆನಪಾಯ್ತು. ಬಸ್‌ ನಿಲ್ದಾಣದಿಂದ ಇಲ್ಲಿಗೆ ನಡೆದು ಬಂದು ವಿಶ್ರಮಿಸಿಕೊಳ್ಳುತ್ತಿರುವೆ. ತಾಸಿಗೂ ಹೆಚ್ಚಿನ ಅವಧಿ ಇಲ್ಲಿಯೇ ವಿಶ್ರಾಂತಿ ಪಡೆದು, ಬಿಸಿಲ ಝಳ ಕೊಂಚ ತಗ್ಗಿದ ಬಳಿಕ ನನ್ನ ಕೆಲಸಕ್ಕೆ ಮುಂದಾಗುವೆ’ ಎಂದು ಕೂಡಗಿಯ ಶಿವರಾಯ ಬಿರಾದಾರ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೋಳಗುಮ್ಮಟ, ಇಬ್ರಾಹಿಂ ರೋಜಾ ಆವರಣಕ್ಕೆ ಹೋಗಿ ವಿಶ್ರಾಂತಿ ಪಡೆಯುತ್ತೇವೆ ಎಂದರೇ ಶುಲ್ಕ ಪಾವತಿಸಬೇಕು. ಮುಂಜಾನೆ 6ರಿಂದ ಮುಸ್ಸಂಜೆ 6ರವರೆಗೂ ಗಗನ ಮಹಲ್‌ ಆವರಣ ಪ್ರವೇಶ ಉಚಿತ. ಆದ್ದರಿಂದ ಬಿಸಿಲ ಬೇಗೆಗೆ ಬಸವಳಿದ ತಕ್ಷಣ ಎಲ್ಲಿಯೇ ಇದ್ದರೂ; ನನ್ನ ಆಟೊ ತಿರುಗೋದು ಗಗನ ಮಹಲ್‌ ಕಡೆಗೆ.

ಇಲ್ಲಿನ ಪ್ರಶಾಂತ ವಾತಾವರಣದಲ್ಲಿ ಕೆಲ ಹೊತ್ತು ಸ್ನೇಹಿತರೊಟ್ಟಿಗೆ ಹರಟೆ ಹೊಡೆದು, ನಿದ್ದೆ ಮಾಡಿ, ವಿಶ್ರಮಿಸಿಕೊಂಡ ಬಳಿಕವೇ ಮತ್ತೆ ನನ್ನ ಕೆಲಸ ಆರಂಭವಾಗೋದು’ ಎನ್ನುತ್ತಾರೆ ವಿಜಯಪುರದ ಆಟೊ ಚಾಲಕ ಮಹಿಬೂಬ್‌ ಸಿಂದಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT